ದೇಶದಲ್ಲಿ ೩೦ ಸಾವಿರ ಕಿ.ಮೀ.ದೂರದಷ್ಟು ದ್ವಿಪಥ ಹೆದ್ದಾರಿಗಳಿವೆ. ಇವುಗಳನ್ನು ೧೦ ಲಕ್ಷ ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥವಾಗಿ ನಿರ್ಮಾಣ, ನಿರ್ವಹಣೆ, ವರ್ಗಾವಣೆ, ಮಾದರಿಯಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ೧೫ ವರ್ಷಗಳವರೆಗೆ ಸಚಿವಾಲಯವೇ ಟೋಲ್ ಸಂಗ್ರಹಿಸಲಿದೆ. ಆ ನಂತರ ಖಾಸಗಿಯವರು ನಿರ್ವಹಿಸಲಿದ್ದಾರೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಬಹುತೇಕ ರಸ್ತೆಗಳನ್ನು ಅಲ್ಪ ಸ್ವಲ್ಪ ವಿಸ್ತರಿಸಿ, ಹೆದ್ದಾರಿ ಹಣೆ ಪಟ್ಟಿ ನೀಡಿ ಟೋಲ್ ಸಂಗ್ರಹಿಸಲಾಗುತ್ತಿದೆ. ೨೦-೩೦ ವರ್ಷಗಳ ಹಿಂದೆ ಟೋಲ್ ಸಂಗ್ರಹ ಆದರ ನಿರ್ಮಾಣ ವೆಚ್ಚವನ್ನು ಆಧರಿಸಿ ೪- ೫ ವರ್ಷ ಎಂದು ನಿಗದಿಯಾಗಿರುತ್ತಿತ್ತು. ಅಲ್ಲದೆ ಈಗಿನಂತೆ ಪ್ರತಿ ವರ್ಷ ಟೋಲ್ ಶುಲ್ಕ ಏರಿಕೆ ಮಾಡುವ ಪದ್ಧತಿಯೂ ಇರಲಿಲ್ಲ. ಆದರೆ ಈಗಿನ ಕೇಂದ್ರ ಸರ್ಕಾರ ಪ್ರತಿ ವರ್ಷ ಏರಿಕೆ ಮಾಡುತ್ತಾ, ಟೋಲ್ ಸಂಗ್ರಹವನ್ನು ಇಂತಿಷ್ಟು ವರ್ಷ ಎಂದು ನಿಗದಿ ಮಾಡಿ ಜನರನ್ನು ಹಗಲು ದರೋಡೆ ಮಾಡುತ್ತಿದೆ. ಈ ಬಗ್ಗೆ ಸರ್ಕಾರ ತನ್ನ ಧೋರಣೆಯನ್ನು ಬದಲಿಸಿ ಪ್ರಯಾಣಿಕ ಸ್ನೇಹಿಯಾಗಲಿ.
ಈಗಾಗಲೇ, ಟೋಲ್, ರಸ್ತೆ ತೆರಿಗೆ, ವಾಹನದ ಖರೀದಿ ಮೇಲಿನ ದುಬಾರಿ ಜಿ ಎಸ್ ಟಿ, ಪೆಟ್ರೋಲ್, ಡೀಸೆಲ್ ಮೇಲಿನ ದುಬಾರಿ ತೆರಿಗೆಗಳಿಂದ ಜನರು ಬಸವಳಿದಿದ್ದಾರೆ. ಆಡಳಿತಾರೂಢ ಸರ್ಕಾರಗಳು ಜನರ ಮೇಲಿನ ಹೊರೆ ತಗ್ಗಿಸಲು ಕಾಳಜಿ ವಹಿಸಬೇಕು.
-ಮುಳ್ಳೂರು ಪ್ರಕಾಶ್, ಮೈಸೂರು





