Mysore
27
overcast clouds

Social Media

ಗುರುವಾರ, 18 ಜೂನ್ 2026
Light
Dark

7ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ

ಸರ್ಕಾರ ಹಾಗೂ ಸಚಿವರನ್ನು ಅಣಕಿಸುವ ಭಜನೆ ಹಾಡುಗಳನ್ನು ಹಾಡಿ ಆಕ್ರೋಶ

ಮೈಸೂರು: ಕಬ್ಬಿನ ಬೆಲೆ ನಿಗದಿಗಾಗಿ ಕಬ್ಬು ಬೆಳೆಗಾರರ ಸಂಘದವರು ನಡೆಸುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆ ೭ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಸರ್ಕಾರ ಹಾಗೂ ಸಚಿವರನ್ನು ಅಣಕಿಸುವ ಭಜನೆ ಹಾಡುಗಳನ್ನು ಹಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಲಿಲ್ಲ. ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬಂದ ಮೇಲೆ ರೈತರ ಕುಂದು ಕೊರತೆಗಳ ಸಭೆಯನ್ನು ಈವರೆಗೂ ಕರೆದಿಲ್ಲ ಎಂದು ರೈತರು ಭಜನೆ ಮೂಲಕ ಜಿಲ್ಲೆಯಿಂದ ದೂರವಾದ ಮಂತ್ರಿ ಯಾತಕೆ, ರೈತರನ್ನು ಮರೆತೆ ಯಾತಕೆ, ಜನರಿಗೆ ಏನು ಮಾಡಿದೆ, ಇದು ನ್ಯಾಯವೇ? ಎಂದು ಹಾಡುತ್ತಾ ಸರ್ಕಾರ, ಮಂತ್ರಿಗಳನ್ನು ಅಣಕಿಸಿ ಪ್ರತಿಭಟನೆ ನಡೆಸಿದರು.

ಕಳೆದ ನಾಲ್ಕು ತಿಂಗಳುಗಳಿಂದ ಕಬ್ಬು ಬೆಳೆಗಾರರು ಕಬ್ಬಿನ ದರದಲ್ಲಿ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಿದ್ದರೂ ಇದರ ಬಗ್ಗೆ ಯಾರೂ ಮಾತನಾಡಿಲ್ಲ. ಕಬ್ಬು ಬೆಳೆಗಾರರು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇವರನ್ನು ಶಾಸಕರು, ಸಚಿವರು ಅಂತ ಹೇಳಬೇಕಾ? ರೈತ ದ್ರೋಹಿಗಳು, ಸಕ್ಕರೆ ಕಾರ್ಖಾನೆ ಗುಲಾಮರು ಅಂತ ಕರಿಬೇಕಾ?, ಶುಗರ್ ಮಾಫಿಯಾ ದೇಶದಲ್ಲಿ ಬಹುದೊಡ್ಡ ಮಾಫಿಯಾ ಆಗಿದೆ. ಈ ಮಾಫಿಯಾ ಕಬ್ಬು ಬೆಳೆಗಾರರನ್ನು ನಾಶ ಮಾಡುತ್ತಿದೆ ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಚುಂಚರಾಯನಹುಂಡಿ ಮಂಜು, ಸಿದ್ದರಾಮು, ನಂಜುಂಡಸ್ವಾಮಿ, ಮಲ್ಲಪ್ಪ, ಮಹದೇವ ಸ್ವಾಮಿ, ಮಹದೇವಪ್ಪ, ಶಿವಮೂರ್ತಿ ಕಾಳಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ, ಕೆಆರ್‌ಎಸ್ ರಾಮೇಗೌಡ, ಅಂಬಳೆ ಮಂಜುನಾಥ್ ಮುಂತಾದವರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!