ಕೆ.ಬಿ.ರಮೇಶನಾಯಕ
ನಗರಪಾಲಿಕೆಗೆ ಆದಾಯ; ವ್ಯಾಪಾರಿಗಳ ಭದ್ರತೆಗಾಗಿ ಅನಿವಾರ್ಯ
ಮಹಾರಾಜರ ಆಡಳಿತದ ಕಾಲದಲ್ಲಿ ಮೈಸೂರಿನಲ್ಲಿ ನಿರ್ಮಿಸಲಾಗಿರುವ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಿ ಉಳಿಸಬೇಕು ಎನ್ನುವ ಒತ್ತಾಯ ಹಲವು ಕಡೆಯಿಂದ ಬರುತ್ತಿದೆ. ಆದರೆ, ಸಾರ್ವಜನಿಕ ಬಳಕೆಯಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಅಥವಾ ಯಥಾರೂಪದಲ್ಲಿ ಕಾಪಾಡುವುದು ಸಾಧ್ಯ ವಿಲ್ಲ. ಒಂದು ವೇಳೆ ಅವುಗಳನ್ನು ಸಾರ್ವಜನಿಕ ಬಳಕೆಯಿಂದ ಮುಕ್ತವಾಗಿಸಿ, ಮ್ಯೂಸಿಯಂ ಮಾಡಿ ದರೆ ಯಾವುದೇ ರೀತಿಯ ಅಭ್ಯಂತರ ಇರುವುದಿಲ್ಲ.
ಆದರೆ, ಮೈಸೂರಿನ ಲಕ್ಷಾಂತರ ಜನರು ಪಾವತಿಸುವ ತೆರಿಗೆ ಹಣದಿಂದಲೇ ಮಾರುಕಟ್ಟೆಯನ್ನು ನವೀಕರಿಸಿದರೆ ಮಳಿಗೆದಾರರಿಗೆ ಲಾಭವಾಗುತ್ತದೆಯೇ ಹೊರತು ಬೇರೇನೂ ಪ್ರಯೋಜನವಿಲ್ಲ. ಹಲವಾರು ವರ್ಷಗಳಿಂದ ಗುತ್ತಿಗೆ ಹಣದಿಂದಲೇ ಲಕ್ಷಾಂತರ ರೂ. ಸಂಪಾದನೆ ಮಾಡಿರುವ ವ್ಯಾಪಾರಿಗಳು, ಪಾರಂಪರಿಕ ಕಟ್ಟಡದ ಹೆಸರನ್ನು ಮುಂದಿಟ್ಟು ಮಾರುಕಟ್ಟೆ ಉಳಿವಿಗೆ ನಡೆಸಿರುವ ಪ್ರಯತ್ನಕ್ಕೆ ಅವಕಾಶ ಕೊಡದೇ ರಾಜ್ಯ ಸರ್ಕಾರ ಮತ್ತೊಮ್ಮೆ ದಿಟ್ಟ ನಿರ್ಧಾರ ಮಾಡಬೇಕಾಗಿದೆ. ಪಾರಂಪರಿಕ ತಜ್ಞರು, ನ್ಯಾಯಾಲಯ ನೀಡಿರುವ ಆದೇಶವನ್ನು ತುರ್ತಾಗಿ ಪಾಲಿಸುವ ಮೂಲಕ ಭವಿಷ್ಯದಲ್ಲಿ ಮೈಸೂರು ನಗರಪಾಲಿಕೆಯ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಬೇಕಾಗಿದೆ.
ಮೈಸೂರಿನ ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಮೈಸೂರಿನ ಹೃದಯ ಭಾಗದಲ್ಲಿ ರಾಜರ ಕಾಲದಲ್ಲಿ ದೇವರಾಜ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು. ಅಂದಿನ ಕಾಲಕ್ಕೆ ತಕ್ಕಂತೆ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಿಸಿದರೂ, ಸ್ವಾತಂತ್ರ್ಯಾನಂತರದಲ್ಲಿ ಸರಿಯಾದನಿರ್ವಹಣೆ ಇಲ್ಲದೆ ಕೆಲವು ಕಡೆ ಕುಸಿದು ಬೀಳುವಂತಾಯಿತು.
ಅದೇ ರೀತಿ ನಗರ ಬಸ್ ನಿಲ್ದಾಣದ ಎದುರಿನಲ್ಲಿರುವ ಲ್ಯಾನ್ಸ್‌ಡೌನ್ ಕಟ್ಟಡದಲ್ಲೂ ಮಳಿಗೆ ಕುಸಿದು ಅಮಾಯಕ ಜೀವಗಳ ಬಲಿಯಾಗಿದ್ದವು. ಹೀಗಾಗಿ, ಸಿದ್ದರಾಮಯ್ಯ ಅವರು ಪ್ರಥಮ ಬಾರಿಗೆ ಮುಖ್ಯಮಂತ್ರಿ ಯಾಗಿದ್ದ ಕಾಲದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರು ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡವನ್ನು ನೆಲಸಮ ಗೊಳಿಸಿ, ಪುನರ್ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿ ದ್ದರು. ಅದರಂತೆ ಮಹಾ ನಗರಪಾಲಿಕೆಯಲ್ಲೂ ನಿರ್ಣಯವಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಆದರೆ, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ನನೆಗುದಿಗೆ ಬಿತ್ತು. ಪಾರಂಪರಿಕ ಕಟ್ಟಡದ ಹೆಸರಿನಲ್ಲಿ ದೇವರಾಜ ಮಾರುಕಟ್ಟೆಯನ್ನು ಉಳಿಸುವಂತೆ ಮಾತನಾಡುವ ಬಹುತೇಕರ ಕಪಿಮುಷ್ಟಿಯಲ್ಲಿ ಮಳಿಗೆಗಳು ಇವೆ. ಅದಕ್ಕಾಗಿಯೇ ಪುನರ್ ನಿರ್ಮಾಣದ ವಿಚಾರ ಬಂದಾಗಲೆಲ್ಲಾ ಅದನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ.
ಈಗ ನ್ಯಾಯಾಲಯವೇ ಪಾರಂಪರಿಕ ತಜ್ಞರ ವರದಿಯ ಆಧಾರದ ಮೇಲೆ ಮಾರುಕಟ್ಟೆಯನ್ನು ನೆಲಸಮ ಗೊಳಿಸಿ ಪುನರ್ ನಿರ್ಮಾಣ ಮಾಡುವಂತೆ ಹೇಳಿರು ವುದು ಗಮನಾರ್ಹವಾಗಿದೆ. ಹೈಕೋರ್ಟ್ ಆದೇಶ ವನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದ ಕಟ್ಟಡದ ಸ್ಥಿತಿಗತಿ ಕುರಿತು ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಭಾರತೀಯ ಪ್ರಾಚ್ಯವಸ್ತು ಇಲಾಖೆಗೆ ಸೂಚಿಸಿದೆ.
ಹೀಗಾಗಿ, ನಗರಪಾಲಿಕೆ ಅಽಕಾರಿಗಳು ಕಟ್ಟಡದ ಕುರಿತು ವಾಸ್ತವತೆಯನ್ನು ಮನವರಿಕೆ ಮಾಡಿಕೊಡಲು ತಯಾರಿ ನಡೆಸಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಮೈಸೂರಿನ ಅಭಿವೃದ್ಧಿ ಕುರಿತ ಸಭೆಯಲ್ಲಿ ಶಿಥಿಲಗೊಂಡಿರುವ ದೇವರಾಜ ಮಾರುಕಟ್ಟೆಯಿಂದ ವ್ಯಾಪಾರಿಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರುವ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಇದಕ್ಕೊಂದು ಪರ್ಯಾಯ ಮಾರ್ಗ ಹುಡುಕಿ ತೆರವುಗೊಳಿಸುವ ಭರವಸೆ ನೀಡಿದ್ದಾರೆ.
ಜನರ ತೆರಿಗೆ ಪೋಲಾಗೋದು ಬೇಡ: ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಬರುವ ಬಾಡಿಗೆಗಿಂತ ಅದರ ನಿರ್ವಹಣೆ ವೆಚ್ಚವೇ ಮೂರು ಪಟ್ಟು ಹೆಚ್ಚಾಗಿದೆ. ಮಹಾರಾಜರ ಕಾಲದಲ್ಲಿ ಕಟ್ಟುತ್ತಿದ್ದ ತೆರಿಗೆಯನ್ನು ಈಗ ಮಾರ್ಪಾಡು ಮಾಡಿದ್ದರೂ ಲಕ್ಷಾಂತರ ರೂ. ವಹಿವಾಟು ನಡೆಯುವ ಮಳಿಗೆಗಳಲ್ಲೂ ಮೂರು ಸಾವಿರ ರೂ.ಗಳಷ್ಟು ಬಾಡಿಗೆಯೂ ಬರುವುದಿಲ್ಲ. ಮಾರುಕಟ್ಟೆ ಮಳಿಗೆಗಳ ಬಾಡಿಗೆ ದರವನ್ನು ಪರಿಷ್ಕರಿಸಿರುವುದು ನಂತರ ಆಶಾದಾಯಕ ಬೆಳವಣಿಗೆಯಾಗಿದೆ. ಸಯ್ಯಾಜಿರಾವ್ ರಸ್ತೆಗೆ ಹೊಂದಿಕೊಂಡಂತೆ ಇರುವ ಮಳಿಗೆಗಳ ಬಾಡಿಗೆ ೧೫ ಸಾವಿರ ರೂ.ಗಳವರೆಗೆ ಬಂದು ನಿಂತಿದೆ.
ಆದರೆ, ಮಾರುಕಟ್ಟೆಯ ಉಳಿದ ಭಾಗದ ಮಳಿಗೆಗಳ ಬಾಡಿಗೆ ದರ ೫೦೦ ರಿಂದ ೫,೦೦೦ ರೂ. ಮಾತ್ರ ಇದೆ. ಆದರೆ, ಮಾರುಕಟ್ಟೆಯ ನಿರ್ವಹಣೆಗೆ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡುವ ಜತೆಗೆ ಪೌರ ಕಾರ್ಮಿಕರ ಸಂಬಳ ಇನ್ನಿತರ ಖರ್ಚನ್ನು ಸೇರಿದಂತೆ ಸಾಕಷ್ಟು ಬಂಡವಾಳ ಹಾಕಬೇಕಿದೆ. ಮಾರುಕಟ್ಟೆ ನಿರ್ವಹಣೆಗೆ ಆಗುವ ಖರ್ಚನ್ನು ಜನರು ಕಟ್ಟುವ ತೆರಿಗೆಯಲ್ಲೇ ಪಾವತಿಸಬೇಕಿದೆ. ಮನೆ, ನೀರು, ಆಸ್ತಿ ತೆರಿಗೆ ಪಾವತಿಸುತ್ತಿದ್ದರೂ ನಗರಪಾಲಿಕೆಗೆ ಕೋಟ್ಯಂತರ ರೂ. ಅನುದಾನ ಬಾಕಿ ಇದೆ. ಆರ್ಥಿಕ ಸಂಪನ್ಮೂಲ ಇಲ್ಲದೆ ರಾಜ್ಯ ಸರ್ಕಾರದ ಅನುದಾನ ಕಾಯುತ್ತಿರುವ ಹಿನ್ನೆಲೆಯಲ್ಲಿ ಆದಾಯ ಸಂಪನ್ಮೂಲ ಕ್ರೋಢೀಕರಣ ಅಗತ್ಯವಿದೆ. ಹಾಗಾಗಿ, ಮಾರುಕಟ್ಟೆ ನೆಲಸಮಗೊಳಿಸಿ ಬೃಹತ್ ಮಾರುಕಟ್ಟೆಯನ್ನು ನಿರ್ಮಿಸುವುದು ಅಗತ್ಯ.
ನಗರಪಾಲಿಕೆ ತುರ್ತು ನಿರ್ಣಯ ಮಾಡಲಿ: ಚಿಕ್ಕಗಡಿಯಾರದಿಂದ ದಿವಾನ್ಸ್ ರಸ್ತೆಯ ತನಕ ಇರುವ ಈ ಮಾರುಕಟ್ಟೆಯನ್ನು ಕೆಡವಿ ಕೆಳಮಹಡಿಯಲ್ಲಿ ಪಾರ್ಕಿಂಗ್ ಮಾಡಿ, ಮೇಲ್ಭಾಗದಲ್ಲಿ ಮೂರು ಅಂತಸ್ತಿನ ಮಾರುಕಟ್ಟೆ ಕಟ್ಟಡ ನಿರ್ಮಿಸಬಹುದು. ಪಾರಂಪರಿಕ ಕಟ್ಟಡವೆಂದು ನೆಲಸಮ ಮಾಡದೆ ಹೋದರೆ ಬರೀ ಮಳಿಗೆದಾರರಿಗೆ ಅನುಕೂಲವೇ ಹೊರತು ನಗರಪಾಲಿಕೆಗೆ ಯಾವದೇ ಪ್ರಯೋಜನವಾಗುವುದಿಲ್ಲ.
ಮುಂದಿನ ದಿನಗಳಲ್ಲಿ ಬೃಹತ್ ಮಾರುಕಟ್ಟೆ ನಿರ್ಮಾಣ ಮಾಡಿದರೆ, ಪ್ರಸಕ್ತ ಸಾಲಿನ ದರದಂತೆ ಹರಾಜು ಹಾಕಿ ಮಳಿಗೆಗಳನ್ನು ಬಾಡಿಗೆಗೆ ಕೊಡಬಹುದು. ಇದರಿಂದ ಹಣದ ಸಂಪನ್ಮೂಲ ಕ್ರೋಢೀಕರಣವಾಗಲಿದೆ. ಹಾಗಾಗಿ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ನಗರಪಾಲಿಕೆಯು ಮಾರುಕಟ್ಟೆ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡು ಆದಷ್ಟು ಬೇಗನೆ ಮಳಿಗೆದಾರರ ತೆರವು ಕಾರ್ಯಾಚರಣೆ ನಡೆಸುವುದು ಸೂಕ್ತ.
ಮಾಲ್ ಆಫ್ ಮೈಸೂರು, ಸೆಂಟ್ರಲ್ ಮಾಲ್ ನಂತಹ ಕಡೆ ಸೆಲ್ಲಾರ್‌ನಲ್ಲಿ ವಾಹನ ನಿಲುಗಡೆ ಮಾಡಿದರೆ ೨೦ ರೂ. ಶುಲ್ಕ ವಸೂಲಿ ಮಾಡಲಾಗುತ್ತದೆ. ನೂತನವಾಗಿ ಮಾರುಕಟ್ಟೆ ನಿರ್ಮಿಸುವಾಗ ಸೆಲ್ಲಾರ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಹೆಚ್ಚು ಅನುಕೂಲ, ಪಾರ್ಕಿಂಗ್‌ನಿಂದಲೇ ದೊಡ್ಡ ಮಟ್ಟದ ಆದಾಯ ಬರಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ್ದ ಪ್ಲಾನ್ ಕೈಬಿಟ್ಟು, ಈಗ ಪಾರಂಪರಿಕ ಶೈಲಿಯಲ್ಲೇ ಕಟ್ಟಡ ನಿರ್ಮಿಸಲು ಡಿಪಿಆರ್ ತಯಾರಿಸಲಾಗಿದೆ. ಹಾಗಾಗಿ ತಕ್ಷಣವೇ ನಿರ್ಮಾಣ ಕಾರ್ಯ ಆರಂಭಿಸಬೇಕು. ಒಂದು ವೇಳೆ ಕಟ್ಟಡದಲ್ಲಿ ಇರುವ ಬಾಡಿಗೆದಾರರ ಮಾತನ್ನು ಕೇಳಿಕೊಂಡು ಕೂತರೆ ಬರುವ ಆದಾಯಕ್ಕಿಂತ ಮುಂದಿನ ದಿನಗಳಲ್ಲಿ ನಿರ್ವಹಣಾ ವೆಚ್ಚವೇ ಕೋಟ್ಯಂತರ ರೂ. ಜಾಸ್ತಿಯಾಗಲಿದೆ ಎಂಬುದನ್ನು ಸಂಬಂಧಪಟ್ಟವರು ಮನದಟ್ಟು ಮಾಡಿಕೊಳ್ಳಬೇಕಿದೆ.
” ಮುಂದಿನ ದಿನಗಳಲ್ಲಿ ಬೃಹತ್ ಮಾರುಕಟ್ಟೆ ನಿರ್ಮಾಣ ಮಾಡಿದರೆ, ಪ್ರಸಕ್ತ ಸಾಲಿನ ದರದಂತೆ ಹರಾಜು ಹಾಕಿ ಮಳಿಗೆಗಳನ್ನು ಬಾಡಿಗೆಗೆ ಕೊಡಬಹುದು. ಇದರಿಂದ ಹಣದ ಸಂಪನ್ಮೂಲ ಕ್ರೋಢೀಕರಣವಾಗಲಿದೆ. ಹಾಗಾಗಿ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ನಗರಪಾಲಿಕೆಯು ಮಾರುಕಟ್ಟೆ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡು ಆದಷ್ಟು ಬೇಗನೆ ಮಳಿಗೆದಾರರ ತೆರವು ಕಾರ್ಯಾಚರಣೆ ನಡೆಸುವುದು ಸೂಕ್ತ”





