Mysore
23
broken clouds
Light
Dark

ಹನೂರು ಬಿಆರ್‌ಟಿ ವ್ಯಾಪ್ತಿಯಲ್ಲಿ ಹೆಣ್ಣಾನೆ ಸಾವು

ಹನೂರು: ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದ ಪಿ.ಜಿ ಪಾಳ್ಯ ಶಾಖೆ ಮಾವತ್ತೂರು ಎ ಗಸ್ತಿನಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿರುವ ಘಟನೆ ಜರುಗಿದೆ.

ಕಳೆದ 15 ದಿನಗಳ ಹಿಂದೆ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯದ ಆಳದ ಕೆರೆ ಅರಣ್ಯ ಪ್ರದೇಶದಲ್ಲಿ ಎಂಟು ತಿಂಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿದ್ದ ಗಂಡಾನೆಯ ಎರಡು ದಂತಗಳು ಪತ್ತೆಯಾಗಿತ್ತು.

ಇದಾದ ಎರಡೇ ದಿನಕ್ಕೆ ಆಗಸ್ಟ್ 30ರಂದು ಬೈಲೂರು ವನ್ಯಜೀವಿ ವಲಯ ಪಿಜಿ ಪಾಳ್ಯ ಮಾವತ್ತೂರು ಶಾಖೆ ಬಿ ಗಸ್ತಿನಲ್ಲಿ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಸುಮಾರು 60 ರಿಂದ 65 ವಯಸ್ಸಿನ ಹೆಣ್ಣಾನೆ ಮೃತಪಟ್ಟ ಎಂಟು ದಿನಗಳ ನಂತರ ಪತ್ತೆಯಾಗಿತ್ತು.

ಇದೀಗ ಸೆಪ್ಟೆಂಬರ್ 16ರಂದು ಬಿ.ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದ ಪಿಜಿ ಪಾಳ್ಯ ಶಾಖೆ ಮಾವತ್ತೂರು ಎ ಗಸ್ತಿನಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿರುವುದು ಕಂಡುಬಂದಿದೆ. ಹೆಣ್ಣಾನೆ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿ ಆರ್ ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಎಸಿಎಫ್ ಕೆ ಸುರೇಶ್, ಆರ್ ಎಫ್ ಒ ಪ್ರಮೋದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ. ವಾಸಿಂ ಮಿರ್ಜಾರವರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವನ್ಯ ಜೀವಿ ಪ್ರಿಯರಲ್ಲಿ ಆತಂಕ: ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ 20 ದಿನಗಳ ಅವಧಿಯಲ್ಲಿ ನಾಲ್ಕು ಆನೆಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆನೆಗಳು ಸಾಲುಸಾಲಾಗಿ ಮೃತಪಡುತ್ತಿದ್ದರು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಬೇಕು ಇಲ್ಲದಿದ್ದರೆ ಇನ್ನಷ್ಟು ಆನೆಗಳು ಸಾಯುವುದರಲ್ಲಿ ಯಾವುದೇ ಅನುಮಾನವಿಲ್ಲ ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಮುಂದೆ ಆನೆಗಳು ಸಾಯದಂತೆ ಎಚ್ಚರ ವಹಿಸಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

ಬೈಲೂರು ವನ್ಯಜೀವಿ ವಲಯದ ಪಿಜಿ ಪಾಳ್ಯ ಮಾವತ್ತೂರು ಎ ಮತ್ತು ಬಿ ಗಸ್ತಿನಲ್ಲಿ 15 ದಿನಗಳ ಅಂತರದಲ್ಲಿ ಎರಡು ಆನೆಗಳು ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.