Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕಾಲ್ಪನಿಕ ಊರೊಂದರಲ್ಲಿ ನಾಲ್ಕು ಕುಟುಂಬಗಳ ಕಥೆ ಇದು…

ವಿನಯ್‍ ರಾಜಕುಮಾರ್ ಅಭಿನಯದ ‘ಪೆಪೆ’ ಚಿತ್ರವು ಆಗಸ್ಟ್ 30ರಂದು ಬಿಡುಗಡೆ ಆಗುವುದಕ್ಕೆ ಸಜ್ಜಾಗುತ್ತಿದೆ. ಚಿತ್ರದ ಕುರಿತು ವಿನಯ್‍ ರಾಜಕುಮಾರ್‍ ಸಾಕಷ್ಟು ಪ್ರಚಾರವನ್ನೂ ಪ್ರಚಾರ ಮಾಡುತ್ತಿದ್ದಾರೆ. ಇದೊಂದು ಬರೀ ಆ್ಯಕ್ಷನ್‍ ಚಿತ್ರವಷ್ಟೇ ಅಲ್ಲ, ಹೋರಾಟದ ಕಥೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ವಿನಯ್, ‘ಈ ಚಿತ್ರದಲ್ಲಿ ನನ್ನ ಹೆಸರು ಪ್ರದೀಪ ಅಂತ. ಎಲ್ಲರೂ ಪೆಪೆ ಅಂತ ಕರೀತಾರೆ. ಅದೊಬ್ಬ ಫುಟ್ಬಾಲ್‍ ಆಟಗಾರನ ಹೆಸರು. ಅವರಿಂದ ಸ್ಫೂರ್ತಿಪಡೆದು ನಿರ್ದೇಶಕರು ಹೆಸರು ಇಟ್ಟಿರಬಹುದು. ಇದೊಂದು ಸಂಪೂರ್ಣ ಸೇಡಿನ ಕಥೆ ಅಂತ ಹೇಳೋದು ಕಷ್ಟ. ಒಂದು ಕಾಲ್ಪನಿಕ ಊರಲ್ಲಿ ನಾಲ್ಕು ಕುಟುಂಬಗಳ ನಡುವಿನ ಹೋರಾಟದ ಕಥೆ ಇದು. ಈ ಚಿತ್ರದಲ್ಲಿ ಹಲವು ಪಾತ್ರಗಳಿವೆ. ಜನರಿಗೆ ಮೊದಲೇ ಪರಿಚಯವಾಗಲೀ ಎಂದು ಫ್ಯಾಮಿಲಿ ಟ್ರೀ ಮತ್ತು ಪಾತ್ರಗಳ ನಡುವಿನ ಸಂಬಂಧ ಬಿಟ್ಟಿದ್ದೇವೆ. ಅದು ಗೊತ್ತಾದಾಗ, ಸಿನಿಮಾ ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ’ ಎಂದರು.

ಇದುವರೆಗೂ ಲವ್ವರ್ ಬಾಯ್‍ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವಿನಯ್‍, ಈ ಚಿತ್ರದಲ್ಲಿ ತಮ್ಮ ಶೈಲಿ ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಕೆಲವು ಕಥೆಗಳನ್ನು ಹೂಗಳ ಮೂಲಕ ಹೇಳಬೇಕು. ಕೆಲವು ಕಥೆಗಳನ್ನು ಮಚ್ಚು ಮೂಲಕ ಹೇಳಬೇಕು. ಈ ಕಥೆಗೆ ಮಚ್ಚು ಬೇಕಿತ್ತು. ಒಬ್ಬ ನಟನಾಗಿ ಎಲ್ಲಾ ಶೈಲಿಯ ಚಿತ್ರಗಳನ್ನೂ ಮಾಡಬೇಕು. ಆದರೆ, ಇದುವರೆಗೂ ನಾನು ಆ‍್ಯಕ್ಷನ್‍ ಚಿತ್ರ ಮಾಡಿರಲಿಲ್ಲ. ಇದು ನನಗೆ ಹೊಸ ಅನುಭವ. 10 ವರ್ಷದಿಂದ ಈ ತರಹದ ಪಾತ್ರಕ್ಕಾಗಿ ಕಾಯುತ್ತಿದ್ದೆ. ಇಲ್ಲಿ ಆ್ಯಕ್ಷನ್‍ ಜೊತೆಗೆ ಒಂದಿಷ್ಟು ವಿಷಯಗಳಿವೆ. ಹಾಗಾಗಿ, ಕಥೆ ಕೇಳಿ ತಕ್ಷಣವೇ ಒಪ್ಪಿಕೊಂಡೆ’ ಎಂದರು.

‘ಪೆಪೆ’ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ ಮುಂತಾದವರು ನಟಿಸಿದ್ದಾರೆ.

ಈ ಚಿತ್ರವನ್ನು ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದಾರೆ. ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

Tags: