ಮೈಸೂರು: ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಚಿವ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಇಲ್ಲಿಯವರೆಗೂ ಸಿಎಂ ಬದಲಾವಣೆಯ ಚರ್ಚೆಗಳು ಕೂಡ ನಡೆದಿಲ್ಲ ಎಂದರು.
ಇನ್ನು ಮುಂದೆಯೇ ನಾನು ಸಿಎಂ ಸಿದ್ದರಾಮಯ್ಯ ಜೊತೆ ಸಚಿವನಾಗಿ ಕೆಲಸ ಮಾಡುತ್ತೇನೆ. ವಿಪಕ್ಷ ನಾಯಕರು ಕೂಡ ಪ್ರೀತಿಯಿಂದ ನನ್ನ ಹೆಸರೇಳುತ್ತಾರೆ. ನಮ್ಮಲ್ಲಿ ಯಾವುದೇ ಚರ್ಚೆ, ಬೆಳವಣಿಗೆ ನಡೆದಿಲ್ಲ. ಬೆಂಬಲಿಗರು ಸಿಎಂ ಎಂದು ಜೈಕಾರ ಹಾಕೋದು ಸರ್ವೇ ಸಾಮಾನ್ಯ. ಏನೋ ಬದಲಾವಣೆ ಆಗುತ್ತೆ ಅನ್ನೋದು ಸರಿಯಲ್ಲ. ಇದೆಲ್ಲಾ ಕೇವಲ ಊಹಾಪೋಹ ಎಂದು ಸ್ಪಷ್ಟನೆ ನೀಡಿದರು.
ಇನ್ನು ಸಚಿವ ಎಚ್.ಸಿ.ಮಹದೇವಪ್ಪ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮೈಸೂರಿಗೆ ದಸರಾ ನೋಡಲು ಆಗಮಿಸಿದ್ದೇನೆ. ಮೈಸೂರಿನಲ್ಲಿ ಓಡಾಡಿಕೊಂಡು ದಸರಾ ನೋಡಿ ಖುಷಿಪಡುತ್ತೇನೆ.
ಸಚಿವ ಮಹದೇವಪ್ಪ ಭೇಟಿಗೆ ವಿಶೇಷ ಅರ್ಥ ಇಲ್ಲ. ಮಹದೇವಪ್ಪ ಹಾಗೂ ನಮ್ಮ ಮನೆ ಅಕ್ಕ ಪಕ್ಕದಲ್ಲಿದೆ. ಹೀಗಾಗಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಮಾತನಾಡಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.