ಇಂದು ( ನವೆಂಬರ್ 19 ) ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ಸೆಣಸಾಟ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಸಹ ಸೋಲದ ಟೀಮ್ ಇಂಡಿಯಾಗೆ ಐದು ಬಾರಿ ಟ್ರೋಫಿ ಎತ್ತಿ ಹಿಡಿದಿರುವ ಬಲಿಷ್ಟ ಆಸ್ಟ್ರೇಲಿಯಾ ಎದುರಾಳಿಯಾಗಿರುವುದು ಪಂದ್ಯದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ಎರಡೂ ತಂಡಗಳೂ ಸಹ ಬಲಿಷ್ಟತೆಯಿಂದ ಕೂಡಿದ್ದು ಯಾವ ತಂಡ ಗೆದ್ದು ಟ್ರೋಫಿ ಎತ್ತಿ ಹಿಡಿಯಲಿದೆ ಎಂಬುದು ಇಂದು ರಾತ್ರಿ ತಿಳಿಯಲಿದ್ದು, ಪಂದ್ಯ ಮುಗಿದ ಬಳಿಕ ಸಾಕಷ್ಟು ದಾಖಲೆಗಳು ನಿರ್ಮಾಣವಾಗಲಿವೆ. ಅದರಲ್ಲಿಯೂ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದರೆ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಹೆಸರಿನಲ್ಲಿ ಇಲ್ಲಿಯವರೆಗೂ ಯಾವುದೇ ಭಾರತೀಯನೂ ಸಹ ಮಾಡಿರದ ದಾಖಲೆ ನಿರ್ಮಾಣವಾಗಲಿದೆ.
ಹೌದು, ಭಾರತ ವಿಶ್ವಕಪ್ ಗೆದ್ದರೆ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಎರಡು ಬಾರಿ ವಿಶ್ವಕಪ್ ಗೆದ್ದ ಭಾರತೀಯ ಆಟಗಾರರು ಎಂಬ ದಾಖಲೆ ನಿರ್ಮಿಸಲಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿದ್ದಾಗ ತಂಡದಲ್ಲಿದ್ದ ಆಟಗಾರರ ಪೈಕಿ ಕೊಹ್ಲಿ ಹಾಗೂ ಅಶ್ವಿನ್ ಮಾತ್ರ ಈ ಬಾರಿಯ ವಿಶ್ವಕಪ್‌ನಲ್ಲಿಯೂ ಆಡಿದ್ದು ಈ ದಾಖಲೆ ನಿರ್ಮಿಸಲು ಅರ್ಹರಾಗಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಈಗಾಗಲೇ ಬೃಹತ್ ದಾಖಲೆಗಳನ್ನು ನಿರ್ಮಿಸಿದ್ದು ಭಾರತ ಇಂದು ಗೆದ್ದರೆ ಈ ದಾಖಲೆಯೂ ಸಹ ಕಿಂಗ್ ಹೆಸರಿಗೆ ಸೇರಲಿದೆ.