ಮೈಸೂರು: ಇಲ್ಲಿನ ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯವು ರಾಜ್ಯದ ಏಕೈಕ ವಿದ್ಯಾಲಯವಾಗಿದೆ. ಇದನ್ನು ಜಿಲ್ಲಾ ಹಾಗೂ ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸುವಂತೆ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗುವುದು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಪ್ರಕೃತಿ ಚಿಕಿತ್ಸಾ ಮತ್ತುಯೋಗ ವೈದೈಕೀಯ ವಿದ್ಯಾಲಯದ ವತಿಯಿಂದ 7ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ “ಆರೋಗ್ಯಕರ ಮುಪ್ಪು ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ” ಎಂಬ ದ್ಯೇಯದಡಿಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೂರ್ವಜರು ಪ್ರಾಕೃತಿಕ ಚಿಕಿತ್ಸೆಯಿಂದಲೇ ಕಾಯಿಲೆ ಗುಣಪಡಿಸಿಕೊಳ್ಳುತ್ತಿದ್ದರು. ಇಂತಹ ಪ್ರಾಕೃತಿಕ ಚಿಕಿತ್ಸಾ ಆಸ್ಪತೆಯು ರಾಜ್ಯದಲ್ಲಿ ಮೈಸೂರಿನಲ್ಲಿ ಮಾತ್ರ ಇದೆ. ರಾಜ್ಯಾದ್ಯಾಂತ ವಿದ್ಯಾರ್ಥಿಗಳು ಪ್ರಕೃತಿ ಚಿಕಿತ್ಸಾ ವ್ಯಾಸಂಗ ಮಾಡಲು ಮೈಸೂರಿಗೆ ಬರಬೇಕಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಅಥವಾ ವಿಭಾಗ ಮಟ್ಟದಲ್ಲಿ ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆಂದು ತಿಳಿಸಿದರು.
ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು ವಿದೇಶದಲ್ಲಿ ಹಾಗೂ ಅನೇಕರು ಸರ್ಕಾರಿ ಉದ್ಯೋಗದಲ್ಲಿಯೂ ಇದ್ದಾರೆ. 2006 ರಲ್ಲಿ ನಾಲ್ಕು ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು ಈ ಸಾಲಿಗೆ 50 ವಿದ್ಯಾರ್ಥಿಗಳಿಗೆ ಬಂದು ನಿಂತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಹೆಚ್ಚಾಗಲಿ ಎಂದು ಆಶಿಸಿದರು.
ಪುರುಷರ ನೂತನ ವಿದ್ಯಾರ್ಥಿ ನಿಲಯ ಉದ್ಘಾಟನೆ
ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮಿನಾರಾಯಣ ಶೆಣೈ, ಪ್ರಾಚಾರ್ಯ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಪುಟ್ಟಸ್ವಾಮಿ, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.