ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಸಂಶೋಧಕ, ಗೋಕಾಕ್ ಚಳುವಳಿಯ ಮುಂಚೂಣಿಯ ನಾಯಕರಾಗಿದ್ದ ಡಾ.ಪಿ.ವಿ ನಾರಾಯಣ ಅವರು (82) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ನಗರದ ಜಯನಗರದಲ್ಲಿರುವ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಪಿವಿ ನಾರಾಯಣ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ 1942ರ ಡಿ.18 ರಂದು ಜನಿಸಿದರು. ಮೈಸೂರು ವಿವಿಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ, ಬೆಂಗಳೂರು ವಿವಿಯಿಂದ “ವಸನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಪ್ರಬಂಧಕ್ಕೆ ಪಿಎಚಹ್‌ಡಿ ಪದವಿ ಪಡೆದಿದ್ದರು.
ಕರ್ನಾಟಕದ ಹಿತಚಿಂತಕರಾಗಿ, ಕನ್ನಡ ಪರ ಹೋರಾಟಗಾರರಾಗಿ, ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದರು. ವಿಮರ್ಶೆ, ಕಾಯಕತ್ವ, ಚಂಪೂಕವಿಗಳು, ವಚನ ಚಳುವಳಿ, ವಚನ ವ್ಯಾಸಂಗ, ಪಂಪ ರಾಮಾಯಣ, ಅಂತರ, ವಿಕಾಸ, ಶೋಧನೆ ಸೇರದಂತೆ ಒಟ್ಟು 45ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.





