ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ಮಾಡಲು ಚಲನಚಿತ್ರ ನಟಿ, ಮಾಜಿ ಸಂಸದೆ ರಮ್ಯಾ ಅವರು ಸ್ಟಾರ್ ಪ್ರಚಾರಕರಾಗಿ ನೇಮಕಗೊಂಡಿದ್ದಾರೆ. ರಮ್ಯ ಅವರು ಇದೇ ಏ.೧೭ ಅಥವಾ ಏ.೨೦ ರಂದು ಮಂಡ್ಯದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಮಂಗಳವಾರ(ಏ.೧೦) ಹೇಳಿದರು.
ಒಕ್ಕಲಿಗರ ಭದ್ರಕೋಟೆಯಲ್ಲಿ ಪಾರುಪತ್ಯ ಸಾಧಿಸಲು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಕೈ ನಾಯಕರ ಪ್ರವಾಸದ ಬಗ್ಗೆ ಕೈ ಶಾಸಕ ರವಿಕುಮಾರ್ ಮಾಹಿತಿ ನೀಡಿದರು.
ಮೈತ್ರಿ ಅಭ್ಯರ್ಥಿ ಎಚ್‌ಡಿಕೆ ಪರವಾಗಿ ಸುಮಲತಾ ಪ್ರಚಾರ ಸಂಬಂಧ ಕಳೆದ ಚುನಾವಣೆಯಲ್ಲಿ ದಾಯಾದಿಗಳಾಗಿದ್ದ ಅಕ್ಕ-ತಮ್ಮ ಈ ಚುನಾವಣೆಯಲ್ಲಿ ಒಂದಾಗಿದ್ದಾರೆ. ಅವರ ಬಗ್ಗೆ ನಾವು ಯಾಕೆ ಮಾತನಾಡೋದು. ಈಗ ತಮ್ಮನ ಪರ ಅಕ್ಕ ಇದ್ದಾರೆ. ಅವರ ಚುನಾವಣೆ ಅವರದು, ನಮ್ಮ ಚುನಾವಣೆ ನಮ್ಮದು ಎಂದು ವ್ಯಂಗ್ಯವಾಡಿದರು.
ಇನ್ನು ಅಂಬರೀಶಣ್ಣನ ಅಭಿಮಾನಿಗಳು ಕಾಂಗ್ರೆಸ್ ಪರ ಇದ್ದಾರೆ. ಅಂಬರೀಶ್ ಬದುಕಿರುವವರೆಗೂ ಕಾಂಗ್ರೆಸ್ ಪಕ್ಷದವರಾಗಿಯೇ ಇದ್ದರು. ಕಳೆದ ಚುನಾವಣೆಯಲ್ಲಿ ತಮ್ಮ, ಅಕ್ಕನಿಗೆ ಕೊಟ್ಟ ಕಾಟವನ್ನ ಅಂಬಿ ಅಭಿಮಾನಿಗಳು ಮರೆಯುತ್ತಾರಾ? ಅಂಬರೀಶ್ ಅಭಿಮಾನಿಗಳು ಕಾಂಗ್ರೆಸ್ ಪರ ಇದ್ದು, ಈ ಬಾರಿ ಸ್ಟಾರ್ ಚಂದ್ರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.