ರಶ್ಮಿ ಕೋಟಿ
ಕೆಲವರನ್ನು ನಾವು ಕ್ಷಣ ಕಾಲ ಭೇಟಿ ಮಾಡಿದರೂ ಅವರು ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರುತ್ತಾರೆ. ಆ ಸಮಯ ಕಳೆದ ಬಳಿಕವೂ ಅದನ್ನು ಮೆಲುಕು ಹಾಕುವಂತೆ ಮಾಡುತ್ತಾರೆ. ಅಂತಹದ್ದೇ ಅನುಭವ ನನಗಾದದ್ದು ಇತ್ತೀಚೆಗೆ ನಾನು ಟಿಬೆಟಿಯನ್ನರ ಆಧ್ಯಾತ್ಮಿಕ ಗುರು ಹದಿನಾಲ್ಕನೇ ದಲೈಲಾಮ ಅವರನ್ನು ಬೈಲಕುಪ್ಪೆಯ ತಾಶಿ ಲೊಂಪೊ ಬೌದ್ಧ ಮಂದಿರದಲ್ಲಿ ಭೇಟಿಯಾದಾಗ. ಅವರನ್ನು ಒಮ್ಮೆಯಾದರೂ ಭೇಟಿಯಾಗುವ ಅವಕಾಶಕ್ಕಾಗಿ ನಾನು ಕಾತುರದಿಂದ ಎದುರು ನೋಡುತ್ತಿದ್ದೆ. ಆ ಆಸೆ ನನ್ನಲ್ಲಿ ಮೊಳಕೆ ಒಡೆದದ್ದು ಮೂರು ವರ್ಷಗಳ ಹಿಂದೆ ನಾನು ನೇಪಾಳ ಪ್ರವಾಸವನ್ನು ಕೈಗೊಂಡಾಗ.
ನೇಪಾಳದಲ್ಲಿ ನಾನು ಭೇಟಿ ನೀಡಿದ ಪ್ರವಾಸಿ ತಾಣಗಳಲ್ಲಿ ‘ಗೊರಿಲ್ಲಾ ಟ್ರೆಕ್ಕಿಂಗ್’ ಕೂಡ ಒಂದಾಗಿತ್ತು. ಅದು ೧೯೯೬ರಿಂದ ೨೦೦೬ರವರೆಗೆ ನೇಪಾಳದ ಮಾವೋವಾದಿಗಳು ನಡೆಸಿದ ಸುದೀರ್ಘ ಸಶಸ ಕ್ರಾಂತಿಯ ಇತಿಹಾಸವನ್ನು ಪ್ರವಾಸಿಗರಿಗೆ ಪರಿಚಯಿಸುವ ಚಾರಣವಾಗಿತ್ತು. ಪೂರ್ವಕ್ಕೆ ಧೌಲಗಿರಿ ಹಿಮಾಲಯ ಶ್ರೇಣಿಯ ಸುಂದರ ನೋಟ, ಪಶ್ಚಿಮಕ್ಕೆ ಅಪಿ ಹಿಮಾಲ್ ಮತ್ತು ಸೈಪಾಲ್ ಶಿಖರದಗಳ ಮಧ್ಯೆ, ಮೋಡಗಳೊಂದಿಗೆ ಸಾಗುತ್ತಿರುವಾಗ ನಮ್ಮ ಮಾರ್ಗದರ್ಶಿ (ಗೈಡ್) – ಸ್ವತಃ ಮಾವೋವಾದಿ- ನೇಪಾಳದಲ್ಲಿ ಒಂದು ದಶಕದವರೆಗೆ ನಡೆದ ಯುದ್ಧದ ಕಥೆಯನ್ನು ಹೇಳಲಾರಂಭಿಸಿದರು. ಆ ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಆ ಹಿಂಸೆಯ ನಡುವೆ ಶಾಂತಿಯ ಬೆಳಕಾಗಿ ನಿಂತವರು ದಲೈಲಾಮಾ. ೨೦೦೧ರಲ್ಲಿ, ಅವರು ಮಾವೋವಾದಿ ನಾಯಕರನ್ನು ಭೇಟಿಯಾಗಿ ಹಿಂಸೆ ತೊರೆದು ಸಮಾಧಾನದ ಮಾರ್ಗವನ್ನು ಅನುಸರಿಸುವಂತೆ ಪ್ರೇರೇಪಿಸಿದರು. ಅಂತಿಮವಾಗಿ, ಬೃಹತ್ ಜನಾಂದೋಲನದ ಮೂಲಕ ಪ್ರಜಾಪ್ರಭುತ್ವ ಪುನಃ ಸ್ಥಾಪನೆಯಾಯಿತು.
ಇದನ್ನು ವಿವರಿಸುತ್ತಿದ್ದ ನಮ್ಮ ಗೈಡ್ ಮುಗುಳ್ನಕ್ಕು ಹೇಳಿದ್ದು,“ಆದರೆ ಇಂದು ಚೀನಾದ ಪ್ರಭಾವಕ್ಕೊಳಗಾಗಿರುವ ನಮ್ಮ ಸರ್ಕಾರ ದಲೈ ಲಾಮಾ ಅವರ ಅನುಯಾಯಿಗಳು ಅವರ ಹುಟ್ಟುಹಬ್ಬವನ್ನು ಆಚರಿಸದಂತೆ ನಿರ್ಬಂಧ ಹೇರುತ್ತದೆ, ದಲೈಲಾಮಾ ಅವರಿಗೆ ಲುಂಬಿಣಿ ಪ್ರವೇಶಿಸದಂತೆ ಮಾಡುತ್ತದೆ. ಅವರನ್ನು ಈ ದೇಶದ ಗಡಿಯೊಳಗೆ ಪ್ರವೇಶಿಸದಂತೆ ಮಾಡಬಹುದು. ಆದರೆ ಜನರ ಮನಸ್ಸುಗಳಿಂದ ಹೇಗೆ ತೊಡೆದುಹಾಕಲು ಸಾಧ್ಯ?” ಎಂದರು.
ಆ ಮಾತು ಅಕ್ಷರಶಃ ನಿಜವಾಗಿತ್ತು. ಚೀನಾದ ಪ್ರಭಾವದಿಂದ ನೇಪಾಳದ ಸರ್ಕಾರವು ದಲೈಲಾಮಾ ಅವರ ವಿರುದ್ಧ ನಿಂತರೂ, ಜನರ ಹೃದಯದಲ್ಲಿ ಅವರ ಬಗೆಗಿನ ಗೌರವ ಅಮರವಾಗಿತ್ತು. ರಾಜರು ಬದಲಾದರು, ಆಡಳಿತ ಕ್ರಮಗಳು ಬದಲಾದವು, ಆದರೆ ದಲೈಲಾಮಾ ಅವರ ಮಾನವೀಯತೆಯ ಸಂದೇಶ ಮಾತ್ರ ಅಲ್ಲಿಯ ಜನರಲ್ಲಿ ಜೀವಂತವಾಗಿತ್ತು.
ಹಾಗೆ ನೋಡಿದರೆ ರಾಜಕೀಯ ಪರಿಸ್ಥಿತಿಯ ಕಾರಣದಿಂದ ದಲೈಲಾಮಾ ತಮ್ಮ ತಾಯ್ನಾಡು ಟಿಬೆಟ್‌ನಿಂದ ದೂರ ಉಳಿದಿದ್ದಾರೆ. ೧೯೫೬ರಿಂದ ೧೯೭೪ರವರೆಗೆ, ಟಿಬೆಟಿಯನ್ ಗೊರಿಲ್ಲಾ ಸೇನೆ ಚೂಷಿ ಗ್ಯಾಂಡ್ರುಕ್ ಚೀನಾದ ಆಕ್ರಮಣದ ವಿರುದ್ಧ ಹೋರಾಡಿತು. ೧೯೫೯ರಲ್ಲಿ ಟಿಬೆಟ್‌ನಲ್ಲಿ ಚೀನಾದ ಆಕ್ರಮಣ ತೀವ್ರಗೊಂಡಾಗ, ದಲೈಲಾಮಾ ತಾವು ಹಿಂಸಾಚಾರದ ಮೂಲಕ ಏನನ್ನೂ ಸಾಽಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರು.
ಚೀನಾ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿದ್ದ ಟಿಬೆಟಿಯನ್ ಗೊರಿಲ್ಲಾ ಸೇನೆ (ಚೂಷಿ ಗ್ಯಾಂಡ್ರುಕ್) ಹೋರಾಟವನ್ನು ನಿಲ್ಲಿಸುವ ಆಯ್ಕೆ ಮಾಡಿಕೊಂಡಿತು. ಇದರಿಂದ ಟಿಬೆಟ್‌ನಲ್ಲಿ ಹಿಂಸೆ ಕಡಿಮೆಯಾಯಿತು, ಆದರೆ ಅವರು ತಾಯ್ನಾಡನ್ನು ತೊರೆದು ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು.
೧೯೫೯ರಿಂದ ಭಾರತ ಅವರ ಹೊಸ ಮನೆ ಆಯಿತು. ಅವರು ಭಾರತದ ಧರ್ಮಶಾಲಾದಲ್ಲಿ ನೆಲೆಸಿ, ಶಾಂತಿಯ ಸಂದೇಶವನ್ನು ಹರಡಲು ಮುಂದಾದರು. ಅವರ ಈ ಮನೋಭಾವಕ್ಕೆ ೧೯೮೯ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದ್ದು ಈಗ ಇತಿಹಾಸ.
ಅಂದು ನೇಪಾಳದಲ್ಲಿ ಅವರ ಬಗ್ಗೆ ಕೇಳಿದ ನಂತರ, ನಾನು ಅವರ ಭೇಟಿಗಾಗಿ ಹಾತೊರೆಯುತ್ತಿದ್ದೆ. ಹೀಗೇ ವರ್ಷಗಳು ಕಳೆದವು. ಇತ್ತೀಚೆಗೆ ಅವರು ಬೈಲಕುಪ್ಪೆಗೆ ಆಗಮಿಸುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ, ನಾನು ಸಂಬಂಧಪಟ್ಟರನ್ನು ಸಂಪರ್ಕಿಸಿ ಭೇಟಿಯ ದಿನ ಹಾಗೂ ಸಮಯವನ್ನು ನಿಗದಿ ಮಾಡಿಕೊಂಡ ನಂತರ ಅಲ್ಲಿಗೆ ಧಾವಿಸಿದೆ.
ಬೈಲಕುಪ್ಪೆಯ ತಾಶಿ ಲೊಂಪೊ ಬೌದ್ಧ ವಿಹಾರದಲ್ಲಿ ದಲೈಲಾಮಾ ಅವರ ಭೇಟಿಗಾಗಿ ಅನೇಕ ಭಕ್ತರು ಹಾಗೂ ಅನುಯಾಯಿಗಳು ನೆರೆದಿದ್ದರು. ಅಲ್ಲಿದ್ದವರು ಟಿಬೆಟಿಯನ್ ಸಮುದಾಯದವರು ಮಾತ್ರ ಆಗಿರಲಿಲ್ಲ; ಬದಲಾಗಿ ಇಂಗ್ಲೆಂಡ್, ಜಪಾನ್, ಅಮೆರಿಕ, ಭಾರತ ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ್ದ ನಾನಾ ಧರ್ಮ, ನಾನಾ ಜಾತಿಗೆ ಸೇರಿದ್ದವರು ಹಾಜರಿದ್ದರು.
ಅದನ್ನು ಕಂಡು ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿದವು- ಯಾವ ಕಾರಣಕ್ಕೆ ದೇಶ ವಿದೇಶಗಳಿಂದ ಜನರು ಅವರೆಡೆಗೆಆಕರ್ಷಿತರಾಗುವುದು? ಅವರಿಗೆ ಸಂದಿರುವ ನೊಬೆಲ್ ಪುರಸ್ಕಾರದಿಂದಲೇ? ಅವರ ಉಪದೇಶಗಳಿಂದಲೇ? ಅಥವಾ ಅವರ ಧಾರ್ಮಿಕ ಹಾದಿಯೇ ಕಾರಣವೇ?
ಈ ಪ್ರಶ್ನೆಗಳು ನನ್ನನ್ನು ಕಾಡುತ್ತಿರುವಾಗ ನನ್ನ ಸರದಿ ಬಂದಿತು… ಅವರು ತಮ್ಮ ಹತ್ತಿರ ಬಂದ ಪ್ರತಿಯೊಬ್ಬ ವ್ಯಕ್ತಿಯ ಕೈ ಹಿಡಿದು, ತಮ್ಮ ಹಣೆಗಿಟ್ಟು ಆಶೀರ್ವದಿಸುತ್ತಿದ್ದರು. ಅಲ್ಲಿನ ಪ್ರತಿಯೊಬ್ಬರಿಗೂ ಅವರು ಸಮಾನವಾಗಿ ಸ್ಪಂದಿಸುತ್ತಿದ್ದರು-ಯಾವುದೇ ಭೇದ ಭಾವವಿಲ್ಲದೆ. ಜಾತಿ, ಮತ, ಧರ್ಮ, ದೇಶ, ಲಿಂಗ ಇತ್ಯಾದಿ ಬದುಕಿನ ಎಲ್ಲ ಬಗೆಯ ಎಲ್ಲೆಗಳೂ ಆ ಒಂದು ಸರಳ ನಡವಳಿಕೆಯಲ್ಲಿ ಕರಗಿಹೋಗಿದ್ದವು.
ನಾನು ಅವರನ್ನು ಸಮೀಪಿಸುತ್ತಿದ್ದಂತೆ ಅವರು ನನ್ನ ಕೈ ಹಿಡಿದು ತಮ್ಮ ಹಣೆಸ್ಪರ್ಶ ಮಾಡಿದರು. ಆ ಕ್ಷಣದಲ್ಲಿ ನನ್ನೊಳಗೆ ಅವರ ಅಂತಃಕರಣ, ಅವರ ಮಾನವೀಯತೆಯ ಸ್ಪರ್ಶವಾದಂತಾಯಿತು. ಅದು ಕೇವಲ ಶಾರೀರಿಕ ಸ್ಪರ್ಶವಲ್ಲ- ಅದು ನಿರ್ಭೀತಿಯ ಪ್ರೇರಣೆ, ಸಹಾನುಭೂತಿಯ ಸ್ಪಂದನೆ, ಪರಿಶುದ್ಧ ಮಾನವೀಯತೆಯ ಸ್ಪರ್ಶ. ಆ ಕ್ಷಣದಲ್ಲಿ ನನಗೆ ಭಾಸವಾದದ್ದು ಅವರನ್ನು ವಿಶೇಷವಾಗಿಸುವುದು ಅವರ ಮಾನವೀಯತೆ, ಅವರ ಶುದ್ಧ ಪ್ರೀತಿ ಮತ್ತು ಸಹಾನುಭೂತಿ. ದಲೈಲಾಮಾ ಕೇವಲ ಒಬ್ಬ ಧಾರ್ಮಿಕ ನಾಯಕರಲ್ಲ, ಅವರು ಮಾನವತೆಯ ಜೀವಂತ ಬೆಳಕು. ಆ ಬೆಳಕು ರಾಷ್ಟ್ರದಾಚೆಗೆ, ಧರ್ಮದಾಚೆಗೆ, ಎಲ್ಲ ಮಿತಿಗಳನ್ನೂ ಮೀರಿ ಹರಡಿದೆ.
ನಾನು ಅಂದುಕೊಂಡಂತೆ ಅವರ ಮಹತ್ವ ನೊಬೆಲ್ ಪ್ರಶಸ್ತಿಯಲ್ಲ, ಅವರ ಹುದ್ದೆಯೂ ಅಲ್ಲ. ಅವರ ಜೀವನದ ರೀತಿಯೇ ಅವರ ಶ್ರೇಷ್ಠತೆಯನ್ನು ರೂಪಿಸುತ್ತದೆ. ರಾಜರು ಬಂದರೂ, ಹೋದರೂ, ಆಡಳಿತ ಬದಲಾದರೂ, ರಾಜ್ಯಗಳ ಗಡಿಗಳು ಮಾರ್ಪಟ್ಟರೂ, ಮಾನವೀಯತೆ ಮಾತ್ರ ಶಾಶ್ವತ. ದಲೈಲಾಮಾ ರಾಜರಂತೆ ಆಳಲಿಲ್ಲ, ಆದರೆ ಇಡೀ ಜಗತ್ತಿನ ಮನಸ್ಸನ್ನು ಗೆದ್ದಿದ್ದಾರೆ.
” ನಾನು ಅಂದುಕೊಂಡಂತೆ ದಲೈಲಾಮಾ ಅವರ ಮಹತ್ವ ನೊಬೆಲ್ ಪ್ರಶಸ್ತಿಯಿಂದಲ್ಲ. ಅವರ ಮಾನವೀಯತೆ ಹಾಗೂ ಜೀವನದ ರೀತಿಯೇ ಅವರನ್ನು ಶ್ರೇಷ್ಠವಾಗಿಸುತ್ತದೆ.”
rashmikoti@andolana.in





