ಮಂಜು ಕೋಟೆ
ಗಟ್ಟಿ ನಿರ್ಧಾರ, ಸಾಧಿಸುವ ಛಲ, ನಿರಂತರ ಪರಿಶ್ರಮದಿಂದ ಏನಾದರೂ ಸಾಧನೆ ಮಾಡಬಹುದು ಎಂಬುದಕೆ ಸರಗೂರು ತಾಲ್ಲೂಕಿನ ಕಾಡಂಚಿನ ಕುರ್ಣೇಗಾಲ ಗ್ರಾಮದ ಯುವಕ ಮಣಿಕಂಠ ಉದಾಹರಣೆಯಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಬಂಡೀಪುರ ಅರಣ್ಯ ವ್ಯಾಪ್ತಿಯ ಅಂಚಿನಲ್ಲಿರುವ ಕುರ್ಣೇಗಾಲದ ಕುಗ್ರಾಮಕ್ಕೆ ಇಂದಿಗೂ ದಿನಕ್ಕೆ ಕೇವಲ ಒಂದು ಸಾರಿಗೆ ಬಸ್ ವ್ಯವಸ್ಥೆ ಇರುವುದನ್ನು ಬಿಟ್ಟರೆ, ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಹೀಗಿದ್ದರೂ ಸಮಸ್ಯೆಗಳನ್ನು ಎದುರಿಸಿ ಸೋಮಾರಿಗಳಿಗೆ ಕುಂಟು ನೆಪಗಳೇ ಕಾರಣ ವಾಗುತ್ತವೆ ಹೊರತು ಸಾಧಕರಿಗಲ್ಲ ಎಂಬಂತೆ ಸಮಸ್ಯೆ ಗಳನ್ನು ಮೆಟ್ಟಿಲು ಮಾಡಿಕೊಂಡು ಡಾ.ಮಣಿಕಂಠ ಸಾಧನೆಯ ಹಾದಿ ಹಿಡಿದಿದ್ದು, ಅಮೆರಿಕದ ಪ್ರತಿಷ್ಠಿತ ವಿಜ್ಞಾನಿಗಳೊಂದಿಗೆ ರಕ್ತ ಹೀನತೆಯ ಕುರಿತು ಸಂಶೋಧನೆಯಲ್ಲಿ ತೊಡಗಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿ, ಪ್ರೌಢ ಶಿಕ್ಷಣವನ್ನು ಮನುಗನಹಳ್ಳಿ ಗ್ರಾಮದ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪಡೆದು ಪದವಿ ಪೂರ್ವ ಶಿಕ್ಷಣ ಹಾಗೂ ಪದವಿಯನ್ನು ಜಿಲ್ಲಾ ಕೇಂದ್ರದಲ್ಲಿ ಮುಗಿಸುವುದರೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜೀವ ರಸಾಯನ ಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಮಣಿಕಂಠನ ಬಗ್ಗೆ ಶಾಲಾ ದಿನಗಳಲ್ಲೇ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದ ಶಿಕ್ಷಕರು ಮುಂದೊಂದು ದಿನ ಈತ ವಿಶೇಷ ವಿದ್ಯಾರ್ಥಿಯಾಗುತ್ತಾನೆ ಎಂದು ಗುನುಗುತ್ತಿದ್ದದ್ದೂ ಉಂಟು. ಈ ಎಲ್ಲ ಮಾತುಗಳು ಮುಂದೊಂದು ದಿನ ನಿಜವಾಗುತ್ತವೆ ಎಂಬುದು ಸ್ವತಃ ಮಣಿಕಂಠನಿಗೂ ತಿಳಿದಿರಲಿಲ್ಲ. ಎಲ್ಲ ಶಿಕ್ಷಕರಿಗಿಂತ ಪ್ರೌಢಶಾಲೆಯ ಗಣಿತ ಶಿಕ್ಷಕ ಆಲೂಸ್ವಾಮಿ ಅವರು ನನಗೆ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡಿದ್ದಾರೆ ಎನ್ನುತ್ತಾ ಕೃತಜ್ಞತೆ ಅರ್ಪಿಸಿ ನೆಚ್ಚಿನ ಶಿಕ್ಷಕರನ್ನು ನೆನೆದು ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತಾರೆ ಡಾ.ಮಣಿಕಂಠ.
ಸರ್ಕಾರಿ ಶಾಲೆಗೆ ಸೌಲಭ್ಯ ಒದಗಿಸಬೇಕು: ಸರ್ಕಾರಿ ಶಾಲೆಗಳಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಸಾಧನೆ ಮಾಡಲು ಗ್ರಾಮೀಣ, ನಗರ ವಿದ್ಯಾರ್ಥಿಗಳು, ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಬಡವ-ಬಲ್ಲಿದ ಎಂಬ ಭೇದ ಭಾವವಿರುವುದಿಲ್ಲ ಎನ್ನುತ್ತಾರೆ ಸಾಧಕ ಡಾ.ಮಣಿಕಂಠ.
ತಂದೆ-ತಾಯಿ ದಿನನಿತ್ಯ ಕಷ್ಟ ಪಡುತ್ತಿದ್ದದ್ದನ್ನು ಕಣ್ಣಾರೆ ಕಂಡೆ, ನನ್ನ ಶಿಕ್ಷಣಕ್ಕಾಗಿ ಇಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ, ಇವರ ಬೆವರ ಹನಿಗೆ ಬೆಲೆಕೊಡಬೇಕು ಎಂದು ಅಂದೇ ನಿರ್ಧರಿಸಿ ನಿರಂತರವಾಗಿ ಅಧ್ಯಯನ ನಡೆಸಿದೆ. ಇತ್ತೀಚಿನ ಪೀಳಿಗೆಯ ಯುವಕ- ಯುವತಿಯರು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಅತಿಯಾದ ಮೊಬೈಲ್ ಬಳಕೆ ಬಿಟ್ಟು ಓದಿನ ಕಡೆ ಗಮನಕೊಟ್ಟರೆ ಎಲ್ಲರೂ ಸಾಧನೆ ಮಾಡಬಹುದು.
-ಡಾ.ಮಣಿಕಂಠ.
ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು, ಅತಿವೃಷ್ಟಿ-ಅನಾವೃಷ್ಟಿ, ಕಾಡು ಪ್ರಾಣಿಗಳಿಂದ ಬೆಳೆಗಳ ನಾಶವಾಗಿ ಮಾಡಿದ ಸಾಲ ತೀರಿಸಲು ಹಾಗೂ ಮಗನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಸಾಕಷ್ಟು ಕಷ್ಟ ಅನುಭವಿಸಿದೆವು. ಮಗನ ವಿದ್ಯಾಭ್ಯಾಸ ಕುಂಠಿತವಾಗಬಾರದು ಎಂದು ನಾನು ನನ್ನ ಪತ್ನಿ 3, 4 ವರ್ಷಗಳು ಮೈಸೂರು ನಗರದಲ್ಲಿ ನೆಲೆಸಿ, ಬೀದಿ ಬದಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸಿದೆವು. ನಮ್ಮ ಕಷ್ಟಗಳನ್ನು ಕಣ್ಣಾರೆ ಕಂಡ ನಮ್ಮ ಮಗ ನಿಷ್ಠೆಯಿಂದ ವಿದ್ಯಾಭ್ಯಾಸ ನಡೆಸಿ ಇಂದು ಉತ್ತಮ ಸ್ಥಿತಿಯಲ್ಲಿರುವುದು ಸಂತೋಷವಾಗುತ್ತದೆ.
-ಕೆ.ಸಿ.ಮಲ್ಲಪ್ಪ, ಮಣಿಕಂಠನ ತಂದೆ.
ಅಮೆರಿಕಾದಲ್ಲೂ ಸಂಶೋಧನೆ:
ಡಾ.ಮಣಿಕಂಠ ಮೈಸೂರು ವಿವಿಯಲ್ಲಿ ಸಂಶೋಧನೆ ಮಾಡುವುದರೊಂದಿಗೆ ಪ್ರಸ್ತುತ ಅಮೆರಿಕದಲ್ಲಿಯೂ ಹಿರಿಯ ವಿಜ್ಞಾನಿಗಳೊಂದಿಗೆ ದೇಹದ ಅಂಗಾಂಶಗಳಿಗೆ ಆಮ್ಲಜನಕ ಒದಗಿಸುವ ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ ಕೊರತೆಯಿಂದ ಉಂಟಾಗುವ ಅನಿಮೀಯಾ (ರಕ್ತ ಹೀನತೆ) ರೋಗದ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ.