Mysore
23
moderate rain

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಕಷ್ಟಕಾಲಕ್ಕೆ ಕೂಡಿ ಇಡಿ

ಸೌಮ್ಯ ಕೋಠಿ, ಮೈಸೂರು

ಉದ್ಯಾನವನದಲ್ಲಿ ಇಬ್ಬರು ಸ್ನೇಹಿತರು ವಾಯುವಿಹಾರದಲ್ಲಿ ಇರುತ್ತಾರೆ . ರಾಮುವಿನ ಮುಖ ಬಹಳ ಬಾಡಿರುತ್ತದೆ. ಇದನ್ನು ಗಮನಿಸಿದ ಚಂದ್ರು ರಾಮುವಿಗೆ ಕೇಳುತ್ತಾನೆ, ಏಕೆ ಮುಖ ಬಾಡಿದೆ, ಏನಾಯ್ತು ಎಂದು. ಆಗ ರಾಮು ದುಃಖದ ಧ್ವನಿಯಲ್ಲಿ ನನ್ನ ಹೆಂಡತಿ ಇದ್ದಕ್ಕಿದ್ದ ಹಾಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಅವಳಿಗೆ ಓಪನ್ ಹಾರ್ಟ್ ಸರ್ಜರಿ ಆಗಬೇಕು ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಬಹಳ ದುಃಖಿತನಾಗಿ ಚಂದ್ರುವಿನ ಕೈ ಹಿಡಿದು ಅಲ್ಲಿಯೇ ಇದ್ದಂತಹ ಬೆಂಚಿನ ಮೇಲೆ ಕೂರುತ್ತಾನೆ .

ಚಂದ್ರು ಈ ಕಾಯಿಲೆಗಳೆಲ್ಲ ವಯೋಸಹಜ, ಅದರಲ್ಲಿ ಬೇಜಾರು ಮಾಡಿಕೊಳ್ಳೋದು ಏನು ಇದೆ. ಕೆಲವು ಆರೋಗ್ಯವನ್ನು ನಾವು ನೋಡಿಕೊಳ್ಳಬಹುದು ಆದರೆ ವಯೋ ಸಹಜವಾದ ಕಾಯಿಲೆಗಳಿಗೆ ಏನೂ ಮಾಡಲು ಆಗುವುದಿಲ್ಲ, ನಾವು ಅನುಭವಿಸಲೇಬೇಕು ಎಂದು ಸಮಾಧಾನ ಮಾಡುತ್ತಾನೆ .

ಕೊನೆಗೆ ಹೀಗೆ ವಿಚಾರಿಸುತ್ತಾ ಯಾವ ಆಸ್ಪತ್ರೆ, ಏನಾಯ್ತು ಎಂದು ನಿಧಾನವಾಗಿ ಮಾತನಾಡಲು ಶುರು ಮಾಡುತ್ತಾನೆ. ಆಗ ರಾಮು ಇಲ್ಲೇ ಪಕ್ಕದಲ್ಲಿ ಇರುವಂತಹ ಕಾವೇರಿ ಹಾಸ್ಪಿಟಲ್‌ಗೆ ತೋರಿಸುತ್ತಿದ್ದೇನೆ, ನಾಳೆಯೇ ಅಡ್ಮಿಟ್ ಮಾಡಬೇಕು. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಆಸ್ಪತ್ರೆಯ ಬಿಲ್ ಭರಿಸುವುದೇ ದೊಡ್ಡದಾಗಿದೆ ಎಂದು ಯೋಚಿಸುತ್ತಾನೆ. ಆಗ ಚಂದ್ರು ಏನಾಯ್ತು? ನಿನ್ನ ನಿವೃತ್ತಿ ಹಣವನ್ನೆಲ್ಲ ಏನು ಮಾಡಿದೆ ಎಂದು ಜೋರು ಮಾಡುತ್ತಾನೆ. ಆಗ ರಾಮು ಇಲ್ಲಪ್ಪ ನಿವೃತ್ತಿ ಸಮಯದಲ್ಲಿ ಬಂದಂತಹ ಎಲ್ಲ ಹಣವನ್ನು ನಾನು ನನ್ನ ಮಕ್ಕಳಿಗೆ ನಾನು ಇರುವಾಗಲೇ ಅವರು ಚೆನ್ನಾಗಿರಲಿ ಎಂದು ಹಂಚಿಬಿಟ್ಟೆ ಎನ್ನುತ್ತಾನೆ. ಆಗ ಚಂದ್ರು ಕೋಪದಿಂದ ಬುದ್ಧಿ ಇಲ್ವಾ ನಿನಗೆ ಎಂದು ಗದರಿಸುತ್ತಾ ಸ್ವಲ್ಪವಾದರೂ ಹಣ ಇಟ್ಟುಕೊಳ್ಳಬೇಕಲ್ವಾ ಎಂದಾಗ, ರಾಮು ಮಕ್ಕಳೇ ನನ್ನ ಆಸ್ತಿ ಅಲ್ಲವೇನೋ ಅಂತ ಕಣ್ತುಂಬಿ ಹೇಳುತ್ತಾನೆ.

ಹೌದು ಮಕ್ಕಳೇ ನಿಮ್ಮ ಆಸ್ತಿ. ಆದರೆ ಈಗಿನ ಪರಿಸ್ಥಿತಿಯಲ್ಲಿ ನಾವು ಸ್ವಲ್ಪ ಸ್ವಾರ್ಥಿಗಳಾಗಿದ್ದೇವೆ ಎಂದರೂ ಸರಿ. ನಾವು ನಮಗಾಗಿ, ನಮ್ಮ ಆರೋಗ್ಯಕ್ಕಾಗಿ ಸ್ವಲ್ಪ ಹಣವನ್ನು ನಿಜವಾಗಿಯೂ ಇಟ್ಟುಕೊಳ್ಳುವುದು ಒಳ್ಳೆಯದು. ಕಾರಣ ಮಕ್ಕಳು ನಮಗಾಗಿ ಏನೇ ಮಾಡಿದರೂ ಮಕ್ಕಳಿಗೆ ನಾವು ಎಂದೂ ಸಹ ಹೊರೆಯಾಗಬಾರದು. ನಿವೃತ್ತಿಯ ಹಣವನ್ನೆಲ್ಲಾ ಮಕ್ಕಳಿಗೆ ಪಾಲು ಮಾಡುವಾಗ ಅದರ ಜೊತೆಹೆಂಡತಿ ಮತ್ತು ನನಗೂ ಎಂದು ಪಾಲು ಮಾಡಿ ನಿಮಗಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಕಾರಣ ಒಂದು ವಯೋಸಹಜ ಕಾಯಿಲೆಗಳು ಕಾಡಬಹುದು ಹಾಗೂ ಮಕ್ಕಳು ದೂರದ ಊರಿನಲ್ಲಿ ಇರುತ್ತಾರೆ. ಹಾಗಾಗಿ ಕೆಲವೊಮ್ಮೆ ಸ್ವಾರ್ಥವಾಗಿ ಯೋಚನೆ ಮಾಡಿದರೂ ಖಂಡಿತವಾಗಿ ತಪ್ಪಿಲ್ಲ. ಕಾರಣ ಅದು ನಿಮ್ಮ ನಿವೃತ್ತಿಯ ಹಣ ನಿಮ್ಮ ಕಷ್ಟಕ್ಕೆ ನೀವು ಇಟ್ಟುಕೊಳ್ಳುವುದರಲ್ಲಿ ಖಂಡಿತವಾಗಿಯೂ ತಪ್ಪಿಲ್ಲ .

ಅದರಲ್ಲೂ ಮಧ್ಯಮ ವರ್ಗದ ಜನ ನನ್ನ ಮಕ್ಕಳು ಚೆನ್ನಾಗಿರಲಿ ಎಂದು ನಿವೃತ್ತಿಯ ಎಲ್ಲಾ ಹಣವನ್ನು ಮಕ್ಕಳಿಗಾಗಿ ಹಂಚಿಬಿಡುವುದು ಅವರು ಮಾಡುವ ತಪ್ಪು. ಅವರ ಕಷ್ಟಕ್ಕೆ ಸ್ವಲ್ಪವೂ ಹಣ ಇಟ್ಟುಕೊಳ್ಳುವುದಿಲ್ಲ. ಹೌದು,ಮಕ್ಕಳ ಮೇಲೆ ಪ್ರೀತಿ ಸಹಜ, ಆದರೆ ಭಗವದ್ಗೀತೆಯಲ್ಲಿ ಕೃಷ್ಣ ಹೇಳುವ ಹಾಗೆ ನನ್ನನ್ನು ನಾನು ಮೊದಲು ಪ್ರೀತಿಸಬೇಕು. ಸ್ವಲ್ಪ ಹಣವನ್ನಾದರೂ ನಿಮಗಾಗಿ ಆಪತ್ಕಾಲದ ಧನವಾಗಿ ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಸಮಸ್ಯೆಗೆ ನಿಮ್ಮ ಬಳಿಯೇ ತಕ್ಷಣ ಪರಿಹಾರ ಸಿಗುತ್ತದೆ. ನಿಮ್ಮ ಚರ ಹಾಗೂ ಸ್ಥಿರ ಆಸ್ತಿಗಳೆಲ್ಲವೂ ಮೊದಲು ನಿಮಗಾಗಿ, ನಂತರ ಬೇಕಾದರೆ ವಿಲ್ಲಿನಲ್ಲಿ ನನ್ನ ಮಕ್ಕಳಿಗೆ ಎಂದು ಬರೆಯಿರಿ. ಒಮ್ಮೆ ನಿಧಾನವಾಗಿ ಯೋಚಿಸಿ.

Tags:
error: Content is protected !!