ಹಾಸನ : ಅಳುತ್ತಲೇ ಪತಿಯ ಶವದ ಮುಂದೆ ಪತ್ನಿ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ಇಂದು ನಡೆದಿದೆ.
ರವೀಶ್ (39) ಹಾಗೂ ಪ್ರಮೀಳಾ (32) ಮೃತ ದಂಪತಿ. ನಿನ್ನೆ (ಮೇ.5) ರಾತ್ರಿ ರವೀಶ್ ಹೃದಯಾಘಾತದಿಂದ ಮೃತಪಟ್ಟಿದ್ದ. ಇಂದು ಬೆಳಗ್ಗೆ ಪತಿಯ ಶವದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ ಕೊನೆಯುಸಿರೆಳೆದಿದ್ದಾಳೆ.
ಒಂದೆಡೆ ದಂಪತಿ ಸಾವಿನಲ್ಲೂ ಒಂದಾದರೆ, ಇನ್ನೊಂದೆಡೆ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪಾಲಕರ ಶವಗಳ ಮುಂದೆ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ದಂಪತಿ ಸಾವಿಗೆ ಗ್ರಾಮಸ್ಥರು ಕೂಡ ಕಂಬನಿ ಮಿಡಿದಿದ್ದಾರೆ.
ಬೇಲೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಂಪತಿಯ ಅಂತಿಮ ಸಂಸ್ಕಾರ ಇಂದು ನಡೆಯಲಿದೆ.





