ರಾಯಚೂರು: ಶ್ರೀರಾಮನು ಕೇವಲ ಬಿಜೆಪಿಗೆ ಮಾತ್ರ ಸೀಮಿತವಲ್ಲ, ದೇಶದ ಪ್ರತಿಯೊಬ್ಬರ ಜೊತೆಯೂ ಶ್ರೀರಾಮ ಇದ್ದಾನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಪರಿಪೂರ್ಣಗೊಳ್ಳದೆ ಉದ್ಘಾಟನೆ ಮಾಡುತ್ತಿರುವುದಕ್ಕೆ ಶಂಕರ ಮಠದ ಗುರುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಶ್ರೀರಾಮ ಇಡೀ ಭಾರತೀಯರ ರಾಮನಾಗಿದ್ದು, ಬಿಜೆಪಿಗೆ ಮಾತ್ರ ಸೀಮಿತವಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜನರ ಧಾರ್ಮಿಕ ಭಾವನೆಗಳ ನಂಬಿಕೆಗೆ ಅರ್ಹವಾಗಿದೆ ಎಂದಿದ್ದಾರೆ.
ಕಾಂತರಾಜ್ ವರದಿ ವಿಚಾರಕ್ಕೆ ಸಂಬಧಿಸಿದಂತೆ ರಾಜ್ಯದಲ್ಲಿ ಕಾಂತರಾಜ ವರದಿ ಜಾರಿಯಾಗಬೇಕು. ವರದಿ ಜಾರಿಗೆ ಮುಂದುವರಿದ ಜಾತಿಗಳು ಹಿಂದೇಟು ಹಾಕುತ್ತಿರುವುದು ಹಿಂದೇಟು ಹಾಕುವುದು ನಾಡಿನ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ. ಈ ಹಿಂದೆ ಹಾವನೂರು ವರದಿಗೂ ಇದೇ ರೀತಿ ವಿರೋಧವಿತ್ತು. ಮುಂದೆ ಜಾರಿಯಾಯಿತು. ಸಿಎಂ ಸಿದ್ದರಾಮಯ್ಯ ಅವರು ಕಾಂತರಾಜ ವರದಿ ಸಮೀಕ್ಷೆ ಸ್ವೀಕರಿಸಿ, ಯಾವುದೇ ಊಹಾಪೋಹಗಳಿಗೆ ಕಿವಿ ಕೊಡದೇ ಜಾರಿ ಮಾಡಿ ಎಂದು ಆಗ್ರಹಿಸಿದರು.





