ಬೆಂಗಳೂರು: ಈ ಹಿಂದೆ ಜಿಂದಾಲ್‌ಗೆ ಭೂಮಿ ಕೊಡಲು ಕಾಂಗ್ರೆಸ್ಸಿಗರು ವಿರೋಧಿಸಿದ್ದರು. ಈಗ ಕೊಡುತ್ತಿದ್ದಾರೆ ಅಂದ್ರೆ ಕಾಂಗ್ರೆಸ್ಸಿಗರಿಗೂ, ಅವರ ಹೈಕಮಾಂಡಿಗೂ ದೊಡ್ಡ ಪ್ರಮಾಣದ ಮೊತ್ತ ಸಂದಾಯ ಆಗಿರಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ 3677 ಎಕರೆ ಭೂಮಿ ಕೊಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಇದ್ದಾಗ ಪ್ರಸ್ತಾವನೆ ಬಂದಿತ್ತು. ನಾವೆಲ್ಲರೂ ಒಳಗಡೆಯೂ ವಿರೋಧ ಮಾಡಿದ್ದೆವು. ಕಾಂಗ್ರೆಸ್‌ನವರು ಬಹಿರಂಗವಾಗಿ ಮಾರಾಟವನ್ನು ವಿರೋಧಿಸಿದ್ದರು. ಇದು ದೊಡ್ಡ ಪ್ರಮಾಣದ ಕಿಕ್ ಬ್ಯಾಕ್ ಎಂದು ನಮ್ಮ ಮೇಲೆ ಕಾಂಗ್ರೆಸ್‌ನವರು ಆರೋಪಿಸಿದ್ದರು. ಒಂದು ಎಕರೆಗೆ 1.22ಲಕ್ಷ ರೂ ಕೊಡುವುದು ಎಂದರೇನು ಎಂಬ ಮಾತನ್ನು ನಮ್ಮ ಮೇಲೆ ಆರೋಪಿಸಿದರು. ಆಗ ಆರೋಪಿಸಿದವರೇ ಭೂಮಿ ಕೊಟ್ಟಿದ್ದಾರೆ. ಹಾಗಿದ್ದರೆ ನೀವು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರದಲ್ಲಿ ಕೊಡಬೇಕು. ಅಲ್ಲಿರುವ ಅದಿರು ನಿಕ್ಷೇಪಗಳ ಮೇಲೆ ಸರ್ಕಾರದ ಹಕ್ಕು ಎಂದು ಷರತ್ತಿನೊಂದಿಗೆ ಕೊಡಬೇಕು. ಹಾಗಾಗಿ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ತಿಳಿಸಿದ್ದಾರೆ.