ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಮುಂದುವರಿದಿದ್ದು, ಇಂದು ಮುಡಾ ಮಾಜಿ ಆಯುಕ್ತ ಕಾಂತರಾಜು ವಿಚಾರಣೆಗೆ ಹಾಜರಾಗಿದ್ದರು.
ಮುಡಾದ ಮಾಜಿ ಆಯುಕ್ತ ಕಾಂತರಾಜುರನ್ನು ಲೋಕಾಯುಕ್ತ ಎಸ್‌ಪಿ ಉದೇಶ್ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂತರಾಜು, ನನ್ನ ಅವಧಿಯ ಮುಡಾ ವ್ಯವಹಾರಗಳ ಬಗ್ಗೆ ಇಂದು ವಿಚಾರಣೆ ನಡೆಸಲು ಕರೆದಿದ್ದರು. ಕಳೆದ 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ. ಆಗ ಸಿದ್ದರಾಮಯ್ಯರ ಪತ್ನಿ ಪಾರ್ವತಿಯವರು ಪಡೆದಿದ್ದ ಭೂಮಿ ಪರಿಹಾರದ ಬಗ್ಗೆ ವಿಚಾರಣೆ ನಡೆದಿದೆ ಎಂದು ಮಾಹಿತಿ ನೀಡಿದರು.
ಇನ್ನು 2017ರಲ್ಲಿ ಪ್ರಾಧಿಕಾರದ ಸಭೆಯಲ್ಲಿ ಅಭಿವೃದ್ಧಿ ಪಡಿಸದ ಭೂಮಿ ಕೊಡಲು ತೀರ್ಮಾನ ಮಾಡಿದ್ದೆವು. ಇದೆಲ್ಲದರ ಬಗ್ಗೆ ವಿಚಾರಣೆ ನಡೆಸಿದ್ದಾರೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಯಾವುದನ್ನೂ ಹೆಚ್ಚಿಗೆ ಹೇಳಲು ಆಗುವುದಿಲ್ಲ. ಅಧಿಕಾರಿಯಾಗಿ ನನಗೂ ಕೂಡ ಕೆಲ ನಿರ್ಬಂಧಗಳಿವೆ ಎಂದರು.
ಇನ್ನು ಮಾಹಿತಿ ಪ್ರಕಾರ ಕಾಂತರಾಜು ಅವರನ್ನು ಎರಡು ಗಂಟೆಗೂ ಹೆಚ್ಚಿನ ಕಾಲ ಲೋಕಾಯುಕ್ತ ಎಸ್‌ಪಿ ಉದೇಶ್ ಅವರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದ್ದು, ಕೇಳಿದ ಎಲ್ಲಾ ಪ್ರಶ್ನೆಗೂ ಕಾಂತರಾಜು ಉತ್ತರ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.