Mysore
21
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ತರೀಕೆರೆ ಏರಿಕೆ ಮೇಲೆ : ನ್ಯಾಯನಿಷ್ಠುರಿ ಲೋಕವಿರೋಧಿ

ನನ್ನ ಮೊದಲ ಪುಸ್ತಕ ‘ಪ್ರತಿಸಂಸ್ಕೃತಿ’ಯನ್ನು ಅಮ್ಮನಿಗೆ ಅರ್ಪಿಸಿದೆ- ‘ನ್ಯಾಯನಿಷ್ಠುರಿ ಲೋಕವಿರೋಽಯಾಗಿದ್ದ ಅಮ್ಮನಿಗೆ’ ಎಂದು. ಇದು ಮೂಲತಃ ಬಸವಣ್ಣನವರ ನುಡಿಗಟ್ಟು. ಈ ನುಡಿಗಟ್ಟಿನಲ್ಲಿ ಅಮ್ಮನನ್ನು ಬಣ್ಣಿಸಲು ಕಾರಣ, ಆಕೆಯಲ್ಲಿ ತಾನು ನಂಬಿದ ಸತ್ಯಕ್ಕಾಗಿ ಲೋಕವನ್ನು ಎದುರುಹಾಕಿಕೊಳ್ಳುವ ದಿಮಂತಿಕೆಯಿತ್ತು. ನಾನು ಪುಸ್ತಕ ಅರ್ಪಿಸುವ ಕಾಲಕ್ಕೆ ಆಕೆ ಈ ಲೋಕದಲ್ಲಿರಲಿಲ್ಲ. ಬಹುಶಃ ಬದುಕಿದ್ದರೆ ಗಾರೆ ಕೆಲಸಕ್ಕೆ ಹೋಗಿ ಐವತ್ತು ರೂಪಾಯಿಯನ್ನು ಕೈಯಲ್ಲಿಟ್ಟಾಗ ‘ನನ್ನ ಮುನ್ನ ದುಡಿದದ್ದು’ ಎಂದು ಹೆಮ್ಮೆಯಿಂದ ಹೇಳಿದಂತೆ, ‘ನನ್ನ ಮುನ್ನ ಬರೆದಿದ್ದು’ ಎನ್ನುತ್ತಿದ್ದಳೊ ಏನೋ.
ಬಡವಿಯಾಗಿಯೇ ಬದುಕನ್ನು ಕಳೆದ ಅಮ್ಮನ ವ್ಯಕ್ತಿತ್ವ ಅಷ್ಟೊಂದು ಕಟುವಾಗಲು ಏನು ಕಾರಣವೆಂದು ಇನ್ನೂ ಅರ್ಥವಾಗಿಲ್ಲ. ಬೆಳ್ಳಗಿದ್ದ ತನ್ನ ತಾಯಿಂದಲೇ ಅಪ್ಪನಂತೆ ಕಪ್ಪು ಮಗಳೀಕೆ ಎಂದು ತಾತ್ಸಾರಕ್ಕೆ ಈಡಾಗಿದ್ದಳು. ತಾಯಿ ಜೊತೆಗೆ ಯಾವ ಕಾರಣದಿಂದಲೊ ಜಗಳವಾಡಿ ಸಾಯುವ ತನಕ ಮಾತುಬಿಟ್ಟಿದ್ದಳು. ಆಕೆ ಅಪ್ಪನನ್ನು ಪ್ರೇಮವಿವಾಹವಾಗಿ ಊರಿಗೆ ಬಂದಾಗ, ಅಪ್ಪನ ದಾಯಾದಿಗಳಿಂದ ನಮ್ಮ ಹುಡುಗಿಯ ಅವಕಾಶ ಕಸಿದುಕೊಂಡಳೆಂಬ ದ್ವೇಷಕ್ಕೆ ಒಳಗಾಗಿದ್ದಳು. ತುಸು ಹಲ್ಲಂಡೆಯಾಗಿದ್ದ ಅಪ್ಪನನ್ನು ಹದ್ದುಬಸ್ತಿನಲ್ಲಿಡಲು ಕಠಿಣತೆ ರೂಢಿಸಿಕೊಳ್ಳುವುದು ಅವಳಿಗೆ ಅನಿವಾರ್ಯವಾಗಿತ್ತು. ಇಕ್ಕಟ್ಟಿನಲ್ಲಿ ಸಂಸಾರ ತೂಗಿಸಲು ಸಣ್ಣಪುಟ್ಟ ಸುಳ್ಳನ್ನು ಹೇಳುತ್ತಿದ್ದ ಅಪ್ಪನ ಚಾಲಾಕಿತನವನ್ನು ಅವಳು ವಂಚನೆ ಎಂದೇ ಭಾವಿಸಿದ್ದಳು. ಇದನ್ನು ಪ್ರತಿಭಟಿಸಿ ಉಪವಾಸ ಇರುವುದಕ್ಕೂ, ಅಪ್ಪನಿಂದ ಬೈಸಿಕೊಂಡು ಕೆಲವೊಮ್ಮೆ ಪೆಟ್ಟುತಿಂದು, ಮೌನವ್ರತ ಧರಿಸುವುದಕ್ಕೂ ಸಿದ್ಧವಿದ್ದಳು. ಭಾರತದಲ್ಲಿ ಬಹುಶಃ ಗಾಂದ ಬಿಟ್ಟರೆ ಅತಿಹೆಚ್ಚು ಉಪವಾಸ ಸತ್ಯಾಗ್ರಹ ಮಾಡಿದವಳು ಈಕೆಯೇ ಎಂದು ಅನಿಸುತ್ತಿತ್ತು. ಅವಳು ಸಾಯುವಾಗಲೂ ೨೪ ಗಂಟೆಯಿಂದ ಏನೂ ಸೇವಿಸಿರಲಿಲ್ಲ.

ಒಮ್ಮೆ ಸೊಲ್ಲಾಪುರ ಕಡೆಯಿಂದ ಬಂದಿದ್ದ ಕುರಿಗಾಹಿಗಳು ನಮ್ಮ ಬೀದಿಯ ಆಸುಪಾಸಲ್ಲಿದ್ದ ಹಳ್ಳ ಪೊದೆ ಗಿಡಮರಗಳಲ್ಲಿ ಕುರಿಗಳನ್ನು ಮೇಯಿಸಿಕೊಂಡು ಕೆರೆಯ ಕೋಡಿಯತ್ತ ಹೋದರು. ಹಾಗೆ ಹೋಗುವಾಗ ಯಾವುದೊ ಒಂದು ಕುರಿ, ಅಲ್ಲಿದ್ದ ದಟ್ಟವಾದ ಹುಲ್ಲನ್ನು ಮೇಯುತ್ತಲೊ ಬಳ್ಳಿಗೆ ಕೊರಳು ತೊಡರಿಯೊ, ಹಾದಿತಪ್ಪಿಯೊ ಪೊದೆಯೊಳಗೇ ಉಳಿದುಬಿಟ್ಟಿತು. ಮುಸ್ಸಂಜೆ ಹೊತ್ತು. ಅದರ ಕ್ಷೀಣವಾದ ‘ಬ್ಯಾಆಆಆ..’ ಕರೆ ಅಪ್ಪನಿಗೆ ಕೇಳಿಸಿತು. ಅತ ಬ್ಯಾಟರಿ ಹಿಡಿದು ಹಳ್ಳದತ್ತ ಹೋದವನೇ ಕುರಿಯನ್ನು ಹೊತ್ತುತಂದನು. ಅಮ್ಮ ‘ಕೊಟ್ಟಿಗೆಯಲ್ಲಿ ಕಟ್ಟಿಹಾಕೋಣ. ನಾಳೆ ಅವರು ಹುಡುಕಿಬರಬಹುದು. ಕೊಡೋಣ’ ಎಂದಳು. ಅಪ್ಪ ‘ತೂ ಏಕ್ ದಿವಾನಿ’ ಎಂದು ತಿರಸ್ಕಾರದಿಂದ ನಕ್ಕು, ಬಚ್ಚಲು ಮನೆಯಲ್ಲೇ ಕುರಿಯ ಹಲಾಲು ಮಾಡಿದನು. ಪಕಾಸಿಗೆ ಹಗ್ಗಕಟ್ಟಿ ಕುರಿಯ ಹಸಿಗೆ ಮಾಡಲಾಯಿತು. ಪಾತ್ರೆಯಲ್ಲಿ ಸಂಗ್ರಹವಾಗಿದ್ದ ರಕ್ತದಲ್ಲಿ ಲಾಕಿ ಮಾಡಲಾಯಿತು. ಚರ್ಮವನ್ನು ಗುಟ್ಟಾಗಿ ಚರ್ಮದಂಗಡಿಗೆ ರವಾನಿಸಲಾಯಿತು. ಬೋಟಿಯೊಳಗಿದ್ದ ಸಗಣಿಯನ್ನು ಮನೆ ದನಗಳ ಸಗಣಿ ಜತೆ ತಿಪ್ಪೆಗೆ ಹಾಕಲಾಯಿತು. ಖಂಡ ಭಾಗದ ಮಾಂಸವನ್ನು ಕೊಯ್ದು ಒಲೆಯ ಶಾಖಕ್ಕೆ ಹಗ್ಗಕಟ್ಟಿ ಕೊರಬಾಡಿಗೆ ಒಣಗಿಸಲಾಯಿತು. ಇಡೀ ವಾರಕಾಲ ಪ್ರತಿಹೊತ್ತು, ಕಲೀಜಾಫ್ರ್ತ್ಯೈ, ತಲೆಕಾಲು ಸಾರು, ಬೋಟಿ, ಮಟನ್‌ಸಾರು. ಅಮ್ಮ ಮೊದಲನೇ ದಿನ ಉಪವಾಸ ಇದ್ದಳು. ಎರಡನೇ ದಿನ ತನಗೇ ಬೇರೆ ಅನ್ನ ಬೇಯಿಸಿಕೊಂಡು ತಿಂದಳು. ಮಾಂಸ ಮುಟ್ಟಲಿಲ್ಲ. ಕದ್ದು ತಂದ ಕುರಿಯ ಮಾಂಸ ತಿಂದು, ಖಯಾಮತ್ತಿನ ದಿನ ದೇವರು ಕೇಳಿದರೆ ಏನೆಂದು ಹೇಳಲಿ? ಎಂಬುದು ಅವಳ ವಾದ. ಅಪ್ಪ ‘ಲೇ ನಾನೇನು ಅದನ್ನು ಕದಿಯಲ್ಲಿಲ್ಲ. ಅದು ಸಿಕ್ಕಿದ್ದು’ ಎಂದರೂ ಒಪ್ಪಲಿಲ್ಲ.

ಮನೆಯಲ್ಲಿ ಗಿಡ್ಡನೆಯ ಒಂದು ಮುದಿಹಸು ಇತ್ತು. ದಿನವೂ ಅರ್ಧಸೇರು ಹಾಲು ಕರೆಯುತ್ತಿತ್ತು. ಅಮ್ಮ ಮನೆಯ ಕರಾವನ್ನು ಮಾರಗೊಡಲಿಲ್ಲ. ‘ಹಾಲುಮಾರಿ ಯಾವ ಪಾಪಕ್ಕೆ ಹೋಗಲಿ?’ ಎನ್ನುತ್ತಿದ್ದಳು. ಮನೆಯ ಪರಿಸ್ಥಿತಿಯಲ್ಲಿ ಅವಳ ನೈತಿಕತೆ ನಿಷ್ಠುರತೆಗಳು ಹಾಸ್ಯಾಸ್ಪದ ಮತ್ತು ಅಪ್ರಾಯೋಗಿಕ ಎನಿಸುತ್ತಿದ್ದವು. ಆದರೆ ತನ್ನ ನಂಬಿಕೆಗೆ ಮಂದಿಯ ಜತೆ ಮುಖ ಹರಿದುಕೊಂಡು ಬದುಕುವ ಗುಣ ಅವಳಿಗೆ ಬಂದಿತ್ತು. ಕೆಲವೊಮ್ಮೆ ಸಣ್ಣ ವಿಷಯಕ್ಕೂ ಸಲ್ಲದ ಹಠ ಮಾಡುತ್ತಿದ್ದಳು. ಅಪ್ಪನ ಸಡಿಲ ಧಾರ್ಮಿಕ ಶ್ರದ್ಧೆಗೆ ಹೋಲಿಸಿದರೆ, ಅವಳು ಸಾಹುಕಾರರ ಮನೆಯ ಹೆಣ್ಣುಮಕ್ಕಳಿಗೆ ಕುರಾನ್ ಕಲಿಸಲು ಹೋಗುತ್ತಿದ್ದಳು. ಅವರು ಹದಿಯಾ (ಗೌರವ ಸಂಭಾವನೆ) ಕೊಡುತ್ತಿದ್ದರು. ಅವಳ ಈ ಧಾರ್ಮಿಕ ಶ್ರದ್ಧೆಗೆ ಹೊಂದಾಣಿಕೆಯಾಗದ ಹವ್ಯಾಸವೆಂದರೆ, ಸಿನಿಮಾ ಹುಚ್ಚು. ಇದನ್ನು ಅವಳ ಜೀವದ ಗೆಳತಿ ಪಟ್ಟಮ್ಮಾಳ್ ಹಿಡಿಸಿದಳೊ ಅವಳಿಗೆ ಈಕೆ ಹಿಡಿಸಿದಳೊ, ತಿಳಿಯದು. ಇಬ್ಬರೂ ಕೂಡಿ ಕನ್ನಡ-ತಮಿಳು ಸಿನಿಮಾಗಳನ್ನು ಯಥೇಚ್ಛ ನೋಡುತ್ತಿದ್ದರು. ಅಪ್ಪ ಸಿನಿಮಾ ನೋಡುತ್ತಿರಲಿಲ್ಲ. ಹತ್ತು ನಿಮಿಷ ಒಂದೆಡೆ ತಾಳ್ಮೆಯಿಂದ ಕೂರುವುದು ಅವನಿಗೆ ಸಾಧ್ಯವಿರಲಿಲ್ಲ. ವಿಶ್ರಾಮವಿಲ್ಲದೆ ಓಡುವ ಕುದುರೆಯಾತ. ನಮಗೂ ನೆಮ್ಮದಿಯಾಗಿ ಮಲಗಲು ಕೊಡದೆ, ಇನ್ನೂ ಬೆಳಕು ಹರಿಯುವ ಮೊದಲೇ ಕೆಮ್ಮಿ ಕ್ಯಾಕರಿಸಿ ಎಲ್ಲರನ್ನೂ ಎಬ್ಬಿಸುತ್ತಿದ್ದನು. ಅಮ್ಮ ಸೂರ್ಯವಂಶಿ, ಲೇಟಾಗಿ ಏಳುತ್ತಿದ್ದಳು. ಆಕೆಗೆ ದುಡಿಮೆಯ ನಡುವಿನ ಬಿಡುವು ಮುಖ್ಯವಾಗಿತ್ತು. ಆಕೆ ಚೌಕಾಬಾರ ಆಡುತ್ತಿದ್ದಳು. ಮಧ್ಯಾಹ್ನ ಮನೆಯಲ್ಲಿ ಚೌಕದ ಕಬ್ಬಿಣದ ಪಗಡೆಕಾಯಿಗಳು ಝಣತ್ಕಾರ, ಕವಡೆಯ ಚಳಪಳ ಸದ್ದು, ಉಜ್ಜಿದ ಹುಣಸೇಬೀಜ ಎಸೆತ ಇದ್ದೇ ಇರುತ್ತಿತ್ತು. ಎಷ್ಟೋ ಸಲ ನಮ್ಮನ್ನೂ ಚೌಕಾಬಾರಕ್ಕೆ ಸೇರಿಸಿಕೊಳ್ಳುತ್ತಿದ್ದಳು. ತೊಂಡೆಸೊಪ್ಪ್ಪಿನಿಂದ ಮಣ್ಣಿನ ನೆಲದ ಮೇಲೆ ಖಾಯ

ಮ್ಮಾಗಿ ಬರೆಯಲಾದ ಏಳುಮನೆಯ ಚೌಕಾಬಾರದ ಚಿತ್ರವು ನಮ್ಮ ಹಾಲಿನ ಮಧ್ಯಭಾಗದಲ್ಲಿ ಇತ್ತು. ಬೇಸರವಾದರೆ ‘ಮುನ್ನ ಚೌಕಾಬಾರ ಬರೆಯೊ’ ಎಂದು ಹೇಳುತ್ತಿದ್ದಳು. ನಾವು ಆಕೆಯನ್ನು ಆಟದಲ್ಲಿ ನಿರ್ದಯವಾಗಿ ಸೋಲಿಸುತ್ತಿದ್ದೆವು.

ಅಮ್ಮ ಚಿಕ್ಕವರಾದ ನನ್ನನ್ನೂ ಅಣ್ಣನನ್ನೂ ಕರೆದುಕೊಂಡು ಗಾಡಿ ಹೂಡಿಸಿ ಗಿಡಕ್ಕೆ ಹೋಗುತ್ತಿದ್ದಳು. ಸೌದೆ ತುಂಬಿಕೊಂಡು ಬಂಡಿ ಊರೊಳಗೆ ಪ್ರವೇಶಿಸುವಾಗ ಗಾಡಿಯಿಂದ ಇಳಿದು, ಕೆರೆಯ ಕೋಡಿಯ ಮೂಲಕ ಮನೆಗೆ ಬರುತ್ತಿದ್ದಳು. ಧರ್ಮದ ಕಟ್ಟುಪಾಡುಗಳು ಮಹಿಳೆಯರ ಮೇಲೆ ಈಗಿನಷ್ಟು ಆಗ ಇರಲಿಲ್ಲ. ಇದ್ದರೂ ದುಡಿಯುವವರು ಅವನ್ನು ಕೇರ್ ಮಾಡುತ್ತಿರಲಿಲ್ಲ. ದುಡಿಮೆ ಅಮ್ಮನಿಗೆ ನಮಾಜಿನಷ್ಟೇ ಪವಿತ್ರವಾದ ಸಂಗತಿಯಾಗಿತ್ತು. ದುಡಿಯಾಕೆ ಯಾಕೆ ನಾಚಿಕೆ, ಕಳ್ಳತನಕ್ಕೆ ನಾಚಿಕೆ ಎನ್ನುತ್ತಿದ್ದಳು. ಘನಘೋರ ಪ್ರಾಮಾಣಿಕತೆ, ಸಿಟ್ಟು, ತಾಂಬೂಲಪ್ರೇಮ, ಸಿನಿಮಾವ್ಯಸನ, ಹಠಮಾರಿತನ, ದುಡಿಮೆ, ರುಚಿಯಾದ ಅಡುವಿಕೆ, ಅವಳ ವ್ಯಕ್ತಿತ್ವದ ಹಲವು ಮುಖಗಳಾಗಿದ್ದವು.

ಅಮ್ಮನಿಗೆ ಮಗಳನ್ನು ಮದುವೆ ಮಾಡಿದ ಬಳಿಕ ಗರ್ಭ ಧರಿಸುವುದಕ್ಕೆ ಇಷ್ಟವಾಗಲಿಲ್ಲ. ಎಮರ್ಜನ್ಸಿ ದಿನಗಳಲ್ಲಿ, ಮನೆಯಲ್ಲಿದ್ದ ಹೆಂಗಸರನ್ನು ಬಲವಂತವಾಗಿ ಎಳದುಕೊಂಡು ಹೋಗಿ, ಮಕ್ಕಳಾಗದ ಆಪರೇಶನ್ ಮಾಡಿಸುತ್ತಿದ್ದರು. ಆಕೆಗೂ ಆಪರೇಶನ್ ಆಗಿದ್ದರೆ ಬದುಕಿರುತ್ತಿದ್ದಳೊ ಏನೊ. ಹೆದರಿ ದೂರದ ನಂಟರ ಮನೆಗೆ ಹೋಗಿ ತಪ್ಪಿಸಿಕೊಂಡಿದ್ದಳು. ಆದರೆ ಮುಂದೆ ನಾಟಿವೈದ್ಯರಲ್ಲಿ ಗರ್ಭಪಾತ ಮಾಡಿಕೊಳ್ಳುವ ಯತ್ನ ಪ್ರಾಣಕ್ಕೆ ಎರವಾಯಿತು. ಆಕೆಯ ಅಕಾಲಿಕ ಸಾವು ಕುಟುಂಬವನ್ನು ಛಿದ್ರಗೊಳಿಸಿತು. ಎಸೆಸೆಲ್ಸಿ ಪಾಸ್ ಮಾಡಿದ ನಾನು ಆಕೆಯ ಮುದ್ದಿನ ಮಗನಾಗಿದ್ದೆ. ಬಾಲ್ಯದಲ್ಲಿ ಕಾಯಿಲೆ ಬಿದ್ದು ಸರಿಯಾಗಿ ಹಾಲು ಕುಡಿಸದೆ ನನ್ನನ್ನು ಬಡಕಲುಗೊಳಿಸಿದ ಬಗ್ಗೆ ಆಕೆಗೆ ಪರಿತಾಪವಿತ್ತು. ನನಗೂ ಅವಳ ವಾತ್ಸಲ್ಯ ಇನ್ನೂ ಅನುಭವಿಸಬೇಕಿತ್ತು. ಅವಳ ಅಕಾಲಿಕ ಸಾವಿನಿಂದ ಮದುವೆಯಾಗದೇ ಇದ್ದ ಚಿಕ್ಕಕ್ಕ ‘ನನಗೆ ಹೆಚ್ಚು ಅನ್ಯಾಯವಾಯಿತು’ ಎನ್ನುವುದುಂಟು. ಆದರೆ ನಿಜವಾಗಿ ಅನ್ಯಾಯವಾಗಿದ್ದು ಎಳೆಗೂಸಾಗಿದ್ದ ತಮ್ಮ ಕಲೀಮನಿಗೆ. ಆಕೆಯ ಮುಖದ ನೆನಪೂ ಇಲ್ಲದ ಅವನು, ಬಾಳಿನುದ್ದಕ್ಕೂ ತಾಯ ಹುಡುಕಾಟದಲ್ಲೇ ಇದ್ದಾನೆ.

ಅಮ್ಮ, ಕಾಯಿಲೆ ಬಿದ್ದಾಗ ತನಗೆ ಮಕ್ಕಳು ಮಾಡುವ ಉಪಚಾರದಲ್ಲಿ ರವೆಯಷ್ಟು ನಿರ್ಲಕ್ಷ ವಾದರೂ, ಸಿಟ್ಟಿಗೆದ್ದು ‘ಅವರಿವರ ಕೈಕಾಲು ಹಿಡಿದು ಉಪಚಾರ ಮಾಡಿಸಿಕೊಳ್ಳದಂತೆ, ಜೀವ ಗಟ್ಟಿಯಾಗಿರುವಾಗಲೇ ಕರಕೊಂಡು ಬಿಡಪ್ಪ’ ಎಂದು ಅಲ್ಲಾನಲ್ಲಿ ಬೇಡುತ್ತಿದ್ದಳು. ‘ನಿಮ್ಮ ದುಡಿಮೆಯ ಕಾಸಿನಿಂದ ನನ್ನ ಕಫನ್ನಿಗೆ ಬಟ್ಟೆಯೂ ಬೇಡ ಕಂಡ್ರೊ’ ಎನ್ನುತ್ತಿದ್ದಳು. ಹಾಗೇ ಆಯಿತು. ಹಾಲಿನ ಋಣವನ್ನು ತೀರಿಸಲು ಆಕೆ ಅವಕಾಶವನ್ನೇ ಕೊಡಲಿಲ್ಲ. ಹೀಗಾಗಿ ನನ್ನ ಅರ್ಪಣೆಯಲ್ಲಿ ಆಕೆಗೆ ಕೃತಜ್ಞತೆ ಸಲ್ಲಿಕೆ; ಜತೆಗೆ ‘ಹಣ್ಣು ಮುದುಕಿಯಾಗಿ ಬೈದುಕೊಂಡು ಚೌಕಾಬಾರ ಆಡಿಕೊಂಡು ನಮ್ಮ ಜತೆ ಇರಬೇಕಿತ್ತು. ನಮ್ಮ ಏಳಿಗೆ ನೋಡಿ ಖುಷಿಪಡಬೇಕಿತ್ತು. ಬೇಗನೆ ತೀರಿಕೊಂಡು ಅನ್ಯಾಯ ಮಾಡಿದಳು’ ಎಂಬ ಕೋಪವೂ ದುಃಖವೂ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!