Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮುಡಾ ಹಗರಣ: ವಿಚಾರಣೆ ಗರಗಸ, ಸಾಗದ ಕೆಲಸ

ಕೆಲ ಅಧಿಕಾರಿಗಳು, ಸಿಬ್ಬಂದಿಗೆ ವಿಚಾರಣೆ ಸಂಕಷ್ಟ

ಕೆ.ಬಿ.ರಮೇಶನಾಯಕ

• ಕೆಲಸ ಮಾಡಲಾಗದ ಮನಸ್ಥಿತಿ; ವಿಚಾರಣೆಯತ್ತ ಚಿತ್ತ
• ಆಯುಕ್ತರು, ನಗರ ಯೋಜಕ ಸದಸ್ಯರು, ಕಾರ್ಯದರ್ಶಿ ಹೊರತಾಗಿ ಇತರರ ಅಲೆದಾಟ
• ಇನ್ನೂ ಮುಗಿಯದ ಕಡತಗಳ ತಲುಪಿಸುವ ಕೆಲಸ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದಲ್ಲಿ 50:50 ಅನುಪಾತದಡಿ ನಿವೇಶನಗಳ ಅಕ್ರಮ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಏಕಕಾಲದಲ್ಲಿ ಪ್ರತ್ಯೇಕವಾಗಿ ಮೂರು ತನಿಖಾ ಸಂಸ್ಥೆಗಳಿಂದ ನಡೆಯುತ್ತಿರುವ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಹೊಸದಾಗಿ ಬಂದ ಅಧಿಕಾರಿಗಳನ್ನು ಹೊರತುಪಡಿಸಿ ಹಳೆಯ ಅಧಿಕಾರಿ, ಸಿಬ್ಬಂದಿಗೆ ಕಚೇರಿ ಕೆಲಸಕ್ಕಿಂತ ಬೆಂಗಳೂರಿಗೆ ತೆರಳಿ ವಿಚಾರಣೆಗೆ ಹಾಜರಾಗುವುದು, ಕಡತಗಳನ್ನು ಕೊಂಡೊಯ್ಯುವುದೇ ಕಾಯಕ ಎಂಬಂತಾಗಿದೆ.

ಮುಡಾದ ಬಹುತೇಕ ಅಧಿಕಾರಿ, ಸಿಬ್ಬಂದಿಗೆ ಒಂದು ಕಡೆ ನೋಟಿಸ್ ಬಂದ ಕೂಡಲೇ ವಿಚಾರಣೆಗೆ ಹಾಜರಾಗಬೇಕು. ಇಂತಹದ್ದೇ ದಾಖಲೆ ತಲುಪಿಸುವಂತೆ ಹೇಳಿದ ತಕ್ಷಣವೇ ಮತ್ತೆ ಬೆಂಗಳೂರಿಗೆ ದೌಡಾಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹಲವರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ, ಹೀಗಾಗಿ, ಕಳೆದ ಒಂದು ತಿಂಗಳಿನಿಂದ ಮುಡಾದಲ್ಲಿ ವಿವಿಧ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪರಿಸ್ಥಿತಿ ಆಯೋಮಯವಾಗಿದೆ.

50:50 ಅನುಪಾತದಡಿ ನಿವೇಶನಗಳ ಅಕ್ರಮ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಮತ್ತೊಂದೆಡೆ ಹಣದ ವಹಿವಾಟು ನಡೆದಿರುವ ಅನುಮಾನದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಒಂದೇ ವಿಚಾರದ ಬಗ್ಗೆ ಮೂರು ತನಿಖಾ ಸಂಸ್ಥೆಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿರುವ ಪರಿಣಾಮವಾಗಿ ಮುಡಾ ಅಧಿಕಾರಿಗಳು, ಸಿಬ್ಬಂದಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಹೇಳಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಮೈಸೂರಿನಲ್ಲೇ ಇರುವ ಕಾರಣ ಯಾವುದೇ ಸಮಸ್ಯೆ ಆಗುತ್ತಿಲ್ಲ. ಆದರೆ, ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ, ಜಾರಿ ನಿರ್ದೇಶನಾಲಯ ಕಚೇರಿಗೆ ಮುಡಾ ಸಿಬ್ಬಂದಿ ಪ್ರತಿದಿನ ಹೋಗಿ ಬರುವಂತಾಗಿದೆ.

ಹಗರಣದ ತನಿಖೆ ವೇಳೆ ಹೊಸ ಹೊಸ ಅಂಶಗಳು ಗೊತ್ತಾಗುತ್ತಿದ್ದಂತೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸುವಂತೆ ತನಿಖಾ ಸಂಸ್ಥೆಗಳು ಅಥವಾ ಆಯೋಗದಿಂದ ಸೂಚನೆ ಬರುತ್ತಿದ್ದಂತೆ ಅಧಿಕಾರಿಗಳು ಅಲ್ಲಿಗೆ ದೌಡಾಯಿಸಬೇಕು. ಕೆಲವೊಮ್ಮೆ ಮಾಹಿತಿಗಳು ಅಪೂರ್ಣವಾಗಿದ್ದರೆ ಮತ್ತೆ ಮತ್ತೆ ಕರೆಯುತ್ತಿರುವುದರಿಂದ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ ಎನ್ನಲಾಗಿದೆ.

ಹಳಬರಿಗೆ ತಂದಿಟ್ಟ ಸಂಕಟ ಆಯುಕ್ತರು, ಕಾರ್ಯದರ್ಶಿ, ನಗರ ಯೋಜಕ ಸದಸ್ಯರು, ಅಧೀಕ್ಷಕ ಅಭಿಯಂತರರನ್ನು ಹೂರತುಪಡಿಸಿ ಇತರ ಎಲ್ಲ ಅಧಿಕಾರಿಗಳಿಗೂ ಈ ಹಗರಣ ಸಂಕಟ ತಂದೊಡ್ಡಿದೆ. ಹಿಂದಿನ ಆಯುಕ್ತರ ಅವಧಿಯಲ್ಲಿ ಮಾತ್ರ ನಗರ ಯೋಜಕ ಶಾಖೆ, ಭೂಸ್ವಾಧೀನ ಶಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ವಿಚಾರಣೆಗೆ ಕರೆಯಿಸಿ ಮಾಹಿತಿ ಪಡೆಯಲಾಗುತ್ತಿದೆ.

ಹಿರಿಯ ಅಧಿಕಾರಿಗಳ ಸೂಚನೆಯಂತೆ ನೋಟ್ ಮಾಡಿ ಕಡತಗಳನ್ನು ಮಂಡಿಸಿರುತ್ತೇವೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎನ್ನುವ ಮಾತನ್ನು ತನಿಖಾ ಸಂಸ್ಥೆಗಳ ಅಧಿಕಾರಿಗಳು ನಂಬುವ ಸ್ಥಿತಿಯಲ್ಲಿ ಇಲ್ಲ ಎಂಬುದು ಮುಡಾದ ಕೆಲ ಸಿಬ್ಬಂದಿ ಮನೋವೇದನೆಯ ಮಾತುಗಳು.

ನಾವು ಹಿರಿಯ ಅಧಿಕಾರಿಗಳ ಮಾತನ್ನು ಪಾಲಿಸಿದ್ದೇವೆ. ಆಯುಕ್ತರ ಹಂತದಲ್ಲಿ ಆಗುವ ತೀರ್ಮಾನಗಳು ನಮ್ಮ ಗಮನಕ್ಕೆ ಬರಲ್ಲ. ಕಡತಗಳು ಬಂದಾಗ ಅದನ್ನು ನೋಡಿ ಪರಿಶೀಲಿಸಿ ಸಂಖ್ಯೆ ನಮೂದಿಸುವುದು ನಮ್ಮ ಕರ್ತವ್ಯ. ಯಾರೋ ಮಾಡಿದ ತಪ್ಪಿಗೆ ನಾವು ವಿಚಾರಣೆ ಎದುರಿಸುತ್ತಿದ್ದೇವೆ. ಕಚೇರಿ ಕೆಲಸ ಮಾಡುವುದೆ? ಅಥವಾ ವಿಚಾರಣೆ ಎದುರಿಸುವುದೆ? ಎನ್ನುವಂತಹ ಸನ್ನಿವೇಶ ನಮ್ಮದಾಗಿದೆ ಎಂದು ಮುಡಾದ ಕೆಲ ಅಧಿಕಾರಿಗಳು, ಸಿಬ್ಬಂದಿ ಅಸಹಾಯಕತೆಯಿಂದ ಅಲವತ್ತುಕೊಳ್ಳುತ್ತಾರೆ.

ಸಿಬ್ಬಂದಿ ಅಳಲು:
ಮೈಸೂರು: ಒಂದೊಂದು ಪ್ರಶ್ನೆಗಳನ್ನು ಕೇಳುತ್ತಲೇ ಬಾಯಿ ಬಿಡಿಸುವ ಕೆಲಸ ಮಾಡಿರುವುದರಿಂದ ಅನೇಕರು ವಿಚಾರಣೆ ಎದುರಿಸುವ ಆತಂಕದಲ್ಲೇ ಕಾಲಕಳೆಯುತ್ತಿದ್ದಾರೆ. ವಿಚಾರಣೆಗೆ ಕರೆದಾಗಲೆಲ್ಲಾ ಹೋಗುತ್ತಿರುವ ಕಾರಣ ಕಚೇರಿಯ ಕೆಲಸಗಳು ನಡೆಯುತ್ತಿಲ್ಲ ಎಂಬುದು ಸಿಬ್ಬಂದಿಯೊಬ್ಬರ ಅಳಲು.

 

 

Tags: