Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬೊಪ್ಪನಹಳ್ಳಿಯ ಅಪೂರ್ವಳಿಗೆ ರಾಷ್ಟ್ರೀಯ ಚಿತ್ರ ಪ್ರಶಸ್ತಿ

ಅನಿಲ್ ಅಂತರಸಂತೆ

ಎಂಥವರನ್ನೂ ಒಂದು ಕ್ಷಣ ಹಿಡಿದಿಟ್ಟು ಕೆಲ ಕಾಲ ದಿಟ್ಟಿಸಿ ನೋಡುವಂತೆ, ನೋಡಿ ಬೆರಗಾಗುವಂತೆ ಮಾಡುವ ಸಾಮರ್ಥ್ಯ ಚಿತ್ರಕಲೆಗಿದೆ ಎನ್ನುವುದನ್ನು ನೀವು ನಂಬಲೇಬೇಕು. ಹೌದು ಅನಾದಿಕಾಲ ದಿಂದಲೂ ಚಿತ್ರಕಲೆಗೆ ತನ್ನದೇ ಆದ ಮಹತ್ವವಿದೆ. ಆದಿ ಮಾನವನಿಂದ, ರಾಜಮಹಾರಾಜರ ಕಾಲದವರೆಗೂ ತಮ್ಮ ಬದುಕಿನ ಶೈಲಿ ಹಾಗೂ ಆಡಳಿತದ ವೈಖರಿಯನ್ನು ಬಂಡೆಗಳ ಮೇಲೆ, ಗುಹೆಗಳ ಒಳಗೆ ವರ್ಣರಂಜಿತವಾಗಿ ಚಿತ್ರಿಸಿರುವ ಉದಾಹರಣಗಳಿವೆ. ಅವು ಈಗಲೂ ನಮ್ಮಲ್ಲಿ ದಿಗ್ಧಮೆ ಮಾಡಿಸುತ್ತದೆ.

ಗೋಡೆಗಳ ಮೇಲೆ ಚಿತ್ರಬಿಡಿಸುತ್ತಿದ್ದ ಮಾನವ ಈಗ ಸಾಕಷ್ಟು ಆಧುನಿಕಗೊಂಡು ಪ್ರಗತಿ ಸಾಧಿಸಿದ್ದಾನೆ. 3ಡಿ ಚಿತ್ರಗಳ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವವರೂ ಇದ್ದಾರೆ. ಆದರೆ ಇಲ್ಲೊಬ್ಬರು ಗ್ರಾಮೀಣ ಯುವ ಪ್ರತಿಭೆ ಕೆಲವೇ ವರ್ಷಗಳ ಅಂತರದಲ್ಲಿ ಚಿತ್ರಕಲೆಯನ್ನು ಕಲಿತು ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಬೊಪ್ಪನಹಳ್ಳಿ ಗ್ರಾಮದ ಬಿ.ಪಿ.ಶೇಖರ್ ಮತ್ತು ವಿನುತ ದಂಪತಿ ಪುತ್ರಿ ಅಪೂರ್ವ ಅವರೇ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಗ್ರಾಮೀಣ ಪ್ರತಿಭೆ. ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಯರಹಳ್ಳಿ ಪ್ರೌಢಶಾಲೆಯಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿ ಬಳಿಕ ಎಚ್.ಡಿ.ಕೋಟೆಯ ವಿದ್ಯಾ ಸಿಂಚನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಪೂರ್ವ ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಗಣಪತಿ ಹುಟ್ಟು ಮತ್ತು ಬೆಳವಣಿಗೆಯ ಕಥೆಯನ್ನು ಸಾರುವ ಚಿತ್ರ ಬಿಡಿಸಿ ಬಹುಮಾನ ಗಳಿಸಿದ್ದಾರೆ.

‘ಪ್ರಾಥಮಿಕ ಶಾಲಾ ಹಂತದಲ್ಲಿದ್ದಾಗ ನನಗೆ ಚಿತ್ರಕಲೆಯ ಬಗ್ಗೆ ಯಾವುದೇ ಅರಿವಿರಲಿಲ್ಲ. ಅಲ್ಲಿಂದ ಪ್ರೌಢ ಶಾಲಾ ಹಂತಕ್ಕೆ ಬಂದಾಗ ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕಿ ಕೋಮಲ ಅವರ ಸಹಕಾರ ಮತ್ತು ಮಾರ್ಗದರ್ಶನದಿಂದ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿತು. ಚಿತ್ರಕಲೆ ಎಂದರೇನು, ಚಿತ್ರ ಬಿಡಿಸುವಾಗ ಏಕಾಗ್ರತೆ ಎಷ್ಟು ಮುಖ್ಯ, ಕಂಡದ್ದನ್ನು, ಕಲ್ಪಿಸಿದ್ದನು ಹಾಳೆಯ ಮೇಲೆ ಬಿಡಿಸುವುದು ಹೇಗೆ ಎಂಬುದನ್ನು ನನಗೆ ತಿಳಿಸಿ ಕಲಿಸಿಕೊಟ್ಟವರು ನಮ್ಮ ಟೀಚರ್ ಕೋಮಲ ಎನ್ನುವುದು ಅಪೂರ್ವರ ಮಾತು.

‘ನಾನು ಚಿಕ್ಕವಳಿದ್ದಾಗ ಅಕ್ಕನ ಬಳಿ ಚಿತ್ರ ಬಿಡಿಸಿ ಕೊಡಿ ಎಂದು ಗೋಗರೆಯುತ್ತಿದ್ದೆ ಆದರೆ ಈಗ ನಾನೇ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವುದು ಹೆಮ್ಮೆ ಅನಿಸುತ್ತದೆ’ ಎನ್ನುತ್ತಾರೆ ಅಪೂರ್ವ.

ಇನ್ನು ಮೈಸೂರಿನ ಜಗಮ್ಮೋಹನ ಅರಮನೆಯಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿಯೂ ಅಪೂರ್ವರ ಕೈಚಳಕದಿಂದ ಮೂಡಿದ ಚಿತ್ರಗಳನ್ನು ಪ್ರದರ್ಶಿಸಲಾ ಗಿತ್ತು. ಈ ವೇಳೆ ಅಲ್ಲಿಗೆ ಭೇಟಿ ನೀಡಿದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಕೂಡ ಇವರ ಚಿತ್ರಗಳನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಸಚಿವರ ಜತೆ ನಾನು ಫೋಟೋ ತೆಗೆಸಿಕೊಂಡೆ ಎಂದು ನೆನಪು ಮಾಡಿಕೊಳ್ಳುತ್ತಾರೆ ಅಪೂರ್ವ.

ನನಗೆ ಚಿತ್ರಕಲೆಯಲ್ಲಿ ಆಸಕ್ತ ಬರಲು ನಾನು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪಠ್ಯಕ್ಕಾಗಿ ಬಿಡಿಸುತ್ತಿದ್ದ ಚಿತ್ರಗಳೂ ಕಾರಣ ಎನ್ನುತ್ತಾರೆ ಅಪೂರ್ವ. ಸಮಾಜ ವಿಜ್ಞಾನ ತರಗತಿಗಳಲ್ಲಿ ಕರ್ನಾಟಕ, ಭಾರತದ ನಕ್ಷೆ ಬಿಡಿಸಿ, ಸ್ಥಳಗಳನ್ನು ಗುರುತಿಸುವುದು, ವಿಜ್ಞಾನ ತರಗತಿಯಲ್ಲಿ ಹೃದಯ, ಮೂತ್ರಜನಕಾಂಗ ಸೇರಿದಂತೆ ಇನ್ನಿತರ ಚಿತ್ರಗಳನ್ನೂ ಬಿಡಿಸುವುದಕ್ಕೆ ಅಪೂರ್ವ ಬಳಿಯೇ ಹೇಳುತ್ತಿದ್ದರಿಂದ ಚಿತ್ರಕಲೆಯ ಆಸಕ್ತಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು.

ಸದ್ಯ ಈಗ ಬಿಡವು ಸಿಕ್ಕಾಗಲೆಲ್ಲಾ ತಮ್ಮ ಓದಿನ ಜತೆಗೆ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅಪೂರ್ವರವರ ದಿನಚರಿಯಾಗಿದೆ. ಚಿತ್ರಕಲೆಗಳ ಜೊತೆಗೆ ಹಾಡುವುದು, ಕ್ರಾಫ್ಟ್ ಮಾಡುವುದು ಎಂದರೆ ಅಪೂರ್ವ ಅವರಿಗೆ ಬಲು ಇಷ್ಟ.

ವೈದ್ಯೆಯಾಗಬೇಕೆಂಬ ಕನಸಿನ ಜೊತೆಗೆ ಚಿತ್ರಕಲೆ ಯಲ್ಲಿಯೇ ಮುಂದುವರಿಸಬೇಕೆಂಬ ಆಸಕ್ತಿಯೂ ಅವರಲ್ಲಿದ್ದು, ಕುಟುಂಬದ ಸಹಕಾರದೊಂದಿಗೆ ಮುಂದೆ ಸಾಗುತ್ತಿದ್ದೇನೆ ಎನ್ನುತ್ತಾರೆ.

ನಮ್ಮ ಮಗಳು ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಓದಿನಲ್ಲಿಯೂ ಮುಂದಿದ್ದಾಳೆ, ಚಿತ್ರಕಲೆಯಲ್ಲಿಯೂ ತೊಡಗಿ ಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದಾಳೆ. ಅವಳ ಕನಸಿನಂತೆ ಅವಳು ಸಾಗಬೇಕು ಎಂಬುದೇ ನಮ್ಮ ಬಯಕೆ.
-ಬಿ.ಪಿ.ಶೇಖರ್.
ಅಪೂರ್ವರ ತಂದೆ.

Tags: