ಕಿಕ್ಕೇರಿ: ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ನಿನ್ನೆ ( ಮೇ 24 ) ಬೆಳಿಗ್ಗೆ ನಡೆದಿದೆ.
ಗ್ರಾಮದ ಗಾಯತ್ರಮ್ಮ (45) ಎಂಬ ಮಹಿಳೆಯೇ ಮೃತಪಟ್ಟವರು. ಗಾಯತ್ರಮ್ಮ ಅವರು ಶುಕ್ರವಾರ ಬೆಳಗ್ಗೆ 6.30ರ ಸಮಯದಲ್ಲಿ ಗ್ರಾಮದ ಪಕ್ಕದಲ್ಲೇ ಇದ್ದ ತಮ್ಮ ಜಮೀನಿಗೆ ಹೋದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತಿಳಿಯದೇ ತುಳಿದಿದ್ದು, ಇದರಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಕಿಕ್ಕೇರಿ ಪೋಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರೇವತಿ ಮತ್ತು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಪಂಚನಾಮೆ ನಡೆಸಿ, ವಾರಸುದಾರರಿಗೆ ನೀಡಿದರು.