Mysore
22
broken clouds
Light
Dark

ಸಿಎಂಗೆ ಸೋಫಾ ಗಿಫ್ಟ್‌: ಹ್ಯೂಬ್ಲೋಟ್‌ ವಾಚ್‌ನ ಅಪ್ಡೇಟ್‌ ವರ್ಷನ್‌ ಎಂದ ಎಚ್‌ಡಿಕೆ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವರೊಬ್ಬರು ನೀಡಿರುವ ಸೋಫಾ ಸೆಟ್‌ ಕುರಿತು ಕಾಲೆಳೆದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಸಚವರೊಬ್ಬರು ನೀಡಿರುವ ವಿದೇಶಿ ಸೋಫಾ ಸೆಟ್‌ ಇದಾಗಿದ್ದು, ಹ್ಯೂಬ್ಲೋಟ್ ವಾಚ್‌ನ ಅಪ್ಡೇಟ್‌ ವರ್ಷನ್‌ ಎಂದು ಕುಟುಕಿದ್ದಾರೆ.

ಸಚಿವರು ನೀಡಿದ ಸೋಫಾ ಸೆಟ್‌ ಸುಮಾರು 1 ಕೋಟಿ 90 ಲಕ್ಷ ರೂಪಾಯಿ ಬೆಲೆ ಬಾಳುವ ಗಿಫ್ಟ್‌ ಇದಾಗಿದೆ ಎಂದು ಎಚ್‌ಡಿಕೆ ದೂರಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಗ್ಯಾರೆಂಟಿಗಳ ಬಗ್ಗೆ ತೆಲಂಗಾಣ ವಿಧಾನಸಭಾ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿ ಸಿಎಂ ಅವಮಾನಕ್ಕೀಡಾಗಿದ್ದಾರೆ. ಗ್ಯಾರೆಂಟಿ ಯೋಜನೆಗಳು ರಾಜ್ಯದ ಜನರ ಜೀವ ತೆಗೆದಿದೆ, ಗ್ಯಾರೆಂಟಿ ಹೆಸರಲ್ಲಿ ಕಾಂಗ್ರೆಸ್‌ ಮೋಸ ಮಾಡುತ್ತಿದೆ. ತೆಲಂಗಾಣ ಸೇರಿದಂತೆ ಪಂಚ ರಾಜ್ಯದ ಜನರು ಇವುಗಳಿಗೆ ಮರುಳಾಗಬಾರದು ಎಂದರು.

ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 2 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಮೊದಲು ಅವುಗಳನ್ನು ಭರ್ತಿ ಮಾಡಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲೊಬ್ಬರು ಡುಪ್ಲಿಕೇಟ್‌ ಮಂತ್ರಿ ಇದ್ದಾರೆ ಅವರು ತೆಲಂಗಾಣಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಿ ನಗೆಪಾಟಲಿಗೀಡಾಗಿದ್ದಾರೆ. ಗ್ಯಾರೆಂಟಿ ಎಂಬ ಸುಳ್ಳು ಭರವಸೆಗಳನ್ನು ಜನರಿಗೆ ನೀಡುತ್ತಾ ಕಿವಿಗೆ ಹೂವು ಮುಡಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ