ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಲಿ, ನಾವು ತೆಗೆದುಕೊಂಡ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿದಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.22) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಕರ್ನಾಟಕದ ಭಾಗದವರು. ಅವರ ಧ್ವನಿಯಲ್ಲಿ ಏರಿಳಿತಗಳಿರಬಹುದು. ಆದರೆ ರಾಜಕೀಯವಾಗಿ ನಮ್ಮ ಹೇಳಿಕೆ ಮತ್ತು ನಡವಳಿಕೆ ಪೂರಕವಾಗಿರಬೇಕು ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಪಕ್ಷದೊಂದಿಗೆ ಇದ್ದಾರೆ. ನಾವು ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಚುನಾವಣೆಯಿಂದ ಹಿಂದೆ ಸರಿದ್ದೇವೆ ಎಂದು ಚರ್ಚೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ನಾಯಕರಿಗೆ ವರದಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಇನ್ನು ರಾಜ್ಯಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಅವರು ಬರುವ ದಿನ ನಿಗದಿಯಾಗಿಲ್ಲ. ಕೇಂದ್ರದ ವರಿಷ್ಠರು ಯಾವುದೇ ತೀರ್ಮಾನದ ಕುರಿತು ಚರ್ಚೆ ಮಾಡಿಲ್ಲ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ನಮ್ಮ ಹೇಳಿಕೆಗೆ ನಾವು ಬದ್ಧರಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಯತ್ನಾಳ್ ಅವರಿಗೆ ಹೈಕಮಾಂಡ್ ನೋಟಿಸ್ ನೀಡಿರುವ ಬಗ್ಗೆ ಮಾತನಾಡಿದ ಅವರು, ನೋಟಿಸ್ ನೀಡಿರುವುದು ರಾಜಕೀಯವಲ್ಲ. ಈಗಾಗಲೇ ಯತ್ನಾಳ್ ಅವರು ಅದಕ್ಕೆ ಉತ್ತರ ನೀಡಿದ್ದಾರೆ. ಅವರೋಮದಿಗೆ ನಾವೆಲ್ಲಾ ಇದ್ದೇವೆ ಎಂದು ಹೇಳಿದರು.