Mysore
19
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ವಸತಿ ಘಟಕ ವೆಚ್ಚ 3, 4 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾವ : ಸಚಿವ ಸೋಮಣ್ಣ

ಸಿ.ಎಂ.ರಿಂದ ಸಕಾರಾತ್ಮಕ ಸ್ಪಂದನೆ  ಎಂದ ಸಚಿವ ಸೋಮಣ್ಣ

ಚಾಮರಾಜನಗರ: ವಸತಿ ನಿರ್ಮಾಣ ಮೊತ್ತವನ್ನು ನಗರ ಪ್ರದೇಶದಲ್ಲಿ 4 ಲಕ್ಷಕ್ಕೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 3 ಲಕ್ಷಕ್ಕೆ ಏರಿಸುವ ಸಂಬಂಧ ಮುಖ್ಯಮಂತ್ರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ವಸತಿ ಯೋಜನೆಗಳ ಕುರಿತು ಸಭೆಯಲ್ಲಿ ಮಾತನಾಡಿದರು.
2013ರಲ್ಲಿ ಮನೆ ನಿರ್ಮಾಣದ ಘಟಕ ವೆಚ್ಚ 40 ಸಾವಿರ ರೂ.ಗಳಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 80 ಸಾವಿರ ರೂ.ಆಗಿತ್ತು. ಜಗದೀಶ್ ಶೆಟ್ಟರ್ ಸಿ.ಎಂ.ಆಗಿದ್ಧಾಗ 1.20 ಲಕ್ಷಕ್ಕೆ ಏರಿಸಲಾಯಿತು. ಅದನ್ನು ಈಗ ಹೆಚ್ಚಿಸುವ ಪ್ರಸ್ತಾವವನ್ನು ಸಿ.ಎಂ.ಬಸವರಾಜ ಬೊಮ್ಮಾಯಿ ಅವರ ಮುಂದೆ ಇಟ್ಟಿರುವುದಾಗಿ ಹೇಳಿದರು.
ಜಾತಿ, ಪಕ್ಷ ನೋಡದೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಅರ್ಹ ವಸತಿ ರಹಿತರನ್ನು ಆಯ್ಕೆ ಮಾಡುವಂತೆ ತಿಳಿಸಿದ ಸಚಿವರು, ಆಯಾಯ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಸಿ ಆದಷ್ಟು ಬೇಗ ಮನೆ ನಿರ್ಮಾಣ ಆದೇಶ ಪತ್ರ ನೀಡುವುದಾಗಿ ತಿಳಿಸಿದರು.
ತಹಸೀಲ್ದಾರ್, ತಾಪಂ ಇಒ, ಆರ್ ಐ, ಪಂಚಾಯತ್ ಅಧ್ಯಕ್ಷರು ಒಟ್ಟಿಗೆ ಕುಳಿತು ಅರ್ಹ ಫಲಾಣುಭವಿಗಳ ಪಟ್ಟಿ ತಯಾರಿಸಬೇಕು. ವಿಸಿಲ್ ಆಪ್ ಅನರ್ಹರ ತಡೆ ಬಂದೋಬಸ್ತ್ ಮಾಡುತ್ತಿದೆ ಎಂದು ಹೇಳಿದರು.
ಎಲ್ಲೆಲ್ಲಿ ನಿವೇಶನ ಜಾಗ ಗುರುತಿಸಬಹುದು, ನಿವೇಶನಗಳನು ಹಂಚಿಕೆ ಮಾಡಬಹುದು ಎಂಬುದರ ಬಗ್ಗೆ ಉಪ ವಿಭಾಗಾಧಿಕಾರಿ, ತಹಸೀಲ್ಧಾರ್ ಹಾಗೂ ತಾಪಂ ಇಒಗಳು ಇನ್ನು 15 ದಿನಗಳೊಳಗೆ ತಮ್ಮ ಕರ್ತವ್ಯ ಪೂರೈಸಬೇಕು ಎಂದರು.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಹಕ್ಕು ಪತ್ರ ನೀಡುವಾಗ ಗೊಂದಲ ಉಂಟಾದದ್ದು ಎಲ್ಲರಿಗೂ ಗೊತ್ತಿದೆ. ಅಲ್ಲಿ ನಿಜವಾದ ಬಡವರು ಯಾರಿದ್ದಾರೆ ಅವರಿಗೆ ವಾರದಲ್ಲಿ ಹಕ್ಕು ಪತ್ರ ನೀಡಬೇಕು. ಇದಕ್ಕೆ ಬೇಕಾದ ಅನುದಾನ ನೀಡುವುದಾಗಿ ಹೇಳಿದರು.
ಶಾಸಕ ಆರ್.ನರೇಂದ್ರ ಅವರು ಮಾತನಾಡಿ, ಗ್ರಾಪಂಗಳಲ್ಲಿ ಇ-ಸ್ವತ್ತನ್ನು ಕೆಲವರಿಗೆ ನೀಡುವುದು, ಇನ್ನು ಹಲವರಿಗೆ ನೀಡದಿರುವುದು ನಡೆಯುತ್ತಿದ್ದು ಇದು ದೊಡ್ಡ ಸಮಸ್ಯೆಯಾಗಿದೆ. ಏಕೆ ಹೀಗೆ ಆಗುತ್ತಿದೆ ಎಂಬುದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಪರಿಹರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಪಂ ಸಿಇಒ ಗಾಯತ್ರಿ, ಎಸ್ಪಿ ಶಿವಕುಮಾರ್, ಎಡಿಸಿ ಕಾತ್ಯಾಯಿನಿ ದೇವಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕಿ ದೀಪ ಜೆ.ಕಂಟ್ರಾಕ್ಟರ್‌, ಅಧಿಕಾರಿಗಳು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!