Mysore
31
few clouds

Social Media

ಗುರುವಾರ, 19 ಫೆಬ್ರವರಿ 2026
Light
Dark

ಸರ್ಕಾರದ ಯೋಜನೆಗಳು ಜನರಿಗೆ ಸದುಪಯೋಗವಾಗಲಿ : ಶಾಸಕ ‌ ಪಿ.ರವಿಕುಮಾರ್

ಮಂಡ್ಯ: ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲೆಗೆ ಒದಗಿಸುವುದು ಜನತಾ ದರ್ಶನದ ಉದ್ದೇಶವಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಇಂದು ಹಳೇ ಬೂದನೂರು ಗ್ರಾಮದಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ಈ ಹಿಂದೆ ಬಸರಾಳು, ಕೆರಗೋಡು ಹೋಬಳಿ ಮಟ್ಟದಲ್ಲಿ ಜನತಾ ದರ್ಶನ ಆಯೋಜಿಸಲಾಗುತ್ತಿತ್ತು, ಸುಮಾರು 5000 ಜನರು ಭಾಗವಹಿಸಿ ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸುತ್ತಿದ್ದರೂ, ಸ್ವೀಕೃತವಾದ ಅರ್ಜಿಗಳನ್ನು ಒಂದು ತಿಂಗಳು ಕಾಲಮಿತಿಯೊಳಗೆ ಪರಿಹರಿಸಲಾಗುತ್ತಿತ್ತು. ಸ್ವೀಕೃತವಾದ ಅರ್ಜಿಗಳಲ್ಲಿ ಸುಮಾರು 90 % ವಿಲೇವಾರಿಯಾಗಿ ಪರಿಹಾರ ಒದಗಿಸಲಾಗಿದೆ. ಶೇ 10 ರಷ್ಟು ಕಾನೂನು ತೊಡಕುಗಳಿಂದ ಪರಿಹರಿಸಲು ಸಾಧ್ಯವಾಗಿಲ್ಲ ಎಂದರು.

ಹೋಬಳಿ ಮಟ್ಟದಲ್ಲಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಗ್ರಾಮ ಮಟ್ಟಕ್ಕೆ ಪರಿವರ್ತಿಸಿ ಇಂದು ಬೂದನೂರು ಗ್ರಾಮದಲ್ಲಿ ಜನತಾ ದರ್ಶನವನ್ನು ಆಯೋಜಿಸಲಾಗಿದೆ. ನಗರ ಪ್ರದೇಶದಲ್ಲೂ ಮನೆ ಮನೆಗಳಿಗೆ ತೆರಳಿ ವಾಡ್೯ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅರ್ಜಿ ಸ್ವೀಕರಿಸಲಾಗುತ್ತಿದೆ.ಈಗಾಗಲೇ 14 ವಾಡ್೯ಗಳಲ್ಲಿ ಮನೆ- ಮನೆ ಭೇಟಿ ಮಾಡಲಾಗಿದೆ ಎಂದರು.

ಬೂದನೂರು ಗ್ರಾಮದಲ್ಲಿ ಈ -ಸ್ವತ್ತು ಆಂದೋಲನವನ್ನು ಹಮ್ಮಿಕೊಂಡು ಕಲಾಮಿತಿಯೊಳಗೆ ಈ- ಸ್ವತ್ತು ವಿತರಣೆಯಾಗಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜನತಾ ದರ್ಶನದಲ್ಲಿ ಇಂದು ಸ್ವೀಕೃತವಾಗಿರುವ ಅರ್ಜಿಗಳನ್ನು ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹರಿಸಲಾಗುವುದು. ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ನೀಡಿ ಒಂದು ತಿಂಗಳೊಳಗೆ ಪರಿಹರಿಸುವಂತೆ ಸೂಚನೆ ನೀಡಲಾಗುವುದು ಎಂದರು.

ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಸುಮಾರು 15000 ಕ್ಕೂ ಹೆಚ್ಚು ಪೌತಿ ಖಾತೆಗಳನ್ನು ಮಾಡಿಕೊಡಲಾಗಿದೆ.
ಗ್ರಾಮ ಮಟ್ಟದಲ್ಲಿ ಪೌತಿ ಖಾತೆ, ಈ ಸ್ವತ್ತು ಆಂದೋಲನ, ಜನತಾ ದರ್ಶನ ಕಾರ್ಯಕ್ರಮ ಆಯೋಜನೆಗಳಿಂದ ಜನರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಮಂಡ್ಯ ತಹಶಿಲ್ದಾರ್ ಶಿವಕುಮಾರ್ ಬಿರಾದರ್, ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

 

Tags:
error: Content is protected !!