Mysore
17
clear sky

Social Media

ಶುಕ್ರವಾರ, 23 ಜನವರಿ 2026
Light
Dark

ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಿಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ ಭಟ್ ಭೇಟಿ

ಮಂಡ್ಯ: ಜಿಲ್ಲೆಯ ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್‌ ಭಟ್‌ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.

ಅಧ್ಯಕ್ಷರ ಜೊತೆಗೆ ಸದಸ್ಯರಾದ ಕೆ.ವೆಂಕಟಗೋಡಿ ಅವರು ಸೇರಿ ಶ್ರೀ.ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಾರಿ ವೃತ್ತಿಪರ ಕಾಲೇಜು ವಿದ್ಯಾರ್ಥಿ ನಿಲಯ ಹಾಗೂ ಚಾಮುಂಡೇಶ್ವರಿ ನಗರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಾರಿ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದರು.

ಅಡುಗೆ ಮನೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಶುಚಿ ಹಾಗೂ ರುಚಿಯಾದ ಆಹಾರ ನೀಡಬೇಕು. ಮೆಸ್ ಸಮಿತಿಯು ಪ್ರತಿ ದಿನ ಆಹಾರ ಸಾಮಗ್ರಿಗಳನ್ನು ಅಡುಗೆ ಮಾಡುವ ಸಿಬ್ಬಂದಿಗಳಿಗೆ ನೀಡುವಾಗ ಪರಿಶೀಲನೆ ನಡೆಸಬೇಕು. ಯಾವುದೇ ತೊಂದರೆ ಇದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ನಂತರ, ಹಾಜರಿದ್ದ ವಿದ್ಯಾರ್ಥಿಗಳ ಬಳಿ ಮೆಸ್ ಸಮಿತಿ ರಚನೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಡುಗೆ ತಯಾರಿಸುವ ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿಗಳ ಜೊತೆ ಮಾತನಾಡಿ ಪ್ರತಿ ಮಾಹೆ ಸಂಬಳ ದೊರಕುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡರು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದ ಅವರು ಖುದ್ದು ವಿದ್ಯಾರ್ಥಿಗಳ ಕೊಠಡಿಗೆ ತೆರಳಿ ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು.

ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆಗಳು ಹಾಗೂ ಚಳಿಗಾಲದಲ್ಲಿ ಗೀಸರ್ ಅವಶ್ಯಕತೆ ಇದ್ದು, ಈ ಕುರಿತಂತೆ ಜಿಲ್ಲಾ ಪಂಚಾಯತ್ ಅಥವಾ ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಪರಿಶೀಲನೆಯ ಸಂದರ್ಭದಲ್ಲಿ ಹಾಜರಾತಿ ಹಾಗೂ ಸ್ಟಾಕ್ ರಿಜಿಸ್ಟರ್ ಗಳನ್ನು ಸಹ ವೀಕ್ಷಿಸಿದರು.

ಪರಿಶೀಲನೆ ವೇಳೆ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ್ ಪೂಜರ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!