Mysore
22
broken clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ರಾಜ್ಯದಲ್ಲಿ 92 ಪಾಕ್‌ ಪ್ರಜೆಗಳು : 4 ಜನ ಮಾತ್ರ ತಕ್ಷಣ ದೇಶ ತೊರೆಯಬೇಕು ; ಗೃಹ ಸಚಿವಾಲಯ

india vs Pak

ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರಿಂದ ಪ್ರವಾಸಿಗರ ಮೇಲೆ ನಡೆದ ದಾಳಿಯ ಬಳಿಕ ತಕ್ಕ ಪಾಠ ಕಲಿಸಲು ನಿರ್ಧರಿಸಿರುವ ಭಾರತ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿರುವ ವೀಸಾ ರದ್ದುಗೊಳಿಸಿದೆ.

ಪಾಕ್ ಪ್ರಜೆಗಳನ್ನು ಪತ್ತೆಹಚ್ಚಿ ವಾಪಸ್ ಕಳುಹಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ. ಕರ್ನಾಟಕದ ಮೈಸೂರು, ಉತ್ತರ ಕನ್ನಡ, ತುಮಕೂರು ಮತ್ತು ದಾವಣಗೆರೆ ಮುಂತಾದ ಕಡೆಗಳಲ್ಲಿ ಒಟ್ಟು 92 ಜನ ಪಾಕ್ ಪ್ರಜೆಗಳು ವಾಸವಿದ್ದಾರೆ ಎಂದು ಆಯಾ ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆಯ ಕಾರ್ಯಾಚರಣೆಯಲ್ಲಿ ತಿಳಿದು ಬಂದಿದೆ. ಆದರೆ ಆ ಪೈಕಿ 4 ಜನ ಮಾತ್ರ ತಕ್ಷಣ ಭಾರತ ತೊರೆಯಬೇಕಿದೆ. ಇನ್ನುಳಿದ 88 ಪಾಕ್ ಪ್ರಜೆಗಳು ದೀರ್ಘಾವಧಿ ವೀಸಾ (LTV) ಹೊಂದಿದ್ದು, ಮುಂದಿನ ಆದೇಶದವರೆಗೂ ಕಾಯಬಹುದಾಗಿದೆ.

ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಪಾಕಿಸ್ತಾನ ಮೂಲದ 12 ಮಹಿಳೆಯರು ಹಾಗೂ ಮೂವರು ಮಕ್ಕಳು ಸಹಿತ ಒಟ್ಟು 15 ಜನ ವಾಸವಿದ್ದಾರೆ. ಉದ್ಯೋಗದ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದವರ ಪೈಕಿ ಕೆಲವರು ಪಾಕ್ ಪ್ರಜೆಗಳನ್ನ ವಿವಾಹವಾಗಿ ಕರೆತಂದು ಜೀವನ ಮಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ್, ”ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಆದೇಶದ ಪ್ರಕಾರ ದೀರ್ಘಾವಧಿಯ ವೀಸಾ ಹೊಂದಿರುವವರು ಅದರಲ್ಲಿಯೂ ಪ್ರಮುಖವಾಗಿ ಭಾರತೀಯರನ್ನ ವಿವಾಹವಾಗಿ ಬಂದವರು ವಾಪಸಾಗಬೇಕಾದ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ ಮತ್ತು ದೀರ್ಘಾವಧಿ ವೀಸಾ ಹೊಂದಿರದ ಪಾಕ್ ಪ್ರಜೆಗಳನ್ನ ಕಡ್ಡಾಯವಾಗಿ ವಾಪಸ್ ಕಳಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.

ಭಾರತೀಯ ವಲಸೆ ಕಾನೂನುಗಳ ಪಾಲನೆಯ ಉದ್ದೇಶದಿಂದ ಯಾವುದೇ ವಿದೇಶಿ ಪ್ರಜೆ ಭಾರತಕ್ಕೆ ಬಂದಾಗ ಪ್ರಾದೇಶಿಕ ನೋಂದಣಿ ಕೇಂದ್ರ (FRRO) ದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. FRROದಲ್ಲಿ ನೋಂದಾಯಿಸಿಕೊಂಡಾಗ ವೀಸಾ ವಿಸ್ತರಣೆ, ಅಗತ್ಯ ಕಾನೂನು ಸೇವೆ, ಬೇರೆ ದೇಶಗಳಿಗೆ ಪ್ರಯಾಣದ ಸಂದರ್ಭದಲ್ಲಿ ಅನುಕೂಲವಾಗುತ್ತದೆ ಮತ್ತು ಅಗತ್ಯ ಸಂದರ್ಭಗಳಲ್ಲಿ ತನಿಖಾ ಸಂಸ್ಥೆಗಳು ವಿದೇಶಿಗರನ್ನ ಸಂಪರ್ಕಿಸಲು ನೆರವಾಗುತ್ತದೆ. ಸದ್ಯದ ಸಂದರ್ಭದಲ್ಲಿ ಅಂಥಹ ನೋಂದಾಯಿಸಿಸಲ್ಪಟ್ಟಿರುವ ಪಾಕ್ ಪ್ರಜೆಗಳ ಮಾಹಿತಿಯನ್ನ ಆಯಾ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳಿಗೆ ನೀಡಲಾಗಿದ್ದು, ಗಡಿಪಾರು ಪ್ರಕ್ರಿಯೆ ನಡೆಸಲಾಗುತ್ತಿದೆ.

ಗಡಿಪಾರು ಪ್ರಕ್ರಿಯೆ ಹೇಗೆ: ಪ್ರಾದೇಶಿಕ ನೋಂದಣಿ ಕೇಂದ್ರ (FRRO) ದಲ್ಲಿ ನೋಂದಾಯಿಸಲ್ಪಟ್ಟಿರುವ ಪಾಕ್ ಪ್ರಜೆಗಳ ಕುರಿತು ಈಗಾಗಲೇ ಆಯಾ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ಅದರನ್ವಯ ಆಯಾ ಜಿಲ್ಲೆಗಳಲ್ಲಿರುವ ಪಾಕ್ ಪ್ರಜೆಗಳು ಭಾರತ ತೊರೆಯಬೇಕಿದೆ. ನೋಂದಾಯಿಸಲ್ಪಡದ ಹಾಗೂ ಅನಧಿಕೃತವಾಗಿ ನೆಲೆಸಿರುವವರನ್ನ ಸ್ಥಳಿಯ ಪೊಲೀಸರು ಪತ್ತೆಹಚ್ಚಿ ಬಂಧಿಸಿ ಬಂಧನ ಕೇಂದ್ರದಲ್ಲಿರಿಸುತ್ತಾರೆ. ನಂತರ ರಾಜ್ಯ ಗೃಹ ಇಲಾಖೆಯಿಂದ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ.

ಕೇಂದ್ರ ಗೃಹ ಸಚಿವಾಲಯದ ಮೂಲಕ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗುತ್ತದೆ. ಬಳಿಕ ರಾಯಭಾರ ಕಚೇರಿಯ ಅಧಿಕಾರಿಗಳು ವೆರಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ ತಮ್ಮ ಪ್ರಜೆಗಳನ್ನ ವಾಪಾಸ್ ಕಳಿಸಬೇಕಾಗುತ್ತದೆ.

Tags:
error: Content is protected !!