Mysore
20
drizzle

Social Media

ಶನಿವಾರ, 10 ಜನವರಿ 2026
Light
Dark

ಓದುಗರ ಪತ್ರ: ತಿ.ನರಸೀಪುರ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಬಹುದು

ಓದುಗರ ಪತ್ರ

ಕೆಆರ್‌ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂಬ ಹೆಸರಿಡಬೇಕು ಎಂದು ಶಾಸಕ ಕೆ.ಹರೀಶ್ ಗೌಡ ಮೈಸೂರು ಮಹಾನಗರ ಪಾಲಿಕೆಗೆ ಸಲಹೆ ನೀಡಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಿದ್ದರಾಮಯ್ಯನವರು ಈ ಹಿಂದೆಯೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಂಜೂರಾತಿ ನೀಡಿ, ತಮ್ಮ ಆಡಳಿತಾವಧಿಯೊಳಗೆ ಆಸ್ಪತ್ರೆ ಕಾಮಗಾರಿಯನ್ನೂ ಪೂರ್ಣಗೊಳಿಸಿದರು. ಇದನ್ನು ಮೈಸೂರಿಗರು ಎಂದಿಗೂ ಮರೆತಿಲ್ಲ. ಕೆಆರ್‌ಎಸ್ ರಸ್ತೆಗೆ ‘ಪ್ರಿನ್ಸೆಸ್ ರಸ್ತೆ’ ಎಂಬ ಹೆಸರು ಅಧಿಕೃತವಾಗಿ ಇದೆಯೋ, ಇಲ್ಲವೋ ಎಂಬುದು ತಿಳಿಯದು. ಆದರೆ ನಾನು ಬಾಲಕನಾಗಿದ್ದಾಗ ಕ್ಷಯರೋಗ ಆಸ್ಪತ್ರೆಯಲ್ಲಿದ್ದ ನನ್ನ ತಾಯಿಗೆ ಊಟ ಕೊಟ್ಟು ಬರುವಾಗ ದಾರಿಯಲ್ಲಿ ಎಲ್ಲೋ ‘ಪ್ರಿನ್ಸೆಸ್ ರೋಡ್’ ಎಂಬ ಕಲ್ಲಿನ ಫಲಕವನ್ನು ನೋಡಿದ ನೆನಪು ಇದೆ. ಆದ್ದರಿಂದ ವಿವಾದಗಳನ್ನು ಸೃಷ್ಟಿಸಿಕೊಂಡು ಈ ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡುವ ಬದಲು ಸರ್ವ ಸಮ್ಮತಿ ಪಡೆದು ಹೆಸರಿಡುವುದು ಸೂಕ್ತ ಅನಿಸುತ್ತದೆ. ಮೈಸೂರು ಭಾಗದ ನೂರಾರು ರೈತರ ಬದುಕನ್ನು ಹಸನುಗೊಳಿಸಿದ ವರುಣ ನಾಲೆಯ ನಿರ್ಮಾಣಕ್ಕೆ ಡಿ.ದೇವರಾಜ ಅರಸುರವರು ದಾರಿ ಮಾಡಿಕೊಟ್ಟರಾದರೂ, ಅದು ಪೂರ್ಣಗೊಂಡು ನಾಲೆಯಲ್ಲಿ ನೀರು ಹರಿದು ಬರಲು ಕಾರಣರಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಅದೊಂದು ಐತಿಹಾಸಿಕ ಸಂಗತಿ. ಆದ್ದರಿಂದ ಮೈಸೂರು-ತಿ.ನರಸೀಪುರ ರಸ್ತೆ ವರುಣ ಕೆರೆಯನ್ನೂ ಸಂಪರ್ಕಿಸಲಿದ್ದು, ಆ ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಟ್ಟರೆ ಯಾರೂ ಕೂಡ ಚಕಾರ ಎತ್ತುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

-ಸ.ರ.ಸುದರ್ಶನ, ಪ್ರಧಾನ ಕಾರ್ಯದರ್ಶಿ, ಕನ್ನಡ ಕ್ರಿಯಾ ಸಮಿತಿ, ಮೈಸೂರು.

Tags:
error: Content is protected !!