ಮಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ. ಅವರನ್ನು ಎಲ್ಲರೂ ಯೂಟರ್ನ್ ಕುಮಾರಸ್ವಾಮಿ ಎಂದು ಕರೆಯುತ್ತಾರೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದರಲ್ಲಿ ಬುದ್ಧಿವಂತರು. ಹೀಗಾಗಿಯೇ ಜನ ಅವರನ್ನು ಯೂಟರ್ನ್ ಕುಮಾರಸ್ವಾಮಿ ಎಂದು ಕರೆಯುತ್ತಾರೆ. ಅವರಿಗೆ ಯಾವಾಗ ಏನು ಆಗಬೇಕು, ಹಾಗೆಲ್ಲಾ ಅವರು ಚೇಂಜ್ ಆಗುತ್ತಾರೆ ಎಂದು ಲೇವಡಿ ಮಾಡಿದರು.
ಇನ್ನು ಒಕ್ಕಲಿಗರ ಬಗ್ಗೆ ನಾನು ಎಂದಿಗೂ ಮಾತನಾಡಿಲ್ಲ, ಕೇವಲ ಕುಮಾರಸ್ವಾಮಿ ಅವರ ಬಗ್ಗೆ ಅಷ್ಟೇ ಮಾತನಾಡಿದ್ದೇನೆ. ನಾನು ಆದಿಚುಂಚನಗಿರಿ ಮಠದಲ್ಲಿ ಬೆಳೆದವನು. ಜೆಡಿಎಸ್‌ಗೆ ಬರುವ ಮುಂಚೆ ಕಾಂಗ್ರೆಸ್‌ನಲ್ಲಿದ್ದವನು. ಜೆಡಿಎಸ್‌ಗೆ ಹೋಗಲು ಮುಖ್ಯ ಕಾರಣ ಮಠದ ದೊಡ್ಡಸ್ವಾಮಿಗಳು. ಪ್ರತೀ ಶನಿವಾರ ಬಂದಾಗ ಅವರು ರಾತ್ರಿ ಮಲಗುವವರೆಗೂ ಅವರೊಂದಿಗೆಯೇ ಇದ್ದವನು ನಾನು. ಹೀಗಾಗಿ ನನಗೆ ಒಕ್ಕಲಿಗರ ಬಗ್ಗೆ ಅಪಾರ ಗೌರವವಿದೆ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.