ಹೊಸದಿಲ್ಲಿ : ಭಾರತ ಯಾವುದೇ ರೀತಿಯ ಉಗ್ರವಾದ ಹಾಗೂ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ಆಪರೇಷನ್ ಸಿಂದೂರ ಬಳಿಕ ಸೋಮವಾರ ದೇಶವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಮೋದಿ, ಭಯೋತ್ಪಾದನೆ ನಿರ್ಮೂಲನೆ ಮಾಡಲು ಭಾರತೀಯ ಸೇನೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದರು.
ಭಯೋತ್ಪಾದಕರ ಪಹಲ್ಗಾಮ ದಾಳಿಯು ಅನಾಗರಿಕ ಮುಖ ಎಂದು ಹೇಳಿದ ಮೋದಿ, ಅದು ನನಗೆ ವೈಯಕ್ತಿಕ ನೋವು ನೀಡಿದೆ. ನಮ್ಮ ಮಹಿಳೆಯರ ಹಣೆಯ ಸಿಂಧೂರ ತೆಗೆದರೆ ಅದರ ಪರಿಣಾಮ ಹೇಗಿರುತ್ತದೆ ಎಂದು ಇದೀಗ ಶತ್ರು ರಾಷ್ಟ್ರಗಳು ಅರಿತುಕೊಂಡಿವೆ ಎಂದು ಹೇಳಿದರು.
ಆಪರೇಷನ್ ಸಿಂದೂರ ಕೇವಲ ಹೆಸರಾಗಿರಲಿಲ್ಲ ಅದು ಭಾರತೀಯತೆಯ ಪ್ರತೀಕವಾಗಿದೆ ಎಂದ ಅವರು ನಾನು ಈ ಕಾರ್ಯಾಚರಣೆಯಲ್ಲಿ ನಮ್ಮ ಭದ್ರತಾ ಪಡೆಗಳನ್ನು ಅಭಿನಂದಿಸಲು ಬಯಸುತ್ತೇನೆ ಎಂದರು.
ಭಾರತ ಯಾವುದೇ ಪರಮಾಣು ಬೆದರಿಕೆಯನ್ನು ಸಹಿಸುವುದಲ್ಲಿ. ಪಾಕಿಸ್ತಾನದ ವಿರುದ್ಧ ನಮ್ಮ ಕಾರ್ಯಾಚರಣೆ ಸ್ಥಗಿತವಾಗಿದೆ ಅಷ್ಟೆ ನಿಂತಿಲ್ಲ. ಪಾಕಿಸ್ತಾನದ ನಡವಳಿಕೆ ಮೇಲೆ ನಮ್ಮ ಕಾರ್ಯಾಚರಣೆ ಅವಲಂಬಿಸಿರುತ್ತದೆ. ಆಪರೇಷನ ಸಿಂದೂರ ಭಯೋತ್ಪಾದನೆ ವಿರುದ್ಧ ಭಾರತದ ಹೊಸ ನೀತಿಯಾಗಿದೆ ಎಂದು ಅವರು ಹೇಳಿದರು.
ಮಾತುಕತೆಗೆ ಒಪ್ಪುವುದೇ ಆದರೆ….
ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಇರಲು ಸಾಧ್ಯವಿಲ್ಲ. ರಕ್ತ ಮತ್ತು ನೀರು ಸಹ ಒಟ್ಟಿಗೆ ಇರಲು ಸಾಧ್ಯವಿಲ್ಲ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದೇ ಆದರೆ, ಅದು ಭಯೋತ್ಪಾದಕರ ಹಸ್ತಾಂತರ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ವಿಚಾರವೇ ಇರುತ್ತದೆ ಎಂಬುದನ್ನು ಸ್ಪಷ್ಟಪಡಿಸಿದರು.





