Mysore
27
broken clouds

Social Media

ಮಂಗಳವಾರ, 08 ಅಕ್ಟೋಬರ್ 2024
Light
Dark

ಮುಡಾ ಹಗರಣ ; ಲೋಕಾಯುಕ್ತಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್‌ ಆರ್‌ ರಮೇಶ್‌ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಹಣಕಾಸು ಸಚಿವ, ಉಪಮುಖ್ಯಮಂತ್ರಿ ಹಾಗೂ ಸಿಎಂ ಆಗಿದ್ದ ವೇಳೆ ಭೂಹಗರಣ, ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ೪೦೦ಕ್ಕೂ ಹೆಚ್ಚು ಪುಟಗಳ ದಾಖಲೆಗಳ ಸಮೇತ ದೂರು ನೀಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್‌, ೧೯೯೭-೯೮ ರಲ್ಲಿ ಜೆಹೆಚ್‌ ಪಟೇಲ್‌ ಅವರ ಸರ್ಕಾರದಲ್ಲಿ ಡಿಸಿಎಂಯಾಗಿದ್ದ ಸಿದ್ದರಾಮಯ್ಯ ಅವರು ಸ್ವಾಧೀನ ಪಡಿಸಿಕೊಂಡ ದೇವನೂರು ಮೂರನೇ ಬಡಾವಣೆಯನ್ನು ಮುಡಾ ಕೈ ಬಿಡುವಂತೆ ಅಧಿಸೂಚನೆ ಹೊರಡಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೆ ೨೦೦೪-೦೫ ರಲ್ಲಿ ಧರ್ಮಸಿಂಗ್‌ ಅವರ ಸರ್ಕಾರದಲ್ಲೂ ಡಿಸಿಎಂಯಾಗಿದ್ದ ಸಿದ್ದರಾಮಯ್ಯ ಅವರು ಇದೇ ಭೂಮಿಯನ್ನ ಮೃತ ಲಿಂಗ ಎಂಬ ಹೆಸರಿನ ವ್ಯಕ್ತಿಯ ಹೆಸರಿನಲ್ಲಿ ಭೂ ಪರಿವರ್ತನೆ ಮಾಡಿಸಿದ್ದರು ಎಂದು ಆರೋಪ ಮಾಡಿದರು.

ಅಲ್ಲದೆ ಮೊದಲ ಬಾರಿಗೆ ಸಿಎಂ ಆಗಿದ್ದ ವೇಳೆ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಮೈಸೂರಿನ ವಿಜಯನಗರದ ೨ ಮತ್ತು ೩ ಬಡಾವಣೆಯಲ್ಲಿ ಸುಮಾರು ೩೯ ಸಾವಿರ ಚದರ ಅಡಿನ ೧೪ ನಿವೇಶನಗಳನ್ನು ಬದಲಿ ನಿವೇಶನ ಹೆಸರಿನಲ್ಲಿ ತಮ್ಮ ಹೆಸರಿಗೆ ಮಾಡುವಂತೆ ಮುಡಾ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುತ್ತಾರೆ. ನಂತರ ೨೦೨೨ ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಮಯದಲ್ಲಿ ಈ ೧೪ ನಿವೇಶನಗಳನ್ನು ತಮ್ಮ ಪತ್ನಿ ಪಾರ್ವತಿ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ದೇವನೂರು ಬಡಾವಣೆಯಲ್ಲಿ ಒಂದು ನಿವೇಶನ ಬೆಲೆ ೫-೬ ಕೋಟಿ ಇದ್ದರೆ, ವಿಜಯನಗರದಲ್ಲಿನ ೧೪ ಬಡಾವಣೆಗಳ ಬೆಲೆ ಸುಮಾರು ೫೦ ರಿಂದ ೬೦ ಕೋಟಿ. ಒಟ್ಟಿನಲ್ಲಿ ಪ್ರಭಾವಿ ಹುದ್ದೆಯಲ್ಲಿರುವಾಗಲೇ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಹಗರಣದಲ್ಲಿ ಭಾಗಿಯಾಗಿದ್ದಾರೆ. ಈಗಾಗಿ ಅವರ ವಿರುದ್ಧ ಹಾಗೂ ಆ ಸಮಯದಲ್ಲಿ ಮುಡಾದಲ್ಲಿದ್ದ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ಹೇಳಿದರು.

Tags: