Mysore
29
scattered clouds

Social Media

ಬುಧವಾರ, 14 ಜನವರಿ 2026
Light
Dark

ಕಾಲ್ತುಳಿತ ದುರಂತದ ಜೊತೆ ನದಿ ನೀರಿನ ‘ವಿಷ’ದ ರಾಜಕೀಯ

ನೂರಾ ನಲವತ್ತ ನಾಲ್ಕು ವರ್ಷಗಳ ನಂತರ ಬಂದಿರುವ ಮಹಾ ಕುಂಭಮೇಳ ಭಾರತೀಯ ಜನತಾ ಪಕ್ಷದ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ಉತ್ಸಾಹದ ಮೇರೆಯನ್ನು ಹೆಚ್ಚಿಸಿದೆ. ಸುಮಾರು ೪೦ ಕೋಟಿ ಜನರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುವ ಸಂಭ್ರಮವನ್ನು ಸಹಜವಾಗಿಯೇ ನಿರೀಕ್ಷೆ ಮಾಡಲಾಗಿದೆ. ದುರದೃಷ್ಟವಶಾತ್ ಕುಂಭ ಮೇಳದಲ್ಲಿ ಎರಡು ಬಾರಿ ಕಾಣಿಸಿಕೊಂಡ ಅಗ್ನಿ ದುರಂತ ಮತ್ತು ಮೌನಿ ಅಮಾವಾಸ್ಯೆ ದಿನ ಸಂಭವಿಸಿದ ಕಾಲ್ತುಳಿತದಿಂದ ೩೦ ಭಕ್ತರ ಸಾವು, ಅರವತ್ತಕ್ಕೂ ಹೆಚ್ಚು ಮಂದಿಯು ಗಾಯಗೊಂಡ ಘಟನೆ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಜಂಘಾಬಲವನ್ನೇ ಅಲುಗಾಡಿಸಿಬಿಟ್ಟಿದೆ. ಈ ದುರಂತ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳನ್ನು ಮಾತ್ರವಲ್ಲ, ಇಡೀ ದೇಶದ ಜನರಲ್ಲಿ ಆತಂಕ ಉಂಟು ಮಾಡಿದ್ದನ್ನು ಅಲ್ಲಗಳೆಯಲಾಗದು.

ಲಕ್ಷಾಂತರ ಭಕ್ತರು ಸೇರುವ ಇಂತಹ ಧಾರ್ಮಿಕ ಮೇಳಗಳಲ್ಲಿ ವಿಶೇಷವಾಗಿಕುಂಭಮೇಳಗಳಲ್ಲಿ ಕಾಲ್ತುಳಿತದಂತಹ ಅವಘಡಗಳು ಸಂಭವಿಸಿರುವ  ಇತಿಹಾಸವಿದೆ. ಜನವರಿ ೨೯ರಂದು ಸಂಭವಿಸಿದ ದುರಂತದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ನ್ಯಾಯಾಂಗ ತನಿಖೆಗೆ ಆಜ್ಞೆ ಹೊರಡಿಸಿದೆ. ನ್ಯಾಯಾಂಗ ತನಿಖೆಯು ಈಗ ಆರಂಭವಾಗಿದೆ. ಈ ದುರಂತಕ್ಕೆ ಯಾರು ಕಾರಣರು ಎನ್ನುವುದಕ್ಕಿಂತ ವ್ಯವಸ್ಥೆಯಲ್ಲಾದ ದೋಷ ಮತ್ತು ಮುಂದೆ ಇಂತಹ ಮಹಾಮೇಳಗಳಲ್ಲಿ ಅನುಸರಿಸಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗೆಗೆ ಸಹಜವಾಗಿ ತನಿಖಾ ಆಯೋಗ ಹಲವು ಶಿಫಾರಸು ಮಾಡುವುದನ್ನು ನಿರೀಕ್ಷಿಸಬಹುದಷ್ಟೇ.

ಕುಂಭಮೇಳದ ಈ ದುರಂತದ ದೋಷಗಳನ್ನು ಹಿಡಿದು ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರವನ್ನು ನಿರೀಕ್ಷೆಯಂತೆ ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಈ ನಡುವೆ ಸಂಸತ್ತಿನ ಬಜೆಟ್ ಅಽವೇಶನ ಈಗ ಶುರುವಾಗಿದ್ದು, ಪ್ರತಿಪಕ್ಷಗಳ ಟೀಕೆಗಳಿಗೆ ಸಂಸತ್ ವೇದಿಕೆ ಕಲ್ಪಿಸಿಕೊಡುತ್ತಿದೆ. ಹೀಗಾಗಿ ಸೋಮವಾರದ ನಂತರ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಆಗುತ್ತಿರುವ ಗದ್ದಲ, ಕೂಗಾಟ ಮತ್ತು ಕೋಲಾಹಲದಿಂದ ಸಂಸತ್‌ನ ಉಭಯ ಸದನಗಳ ಕಲಾಪ ಬಲಿಯಾಗುವ ಸಾಧ್ಯತೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಸಚಿವರು ಮತ್ತು ಸಂಸದರು ಸಹ ಪ್ರತಿಪಕ್ಷಗಳ ವಿರುದ್ಧ ಲಂಗು ಲಗಾಮಿಲ್ಲದೆ ಟೀಕಿಸುತ್ತಿವುದರಿಂದ ಸದನದ ಕಲಾಪ ಸುಗಮವಾಗಿ ನಡೆಯುವುದನ್ನು ನಿರೀಕ್ಷಿಸುವುದು ಕಷ್ಟ.

ಟೀಕೆಗೆ ಒಂದು ಸಣ್ಣ ಕಾರಣ ಸಿಕ್ಕರೂ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷ ಪರಸ್ಪರ ಕೆಸರೆರಚಾಟಕ್ಕೆ ತೊಡೆತಟ್ಟಿ ನಿಂತಿವೆ. ಹಾಗಾಗಿ ಕುಂಭಮೇಳದ ಬಗೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರಾಡಿದ ‘ಕುಂಭಮೇಳದಲ್ಲಿ ಮುಳುಗೇಳಿದರೆ ಬಡತನ ಹೋದೀತೆ’ ಎನ್ನುವ ಮಾತು ಮತ್ತು ಸಂಸತ್‌ನ ಅಧಿವೇಶನವನ್ನು ಉದ್ದೇಶಿಸಿ ಮಾತ ನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ‘ಸುಸ್ತಾಗುವಂತೆ ಸುದೀರ್ಘ ಭಾಷಣವನ್ನು ಈ ಪಾಪದ ಮಹಿಳೆ ಓದಿದ್ದಾರೆ’ ಎನ್ನುವ ಉದ್ಗಾರ ಬಿಜೆಪಿಯ ಟೀಕೆಗೆ ಅಸ್ತ್ರವನ್ನು ಒದಗಿಸಿಕೊಟ್ಟಿದೆ. ಸೋನಿಯಾ ಅವರ ಈ ಅಭಿಪ್ರಾಯಕ್ಕೆ ರಾಷ್ಟ್ರಪತಿ ಭವನವೂ ತನ್ನ ಖೇದ ವ್ಯಕ್ತಪಡಿಸಿರುವುದು ಅಪರೂಪದ ಘಟನೆ. ಅಂದರೆ ಸೋನಿಯಾ ಅವರ ಹಗುರವಾದ ಮಾತುಗಳು ರಾಷ್ಟ್ರಪತಿ ಮುರ್ಮು ಅವರಿಗೆ ನೋವುಂಟು ಮಾಡಿರುವುದು ಇದರಿಂದ ಸ್ಪಷ್ಟ.

ಕೇಂದ್ರದಲ್ಲಿ ಐದು ದಶಕಗಳ ಕಾಲದ ಕಾಂಗ್ರೆಸ್ ಪಕ್ಷದ ಆಳ್ವಿಕೆಯಲ್ಲಿ ನಡೆದಿರುವ ತಪ್ಪುಗಳನ್ನು ನಿರಂತರವಾಗಿ ತೋರಿಸುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಕಾಂಗ್ರೆಸ್ ಇತಿಹಾಸದ ಜನ್ಮ ಜಾಲಾಡುತ್ತಿದ್ದಾರೆ. ಇಂತಹ ವಿಚಾರದಲ್ಲಿ ಬಿಜೆಪಿ ಒಂದು ಸಣ್ಣ ಅವಕಾಶವನ್ನೂ ಕಳೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ಸಿನ ವಿರುದ್ಧ ಜನರಲ್ಲಿ ಕೆಟ್ಟ ಭಾವನೆ ಉಂಟು ಮಾಡುವ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಸೂಕ್ಷ ವಾಗಿ ಗಮನಿಸದ ಕಾಂಗ್ರೆಸ್ ನಾಯಕರು ಅನೇಕ ಪ್ರಕರಣಗಳಲ್ಲಿ ಎಡವಟ್ಟು ಮಾಡಿಕೊಂಡೇ ಅವರ ರಾಜಕೀಯ ನಡೆಯು ಪದೇ ಪದೇ ಮುಗ್ಗುರಿಸುವಂತಾಗಿರುವುದು ವಿಪರ್ಯಾಸ.

ಬಜೆಟ್ ಮಹತ್ವ: ಈ ಮಧ್ಯೆ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು, ಎಂದಿನಂತೆ ಈ ವರ್ಷ ನಡೆಯುವ ಚುನಾವಣೆಗಳ ಮೇಲೆ ಕಣ್ಣಿಡಲಾಗಿದೆ. ಈ ವರ್ಷದ ನವೆಂಬರ್ ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುವುದರಿಂದ ಆ ರಾಜ್ಯಕ್ಕೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ತನ್ನ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಮೊದಲೇ ಬಿಹಾರಕ್ಕೆ ಐವತ್ತು ಸಾವಿರ ಕೋಟಿ ರೂ. ಅನುದಾನವನ್ನು ಘೋಷಿಸಿದ್ದರು. ದೇಶದ ಎಲ್ಲ ಭಾಗಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗಗಳ ಹಿತವನ್ನೂ ಬಯಸುವ ಪ್ರಧಾನಿ ಮೋದಿ ಅವರ ಸರ್ಕಾರದ ಘೋಷ ವಾಕ್ಯದಂತೆ ಬಜೆಟನ್ನು ಮಂಡಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿಕೊಂಡಿದ್ದಾರೆ. ಮಧ್ಯಮ ಮತ್ತು ನೌಕರ ವರ್ಗದ ಹಿತವನ್ನು ಗಮನಿಸಿ ಆದಾಯ ತೆರಿಗೆ ಕಟ್ಟುವ ಮಿತಿಯನ್ನು ೯ ಲಕ್ಷ ರೂ.ಗಳಿಂದ ೧೨ ಲಕ್ಷ ರೂ. ಗಳವರೆಗೆ ವಿನಾಯಿತಿ ನೀಡಲಾಗಿದೆ. ಈ ತೆರಿಗೆ ವಿನಾಯಿತಿ ಸಹಜವಾಗಿ ಮಧ್ಯಮ ವರ್ಗವನ್ನು ಖುಷಿ ಪಡಿಸುವುದಾಗಿದೆ. ಮಧ್ಯಮ ವರ್ಗವು ಬಜೆಟ್ ಎಂದರೆ ತೆರಿಗೆ ವಿನಾಯಿತಿಯನ್ನೇ ನಿರೀಕ್ಷಿಸುವುದು ಸಹಜ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಮಧ್ಯಮ ವರ್ಗದ ಅವಶ್ಯಕತೆಯನ್ನು ಪೂರೈಸುವ ಬಜೆಟ್ ಎನ್ನುವ ಸುಳಿವನ್ನು ತೆರಿಗೆ ವಿನಾಯ್ತಿಯ ಮೂಲಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ಟಿನಲ್ಲಿ ಗರೀಬ್, ಯುವ, ಅನ್ನದಾತ ಮತ್ತು ನಾರಿ ಶಕ್ತಿಗೆ (ಗ್ಯಾನ್) ಹೆಚ್ಚಿನ ಒತ್ತು ನೀಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಕರ್ನಾಟಕ ಸರ್ಕಾರವು ಬಜೆಟ್ ಮಂಡನೆ ಮೊದಲೇ ರಾಜ್ಯದ ವಿವಿಧ ಅಭಿವೃದ್ಧಿಗಾಗಿ ೫,೪೯೫ ಕೋಟಿ ರೂ. ವಿಶೇಷ ಅನುದಾನವನ್ನು ಮತ್ತು ರಾಜ್ಯಕ್ಕೆ ಮಾಮೂಲಿನಂತೆ ಆರು ಸಾವಿರ ಕೋಟಿ ರೂ. ಆರ್ಥಿಕ ನೆರವು ಕೋರುವ ಮನವಿಯನ್ನು ಕೇಂದ್ರದ ಹಣಕಾಸು ಸಚಿವರಿಗೆ ಸಲ್ಲಿಸಿತ್ತು. ಆದರೆ ಈ ಮನವಿಗೆ ಕೇಂದ್ರ ಸರ್ಕಾರ ಯಾವ ಕಿಮ್ಮತ್ತನ್ನೂ ನೀಡಿಲ್ಲ. ಮಾಮೂಲಿನಂತೆ ಕೇಂದ್ರ ಸರ್ಕಾರದ ಉದ್ದಿಮೆಗಳು, ರಕ್ಷಣಾ ಘಟಕಗಳು, ಸಂಶೋಧನಾ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳಿಗೆ ವಾರ್ಷಿಕ ಹಣಕಾಸಿನ ನೆರವನ್ನು ಹೆಚ್ಚಿಸಿದೆ.

ಚುನಾವಣೆ: ಈ ಎಲ್ಲ ಬೆಳವಣಿಗೆಗಳ ನಡುವೆ ಹೊಸದಿಲ್ಲಿಯ ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಹೆಚ್ಚಿದೆ. ಶತಾಯಗತಾಯವಾಗಿ ಹೊಸದಿಲ್ಲಿಯ ಪೂರ್ಣ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿಯು ಮತದಾರರ ಓಲೈಕೆಗೆ ಹತ್ತಾರು ಜನಪ್ರಿಯ ಉಚಿತ ಕಾರ್ಯಕ್ರಮಗಳನ್ನು ತನ್ನ ಸಂಕಲ್ಪ ಪತ್ರದಲ್ಲಿ ಮೂರು ಹಂತಗಳಲ್ಲಿ ಘೋಷಿಸಿದೆ. ಹತ್ತು ವರ್ಷಗಳಿಂದ ನಿರಂತರವಾಗಿ ಆಡಳಿತ ಮಾಡಿಕೊಂಡು ಬಂದಿರುವ ಆಮ್ ಆದ್ಮಿ ಪಕ್ಷವನ್ನು ಇನ್ನಿಲ್ಲದಂತೆ ಮಾಡಬೇಕೆನ್ನುವಂತೆ ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ಮುಖ್ಯ ಗುರಿಯನ್ನಾಗಿಸಿ ಹೊರಟಿದ್ದಾರೆ. ತನಗೆ ನೇರ ಪೈಪೋಟಿಯಂತೆ ಕಂಡಿರುವ ಬಿಜೆಪಿಗೆ ಅಽಕಾರ ಸಿಗದಂತೆ ಮಾಡಲು ಕೇಜ್ರಿವಾಲ್ ಈಗ ಯಮುನಾ ನದಿ ನೀರಿಗೆ ಬಿಜೆಪಿಯ ಹರಿಯಾಣ ಸರ್ಕಾರದ ವಿರುದ್ಧ ‘ನೀರಿನಲ್ಲಿ ವಿಷ‘ ಬೆರೆಸುವ ರಾಜಕೀಯವನ್ನು ಮುನ್ನೆಲೆಗೆ ತಂದಿದ್ದಾರೆ. ಹರಿಯಾಣ ಸರ್ಕಾರವು ದಿಲ್ಲಿಗೆ ಕುಡಿಯುವ ನೀರು ಪೂರೈಸುವ ಯಮುನಾ ನದಿಗೆ ಅಮೋನಿಯಾ ಪ್ರಮಾಣವನ್ನು ಹೆಚ್ಚು ಮಾಡಿ ನದಿ ನೀರನ್ನು ಕಲುಷಿತಗೊಳಿಸುತ್ತಿದೆ. ಇದರಿಂದ ದಿಲ್ಲಿಯ ಜನರ ಆರೋಗ್ಯ ಹಾಳಾಗುತ್ತಿದೆ. ಉದ್ದೇಶಪೂರ್ವಕವಾಗಿ ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಸರ್ಕಾರ ಈ ಯಮುನಾ ನದಿಯನ್ನು ದುರುಪಯೋಗ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು ಚುನಾವಣಾ ಆಯೋಗದ ಕಣ್ಣನ್ನು ಕೆಂಪಗೆ ಮಾಡಿದೆ.

ಯಮುನಾ ನದಿ ನೀರನ್ನು ವಿಷಪೂರಿತವನ್ನಾಗಿ ಮಾಡಲಾಗಿದೆ ಎನ್ನುವುದಕ್ಕೆ ಸಾಕ್ಷಿ ಸಮೇತ ವಿವರ ನೀಡಬೇಕೆಂದು ಚುನಾವಣಾ ಆಯೋಗ ಕೇಜ್ರಿವಾಲ್ ಅವರಿಗೆ ನಿನ್ನೆಯವರೆಗೆ ಗಡುವು ನೀಡಿತ್ತು. ಅದರಂತೆ ಕೇಜ್ರಿವಾಲ್ ತಮ್ಮ ಮಾಹಿತಿಯನ್ನು ಆಯೋಗಕ್ಕೆ ನೀಡಿ ನದಿ ನೀರಿನ ರಾಜಕೀಯಕ್ಕೆ ಇಳಿದಿರುವುದು ಚುನಾವಣಾ ಪ್ರಚಾರದ ವೈಖರಿಯನ್ನು ದಿಕ್ಕನ್ನೇ ಬದಲಾಯಿಸುವಂತೆ ಮಾಡಿದೆ.

ಹಿಮಾಲಯ ಪರ್ವತದ ತಪ್ಪಲಲ್ಲಿರುವ ಉತ್ತರಾಖಂಡ ರಾಜ್ಯದ ಯಮುನೋತ್ರಿಯಲ್ಲಿ ಹುಟ್ಟುವ ಯಮುನಾ ನದಿಯು ಹರಿಯಾಣದ ಮೂಲಕ ದಿಲ್ಲಿಯ ಪ್ರದೇಶದಲ್ಲಿ ಸುಮಾರು ೨೨ ಕಿ.ಮೀ. ಹರಿಯುತ್ತದೆ. ಈ ನದಿಯು ದಿಲ್ಲಿ ತಲುಪುವಷ್ಟರಲ್ಲಿ ಹರಿಯಾಣದಲ್ಲಿ ಕೈಗಾರಿಕೆ ಮತ್ತು ಇತರೆ ಪ್ರದೇಶಗಳ ಕೊಳಚೆಯಿಂದ ಹೆಚ್ಚು ಕಲುಷಿತಗೊಳ್ಳುತ್ತಿದೆ. ಹರಿಯಾಣ ರಾಜ್ಯವು ನದಿಯನ್ನು ಹೆಚ್ಚು ಕಲುಷಿತಗೊಳಿಸುತ್ತಿದೆ ಎನ್ನುವುದು ಕೇಜ್ರಿವಾಲ್ ಅವರ ಆರೋಪ. ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ಗಂಭೀರವಾಗಿ ತೆಗೆದುಕೊಂಡು ಆಮ್ ಆದ್ಮಿ ಪಕ್ಷವು ತನ್ನ ಹತ್ತು ವರ್ಷಗಳ ಆಡಳಿತ ವೈಫಲ್ಯದ ಸೋಲಿನ ಭಯದಿಂದ ನದಿ ನೀರಿನ ವಿಷಯವನ್ನು ಮುನ್ನೆಲೆಗೆ ತಂದಿದೆ ಎಂದು ಪ್ರತ್ಯಾರೋಪಿಸಿದೆ.

” ಈ ಎರಡೂ ಪಕ್ಷಗಳ ಪ್ರಚಾರದ ಜಿದ್ದಾಜಿದ್ದಿನ ನಡುವೆ ಕಾಂಗ್ರೆಸ್ ಮತ್ತೆ ಫೀನಿಕ್ಸ್‌ನಂತೆ ಈ ಚುನಾವಣೆಯಲ್ಲಿ ಮರುಹುಟ್ಟು ಪಡೆಯುತ್ತೇನೆ ಎಂದು ಹೊರಟಿದೆ. ಆದರೆ ಇಂಡಿಯಾ ಮೈತ್ರಿಕೂಟದ ಒಡಕಿನಿಂದ ಕಾಂಗ್ರೆಸ್ಸಿನ ಕಡೆಗೆ ಮತದಾರರ ಒಲವು ಅಷ್ಟೇನೂ ಕಾಣುತ್ತಿಲ್ಲ. ದಿಲ್ಲಿ ಮತದಾರರ ಮನಸ್ಸು ಬಹಿರಂಗಗೊಳ್ಳಲು ಫೆಬ್ರವರಿ ೫ರ ಮತದಾನ ಮತ್ತು ಫಲಿತಾಂಶ ಹೊರಬೀಳುವ ೮ನೇ ತಾರೀಖಿನವರೆಗೆ ಕಾಯಲೇಬೇಕು.”

Tags:
error: Content is protected !!