ಮೈಸೂರು: ಹಿರಿಯ ಮುತ್ಸದ್ಧಿ ರಾಜಕಾರಣಿ, ಸಂಸದರಾಗಿದ್ದ ದಿವಗಂತ ವಿ.ಶ್ರೀನಿವಾಸ್‌ಪ್ರಸಾದ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಅಧ್ಯಯನ ಕೇಂದ್ರದಲ್ಲಿ ಬುಧುವಾರ ನುಡಿನಮನ ಕಾರ್ಯಕ್ರಮ ನಡೆಯಿತು.
ಮೈಸೂರಿನ ವಿಶ್ವಮೈತ್ರಿ ಬುದ್ದವಿಹಾರದ ಭಂತೆ ಡಾ.ಕಲ್ಯಾಣಸಿರಿ ಅವರು ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿನಮನ ಸಲ್ಲಿಸಿದರು. ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಹಾಗೂ ಇನ್ನಿತರ ಗಣ್ಯರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ ಆನಂದ್, ಕ್ರಿಕೆಟ್‌ಗೆ ಸಚ್ಚಿನ್ ತೆಂಡೂಲ್ಕರ್, ಕನ್ನಡಕ್ಕೆ ಡಾ.ರಾಜ್‌ಕುಮಾರ್ ಹಾಗಾಯೇ ಅಂಬೇಡ್ಕರ್ ಕುರಿತು ಮಾತನಾಡುವುದಕ್ಕೆ ಶ್ರೀನಿವಾಸ್‌ಪ್ರಸಾದ್ ಮಾದರಿಯಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಬಿಎಸ್‌ಪಿಯಿಂದ ದಲಿತ ವಿದ್ಯಾರ್ಥಿಗಳಲ್ಲಿ ರಾಜಕೀಯ ಶಕ್ತಿ ವೃದ್ಧಿಸುತ್ತಾ ಬಂತು. ದಲಿತ ಸಮುದಾಯದವರಲ್ಲಿ ಹೆಚ್ಚಿನ ಆಸ್ತಿಯಿಲ್ಲ, ನಮ್ಮ ಜನ ಜಮೀನ್ದಾರರಲ್ಲ. ಹಾಗಾಗಿ ನಮಗೆ ರಾಜಕೀಯದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಹಂತ ಹಂತವಾಗಿ ಹೋರಾಟ ನಡೆಸಿ, ತಳಮಟ್ಟದಿಂದ ಶ್ರಮಿಸಿ ರಾಜಕೀಯ ಅಧಿಕಾರ ಪಡೆಯಿರಿ ಎಂದು ಪ್ರಸಾದ್ ಅವರು ನಮಗೆ ಸಲಹೆ ನೀಡುತ್ತಿದ್ದರು ಎಂದು ತಿಳಿಸಿದರು.
ಮೈಸೂರಿನ ಮಹಾರಾಣಿ ಕಾಲೇಜು ಹಾಸ್ಟೆಲ್‌ನಲ್ಲಿ ದಲಿತ ಮತ್ತು ಇತರೆ ಜಾತಿಯ ಹೆಣ್ಣು ಮಕ್ಕಳ ನಡುವೆ ಗಲಾಟೆ ನಡೆದಾಗ ತುಂಬಾ ತಾಳ್ಮೆವಹಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರದಲ್ಲಿ ಅಂಬೇಡ್ಕರ್ ಜಯಂತಿ ವೇಳೆ ನಾಯಕತ್ವದ ವಿಚಾರವಾಗಿ ಉಂಟಾದ ವೈಮನಸ್ಸನ್ನು ಪ್ರಸಾದ್ ಅವರು ನಿಭಾಯಿಸಿದ್ದನ್ನು ಎಂದು ಮರೆಯಲಾಗದು. ಹೀಗೆ ಪ್ರಸಾದ್ ಮೈಸೂರು ಭಾಗದಲ್ಲಿ ದಲಿತ ನಾಯಕ ಸ್ಥಾನ ತುಂಬುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.
ಪ್ರಸಾದ್ ಅವರು ಸಮಾಜಶಾಸ್ತ್ರ ಹಾಗೂ ರಾಜಕೀಯ ಪ್ರಾಧ್ಯಾಪಕರಂತಿದ್ದರು. ಪಿ.ವಿ.ನರಸಿಂಹರಾವ್ ಅವರಿಗೆ ಆಫ್ರಿಕಾದ ಜನಾಂಗೀಯ ನಿಂದನೆ ಅಮಾನವೀಯ ಕಳಂಕ ಎನ್ನುವುದಾದರೆ ಭಾರತದಲ್ಲಿನ ಅಸ್ಪಶ್ಯತೆ ಏಕೆ ಕಾಣುವುದಿಲ್ಲ ಎಂದು ದಿಟ್ಟವಾಗಿ ಹೇಳುವ ಎದೆಗಾರಿಕೆ ಅವರಿಗಿತ್ತು. ಅವರ ವಿಚಾರ, ನಿಲುವು, ಅವರು ನೀಡುತಿದ್ದ ದಿಟ್ಟ ಹೇಳಿಕೆಗಳು ಮನಮುಟ್ಟುವಂತಿದ್ದವು ಎಂದರು.
ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಎಂ.ಬಿ.ಜಯಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.