ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಿ.ಎಸ್.ಯಡಿಯೂರಪ್ಪ ಅವರು ಹಳ್ಳಿಗಳಲ್ಲಿ ಸುತ್ತಾಡಿ ಪಕ್ಷವನ್ನು ಕಟ್ಟಿದ್ದಾರೆ. ಆದರೆ ಇತ್ತೀಚೆಗೆಷ್ಟೇ ಬಿಜೆಪಿಗೆ ಬಂದಿರುವ ರಮೇಶ್ ಜಾರಕಿಹೊಳಿ ಅವರು, ಅವರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಇಂದು(ಜನವರಿ.15) ರಮೇಶ್ ಜಾರಕಿಹೊಳಿ ಅವರ ಹೇಳಿಕೆಗಳಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ರಮೇಶ್ ಜಾರಕಿಹೊಳಿರವರು ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಬೇಕು. ಪಕ್ಷದಲ್ಲಿ ಅವರಿಗೆ ಸಮಸ್ಯೆಯಿದ್ದರೆ ಹೈಕಮಾಂಡ್‌ನೊಂದಿಗೆ ಚರ್ಚಿಸಿಕೊಳ್ಳಲಿ. ಅದನ್ನು ಬಿಟ್ಟು ಬಾಯಿಯನ್ನು ಹಿಡಿತದಲ್ಲಿಟ್ಟುಕೊಳ್ಳದೇ ಬಹಿರಂಗವಾಗಿ ಹೇಳಿಕೆಗಳನ್ನು ಸರಿಯಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿರುವುದರಿಂದ ಅವರ ಲಕ್ಷಾಂತರ ಅಭಿಮಾನಿಗಳಿಗೆ ನೋವಾಗುತ್ತದೆ. ಪಕ್ಷದಲ್ಲಿ ಕಾರ್ಯಕರ್ತರು ಅಸಮಾಧಾನವಾದರೇ ರಮೇಶ್ ಓಡಾಡುವುದೇ ಕಷ್ಟವಾಗುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವೂ ಸರಿಯಾಗುತ್ತದೆ. ಅವರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ ಎಂದರು.
ಬಿಜೆಪಿ ಪಕ್ಷಕ್ಕೆ ನಾನು ರಾಜ್ಯ ಅಧ್ಯಕ್ಷನಾದ ನಂತರ ನಿರಂತರ ಹೋರಾಟ ಮಾಡುತ್ತಿದ್ದೇನೆ. ಆದರೆ ಅಲ್ಲೊಬ್ಬರು, ಇಲ್ಲೊಬ್ಬರು ಮನಬಂದಂತೆ ಹೇಳಿದರೆ ಅದಕ್ಕೆಲ್ಲಾ ಉತ್ತರ ನೀಡಲು ನನ್ನ ಬಳಿ ಅಷ್ಟು ಸಮಯವಿಲ್ಲ ಎಂದು ತಿಳಿಸಿದರು.