ಹನೂರು: ಹನೂರು ತಾಲೂಕು ಕೇಂದ್ರದಲ್ಲಿ ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿ ಪೂಜೆ ರದ್ದು ಮಾಡಿ ವಾಪಸ್ ತೆರಳಿದ ಘಟನೆ ಜರುಗಿದೆ.
ಹನೂರು ನೂತನ ತಾಲೂಕು ಕೇಂದ್ರದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲು ಹನೂರು ಹೋಬಳಿ ವ್ಯಾಪ್ತಿಯ ಹುಲಸುಗುಡ್ಡೆ ಬೋರೆ ಸಮೀಪ ನಿವೇಶನ ಗುರುತಿಸಲಾಗಿತ್ತು.
ಪ್ರಸಕ್ತ ಸಾಲಿನಲ್ಲಿ ನಡೆದ ಬಜೆಟ್ ನಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲು ಘೋಷಣೆ ಮಾಡಲಾಗಿತ್ತು.ಇದಲ್ಲದೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್ 24ರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಅನುಮೋದನೆ ದೊರೆತಿತ್ತು.
ಹನೂರು ಪಟ್ಟಣ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿ ನಂತರ ಪ್ರದರ್ಶನದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಮಾಡಲು ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸ್ಥಳದಲ್ಲಿಯೇ ಇದ್ದ ಪ್ರಾದೇಶಿಕ ಆಯುಕ್ತ ರಮೇಶ್ ರವರನ್ನು ಪ್ರಜಾಸೌಧ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆಯೇ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಎಂ.ಆರ್ ಮಂಜುನಾಥ್ ಅವರು ಇನ್ನು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಕಾರಿನಿಂದ ಕೆಳಕ್ಕಿಳಿಯದೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಭೂಮಿ ಪೂಜೆ ಮಾಡುವುದು ಸರಿಯಾದ ಕ್ರಮವಲ್ಲ, ಇದು ಪಟ್ಟಣದಿಂದ ಸುಮಾರು ದೂರದಲ್ಲಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಈ ಪ್ರದೇಶದ ಸುತ್ತ ಮುತ್ತ ಯಾವುದೇ ವಾಸದ ಮನೆಗಳಿಲ್ಲ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ಪಟ್ಟಣಕ್ಕೆ ಹತ್ತಿರವಿರುವ ಸರ್ಕಾರಿ ನಿವೇಶನಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ಕಾಮಗಾರಿಗೆ ಚಾಲನೆ ನೀಡೋಣ ಎಂದು ಚಾಮರಾಜನಗರ ಜಿಲ್ಲಾ ಕೇಂದ್ರದತ್ತ ವಾಪಾಸ್ ತೆರಳಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ನೂತನ ಹನೂರು ತಾಲೂಕು ಕೇಂದ್ರದಲ್ಲಿ ೮.೬೦ ಕೋಟಿ ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ದೊರೆತಿದೆ. ಆದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಭೂಮಿ ಪೂಜೆಗೆ ಏಕೆ ದಿನಾಂಕ ನಿಗದಿ ಮಾಡಬೇಕಾಗಿತ್ತು. ಮುಖ್ಯಮಂತ್ರಿಗಳು ಕಾಮಗಾರಿಗೆ ಚಾಲನೆ ನೀಡದೆ ವಾಪಸ್ ತೆರಳಿರುವುದರಿಂದ ಇನ್ನಿಲ್ಲದ ಚರ್ಚೆಗಳು ನಡೆಯುತ್ತದೆ ಎಂದು ಪ್ರಜ್ಞಾವಂತ ನಾಗರಿಕರು ಆಕ್ರೋಶ ಹೊರ ಹಾಕಿದ್ದಾರೆ.
ಸಾರ್ವಜನಿಕರಿಗೆ ನಿರಾಸೆ: ಹನೂರು ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ಎಂಟು ವರ್ಷಗಳು ಕಳೆದರು ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಕಚೇರಿಗಳು ಹನೂರು ತಾಲೂಕಿಗೆ ವರ್ಗಾವಣೆ ಆಗಿರಲಿಲ್ಲ, ಬಜೆಟ್ ನಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲು ಘೋಷಣೆ ಮಾಡಿದಾಗ ಸಾರ್ವಜನಿಕರಿಗೆ ಅತಿಯಾದ ಸಂತಸವಾಗಿತ್ತು. ಆದರೆ ಶುಕ್ರವಾರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡದೆ ಮುಖ್ಯಮಂತ್ರಿಗಳು ವಾಪಸ್ ತೆರಳಿರುವುದು ಮತ್ತೆ ನಿರಾಸೆ ಉಂಟಾಗಿದೆ.





