ನವದೆಹಲಿ : 2023 ರ ವರ್ಲ್ಡ್ ಕಪ್ ಟ್ರೋಫಿ ಮೇಲೆ ಕಾಲಿಟ್ಟು ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದ ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್ ಮಾರ್ಷ್ ಇದೀಗ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾರಿಗೂ ಕೂಡ ಅಗೌರವ ತೋರಿಲ್ಲ, ಅದರ ಬಗ್ಗೆ ಹೆಚ್ಚಿಗೆ ಯೋಚನೆ ಮಾಡಿಲ್ಲ. ಸಾಕಷ್ಟು ಜನ ಆ ಫೋಟೊ ವೈರಲ್ ಆಗಿರುವ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದರು. ನಾನು ಅದನ್ನು ನೋಡಿರಲಿಲ್ಲ. ಅದರಲ್ಲಿ ಟೀಕಿಸುವ ವಿಚಾರ ಇಲ್ಲವೇ ಇಲ್ಲ ಎಂದಿದ್ದಾರೆ.
ಆರ್ ಟಿಐ ಕಾರ್ಯಕರ್ತ ಪಂಡಿತ್ ಕೇಶವ್ ಅವರು, ಮಿಚೆಲ್ ಮಾರ್ಷ್ ಅವರು ವರ್ಲ್ಡ್ ಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತದ್ದು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಆಲಿಗಢದಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ನವೆಂಬರ್ 19 ರಂದು ನಡೆದ ವರ್ಲ್ಡ್ ಕಪ್ 2023ರಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಬಗ್ಗುಬಡಿದು ಗೆಲುವಿನ ನಗೆ ಬೀರಿತ್ತು. ವರ್ಲ್ಡ್ ಕಪ್‌ಗೆ ಆಸ್ಟ್ರೇಲಿಯಾ ಗೆಲುವಿನ ಮುತ್ತಿಟ್ಟ ಬೆನ್ನಲ್ಲೇ ತಂಡದ ಆಟಗಾರ ಮಿಚೆಲ್ ಮಾರ್ಷ್, ವರ್ಲ್ಡ್ ಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತಿದ್ದದ್ದು ಜನರ ಗೆಂಗಣ್ಣಿಗೆ ಗುರಿಯಾಗಿತ್ತು. ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಮಿಚೆಲ್ ಅವರ ನಡೆಯನ್ನು ಜನ ತೀವ್ರವಾಗಿ ಖಂಡಿಸಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ವೈರಲ್ ಆಗಿದ್ದ ಫೋಟೋದಲ್ಲಿ ಮಿಚೆಲ್ ಅವರು ಎರಡೂ ಕಾಲುಗಳನ್ನು ವರ್ಲ್ಡ್‌ಕಪ್ ಟ್ರೋಫಿಯ ಮೇಲಿಟ್ಟು ಯಾವುದೋ ಪಾನೀಯವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಫೋಟೋವನ್ನು ತಂಡದ ನಾಯಕ ಕಮ್ಮಿನ್ಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ಮಿಚೆಲ್ ಅವರು ವರ್ಲ್ಡ್‌ಕಪ್ ಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಫೋಟೋ ಬಗ್ಗೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗುತ್ತಿದ್ದಂತೆ ಕಮ್ಮಿನ್ಸ್ ಅವರು ತಮ್ಮ ಪೊಸ್ಟನ್ನು ಡಿಲೀಟ್ ಮಾಡಿದ್ದರು.