Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಒಂದೇ ಸಂಸ್ಥೆಯ ಎರಡು ಚಿತ್ರಗಳು ಏಕಕಾಲಕ್ಕೆ ಆರಂಭ

ಕೆಲವು ವರ್ಷಗಳ ಹಿಂದೆ ರವಿಚಂದ್ರನ್‍ ಅಭಿನಯದ ‘ದಶರಥ’, ‘ರಾಜೇಂದ್ರ ಪೊನ್ನಪ್ಪ’ ಮತ್ತು ‘ಬಕಾಸುರ’ ಚಿತ್ರಗಳು ಒಟ್ಟಿಗೆ ಮುಹೂರ್ತವಾಗಿತ್ತು. ಈಗ ಹೊಸಬರ ತಂಡವೊಂದು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದೆ. ಒಂದೇ ದಿನ ಎರಡು ಚಿತ್ರಗಳನ್ನು ಒಟ್ಟಿಗೆ ಪ್ರಾರಂಭಿಸಿದೆ. ಆರ್‌.ಎಸ್‌.ಪಿ ಪ್ರೊಡಕ್ಷನ್ಸ್ ಹಾಗೂ ಚಿನ್ಮಯ್ ಸಿನಿ ಕ್ರಿಯೇಶನ್ಸ್ ಸಂಸ್ಥೆಗಳಡಿ ಲಕ್ಷ್ಮೀ ಹರೀಶ್‍ ಈ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಈ ಚಿತ್ರಗಳಿಗೆ ‘ಆ ಈ’ ಮತ್ತು ‘ರಾಜ ದೇವ ಸಿಂಧು’ ಎಂದು ಹೆಸರಿಡಲಾಗಿದ್ದು, ಎರಡೂ ಚಿತ್ರಗಳಿಗೆ ದುರ್ಗಾ ಮೋಹನ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ಭಾರ್ಗವ್‍ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ವಿಶೇಷವೆಂದರೆ, ಈ ಎರಡೂ ಚಿತ್ರಗಳಲ್ಲಿ ಭಾರ್ಗವ್‍ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಈ ಪೈಕಿ ‘ಅ … ಈ …’ ಕುರಿತು ಮಾತನಾಡುವ ನಿರ್ದೇಶಕ ದುರ್ಗಾ ಮೋಹನ್‍, ‘ಆ ದಿನಗಳು ಚೆನ್ನಾಗಿತ್ತು ಎಂದು ಕೆಲವರು ಹೇಳುತ್ತಾರೆ. ಕೆಲವರು ಈಗಲೇ ಚೆನ್ನಾಗಿದೆ ಎನ್ನುತ್ತಾರೆ. ಎರಡನ್ನೂ ತೆಗೆದುಕೊಂಡರೇ ಜೀವನ ಎಂದು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಕಾಶೀನಾಥ್‍ ಅವರ ಚಿತ್ರಗಳಲ್ಲಿ ಸಂದೇಶದ ಜೊತೆಗೆ ಹಾಸ್ಯವಿರುತ್ತಿತ್ತು. ಈ ಚಿತ್ರದಲ್ಲಿ ನಾವು ಆ ತರಹದ ಪ್ರಯತ್ನ ಮಾಡಿದ್ದೇವೆ. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಇನ್ನೊಂದು ಹಂತದಲ್ಲಿ ಬೆಂಗಳೂರು ಸುತ್ತಮುತ್ತದ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಭಾರ್ಗವ್‍ ಇಲ್ಲಿ ಅಪ್ಪ-ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಡೀ ಚಿತ್ರದಲ್ಲಿ ಅವರಿಗೆ ಮೂರು ಶೇಡ್‍ಗಳಿರುವ ಪಾತ್ರವಿದೆ. ಒಬ್ಬ ಕಾಲೇಜು ಹುಡುಗನಿಂದ 50 ವರ್ಷದ ವಯಸ್ಸಿನವರೆಗೂ ನಟಿಸುತ್ತಿದ್ದಾರೆ. ಜೊತೆಗೆ ಶ್ವೇತಾ, ಮೊನಿಕಾ, ಚಾವಿ, ಆರಾ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‍ ಮತ್ತು ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು.

ಇನ್ನು, ‘ರಾಜ ದೇವ ಸಿಂಧು’ ಬಗ್ಗೆ ಮಾತನಾಡುವ ದುರ್ಗಾ ಮೋಹನ್‍, ‘ಕರ್ನಾಟಕದಲ್ಲಿ ಮಹಾರಾಜರು ಎಂದರೆ ನಮಗೆ ಮೊದಲು ನೆನಪಿಗೆ ಬರುವುದು ಕೃಷ್ಣದೇವರಾಯರು. ಅವರು ಮಾಡಿದ ಕೆಲಸಗಳು, ಸಾಧನೆಗಳು ನಮಗೆಲ್ಲಾ ಸ್ಫೂರ್ತಿಯಾಗಿವೆ. ಅವೆಲ್ಲವನ್ನೂ ಇಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆದಿದ್ದೇವೆ. ಈ ಶೀರ್ಷಿಕೆಯಲ್ಲಿ ಮೂರು ಹೆಸರುಗಳಿವೆ. ರಾಜ ಎನ್ನುವವನು ಈಗಿನವನು. ಡೆಲಿವರಿ ಬಾಯ್‍ ಆಗಿರುತ್ತಾನೆ. ದೇವರಾಯ ಎಂಬುದು ಫ್ಲಾಶ್‍ಬ್ಯಾಕ್‍ನಲ್ಲಿ ಬರುವ ಒಂದು ಪಾತ್ರ. ಸಿಂಧು ಎನ್ನುವುದು ಸಿಂಧೂಜಾ ಎಂಬ ಪಾತ್ರ. ಮೂರೂ ಸೇರಿ ‘ರಾಜ ದೇವ ಸಿಂಧು’ ಎಂದು ಹೆಸರಿಟ್ಟಿದ್ದೇವೆ. ಇದೊಂದು ಕಾಲ್ಪನಿಕ ಚಿತ್ರ. ಏಳು ಜನ್ಮಗಳಿಗೊಮ್ಮೆ ಮನುಷ್ಯ ಜನ್ಮ ಬರುತ್ತದೆ ಎಂಬ ನಂಬಿಕೆ ಇದೆ. ಹಾಗಿರುವಾಗ, ಏಳು ಜನ್ಮಗಳ ಹಿಂದೆ ನಾವೇನು ಆಗಿರಬಹುದು ಎಂದು ಕಲ್ಪನೆಯೊಂದಿಗೆ ಮಾಡಿದ ಚಿತ್ರ. ಆಗಿನ ಜನ್ಮದಲ್ಲಿ ಆಗುವ ಸನ್ನಿವೇಶಗಳು ಪುನಃ ಈಗ ರಿಪೀಟ್‍ ಆಗುತ್ತದಾ? ಅಲ್ಲಿ ಒಳ್ಳೆಯವನಾಗಿದ್ದವನು ಇಲ್ಲಿ ಕೆಟ್ಟವನಾಗಿರುತ್ತಾನಾ? ಇಲ್ಲಿ ಇವನು ಏನಾಗಿರುತ್ತಾನೆ? ಎಂಬ ಅಂಶಗಳನ್ನಿಟ್ಟುಕೊಂಡು ಕಥೆ ಮಾಡಿದ್ದೇವೆ’ ಎಂದರು.

ಭಾರ್ಗವ್‍ ಮಾತನಾಡಿ, ‘’ಆ … ಈ …’ ನನ್ನ 7ನೇ ಚಿತ್ರ. ಈ ಚಿತ್ರದಲ್ಲಿ ಸವಾಲಿನ ಪಾತ್ರವಿದೆ. ಮೊದಲ ಬಾರಿಗೆ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನಾಲ್ಕು ರೀತಿಯ ಪ್ರೀತಿ ಇದೆ. ಪ್ರತಿಯೊಬ್ಬರಿಗೂ ಒಂದು ಪಾಠವಿದೆ. ನವೆಂಬರ್‍ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇನ್ನು, ನಿರ್ದೇಶಕರು ‘ರಾಜ ದೇವ ಸಿಂಧು’ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಇದು ಮುಂದಿನ ಜನವರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗುತ್ತದೆ. ಇದೊಂದು ಸವಾಲಿನ ಪಾತ್ರ. ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲೂ ದ್ವಿಪಾತ್ರಗಳಿವೆ. ಇದೊಂದು ಸೋಷಿಯಲ್‍ ಫ್ಯಾಂಟಸಿ ಚಿತ್ರ. ಇಂಥದ್ದೊಂದು ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ’ ಎಂದರು.

Tags: