ಮುಂಬೈ : ಉದ್ಯಮಿಯೊಬ್ಬರು ಆನ್‍ಲೈನ್ ಜೂಜಾಟದಲ್ಲಿ 5 ಕೋಟಿ ಗೆದ್ದು, ಬರೋಬ್ಬರಿ 58 ಕೋಟಿ ರೂ. ಕಳೆದುಕೊಂಡ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರದ ಉದ್ಯಮಿಯೊಬ್ಬರು ಆನ್‍ಲೈನ್ ಜೂಜಾಟದಲ್ಲಿ 58 ಕೋಟಿ ಕಳೆದುಕೊಂಡರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಶಂಕಿತ ವ್ಯಕ್ತಿಯೊಬ್ಬನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ 14 ಕೋಟಿ ರೂಪಾಯಿ ನಗದು, 4 ಕೆಜಿ ಚಿನ್ನ ಪತ್ತೆಯಾಗಿದ್ದು, ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದೆ. ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಈತನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಇದಕ್ಕೂ ಮುನ್ನವೇ ಜೈನ್ ದುಬೈಗೆ ಹಾರಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಉದ್ಯಮಿಗೆ ಪರಿಚಯವಾದ ಜೈನ್ ಆನ್‍ಲೈನ್ ಜೂಜಾಟದಿಂದ ಹಣ ಗಳಿಸಬಹುದೆಂದು ಪ್ರೇರೇಪಿಸಿದ್ದಾರೆ. ಆರಂಭದಲ್ಲಿ ನಿರಾಕರಿಸಿದ ಉದ್ಯಮಿ ಅಂತಿಮವಾಗಿ ಜೈನ್ ಮನವೊಲಿಕೆಗೆ ಒಪ್ಪಿಕೊಂಡರು. ಅಲ್ಲದೆ ಹವಾಲಾ ವ್ಯಾಪಾರಿಯ ಮೂಲಕ 8 ಲಕ್ಷವನ್ನು ವರ್ಗಾಯಿಸಿದ್ದಾರೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದರು.
ಈ ಆಟವಾಡುತ್ತಾ ಉದ್ಯಮಿ ಬರೋಬ್ಬರಿ 58 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ. ಆದರೆ ಯಾವುದೇ ಹಣ ಬಂದಿಲ್ಲ. ಈ ವೇಳೆ ಈತನಿಗೆ ಕೇವಲ 5 ಕೋಟಿ ರೂ. ಮಾತ್ರ ಲಾಭದ ರೀತಿಯಲ್ಲಿ ಗೇಮ್ ಮೂಲಕ ವಾಪಸ್ ಬಂದಿದೆ. ಇದರಿಂದ ಅನುಮಾನಗೊಂಡ ಉದ್ಯಮಿ ಹಣ ವಾಪಸ್ ನೀಡುವಂತೆ ಆರೋಪಿಗೆ ಕೇಳಿದ್ದಾರೆ ಇದಕ್ಕೆ ಆತ ಒಪ್ಪಲಿಲ್ಲ. ಹೀಗಾಗಿ ಹಣ ಕಳೆದುಕೊಂಡ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ.