Mysore
15
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಡ್ರೋನ್‌ಯುದ್ಧ : ಸೋಲಿನ ಭೀತಿಯಲ್ಲಿ ಪಾಕ್

ಜಮ್ಮು-ಕಾಶ್ಮೀರದ ಪಹಲ್ಗಾಮ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಸಿಡಿದಿರುವ ಭಾರತ ಮತ್ತು ಪಾಕಿಸ್ತಾನದ ನಡುವಣ ಯುದ್ಧ ನಿಲುಗಡೆಯಾಗುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಮಾನವ ರಹಿತ ಡ್ರೋನ್‌ಗಳು ಈ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ಇದು ಡ್ರೋನ್ ವಾರ್ ಎಂದೇ ಖ್ಯಾತವಾಗಿದೆ.

ಈ ಸಂಘರ್ಷದ ನಿಲುಗಡೆಗೆ ಮಧ್ಯಸ್ಥಿಕೆ ವಹಿಸಬಹುದಾದ ಅಮೆರಿಕ ಈ ವಿಚಾರದಲ್ಲಿ ಕೈಚೆಲ್ಲಿದೆ. ಯುದ್ಧ ನಡೆಯುತ್ತಿರುವಾಗ ಅಲ್ಲಿ ತಮಗೇನೂ ಕೆಲಸವಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆ. ಡಿ. ವಾನ್ಸ್ ಹೇಳಿದ್ದಾರೆ. ಹಲವಾರು ದಶಕಗಳಿಂದ ಪಾಕಿಸ್ತಾನ ಪರ ನಿಂತಿದ್ದ ಅಮೆರಿಕ ಈಗ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಅಮೆರಿಕ ಈಗ ಭಾರತವನ್ನು ಬೆಂಬಲಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯುದ್ಧ ಉಲ್ಬಣಗೊಳಿಸಬೇಡಿ, ಮಾತುಕತೆ ನಡೆಸಿ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಗುಟೆರಸ್ ಕರೆ ನೀಡಿ ಸುಮ್ಮನಾಗಿದ್ದಾರೆ. ಪಾಕಿಸ್ತಾನದ ಮಿತ್ರ ದೇಶವಾಗಿರುವ ಚೀನಾ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಎರಡೂ ದೇಶಗಳಿಗೆ ಕರೆ ನೀಡಿ ಸುಮ್ಮನಾಗಿದೆ. ಯುದ್ಧ ಮುಂದುವರಿದ ಸಂದರ್ಭದಲ್ಲಿ ಚೀನಾ ಯಾವ ನಿಲುವು ತೆಗೆದುಕೊಳ್ಳುತ್ತದೆ ಎನ್ನುವುದು ಈ ಸಂದರ್ಭದಲ್ಲಿ ಊಹೆಗೆ ಮೀರಿದ್ದಾಗಿದೆ. ಇನ್ನು ರಷ್ಯಾ ತನ್ನದೇ ಉಕ್ರೇನ್ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಈ ವಿಚಾರದಲ್ಲಿ ತಲೆಹಾಕುವಷ್ಟು ಅಧ್ಯಕ್ಷ ಪುಟಿನ್‌ಗೆ ಸಮಯವಿಲ್ಲ. ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಮತ್ತು ಅದಕ್ಕಾಗಿ ನಿರ್ಬಂಧಗಳಿಗೆ ಒಳಗಾಗಿರುವ ಇರಾನ್ ಈ ಯುದ್ಧ ನಿಲ್ಲಿಸಲು ಪ್ರಯತ್ನಿ ಸುತ್ತಿರುವುದು ಒಂದು ವಿಚಿತ್ರ ಬೆಳವಣಿಗೆ. ವಿಶ್ವಸಂಸ್ಥೆಯಲ್ಲಿ ಈ ಯುದ್ಧದ ವಿಷಯ ಚರ್ಚೆಗೆ ಬಂದಾಗ ಪಾಕಿಸ್ತಾನವನ್ನು ಬೆಂಬಲಿಸಲು ಯಾವ ದೇಶವೂ ಮುಂದೆ ಬರಲಿಲ್ಲ. ಪಾಕಿಸ್ತಾನದ ಸಾರ್ವಭೌಮತೆಗೆ ಭಂಗ ಉಂಟುಮಾಡಲು ಬಿಡುವುದಿಲ್ಲ ಎಂದಷ್ಟೇ ಚೀನಾ ಹೇಳಿದೆ. ಪಾಕಿಸ್ತಾನದ ಭಯೋತ್ಪಾದಕರ ದಾಳಿಗೆ ತನ್ನ ತಂತ್ರಜ್ಞರೂ ಸತ್ತಿರುವ ನಿದರ್ಶನ ಅದಕ್ಕೆ ತಿಳಿದಿದೆ. ಭಯೋತ್ಪಾದನೆಯ ಕರಾಳ ಮುಖ ಚೀನಾದ ನಾಯಕರಿಗೆ ತಿಳಿಯದೆ ಇಲ್ಲ. ಹೀಗಾಗಿ ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಒಂಟಿಯಾದಂತೆ ಸದ್ಯಕ್ಕೆ ಕಾಣುತ್ತಿದೆ.

ಹಿಂಸೆ ಮತ್ತು ಅಸ್ಥಿರತೆಯ ಮಧ್ಯೆಯೇ ಹುಟ್ಟಿದ ಪಾಕಿಸ್ತಾನ ಸ್ವಾತಂತ್ರ್ಯಾನಂತರದ ಏಳು ದಶಕಗಳಿಗೂ ಹೆಚ್ಚು ಕಾಲದಲ್ಲಿ ಸಾಧಿಸಿದ ಅಭಿ ವೃದ್ಧಿ ಹೇಳಿಕೊಳ್ಳುವಷ್ಟೇನೂ ಇಲ್ಲ. ಭಾರತ ವಿಭಜನೆ ಮತ್ತು ಪ್ರತ್ಯೇಕ ಪಾಕಿಸ್ತಾನ ದೇಶ ರಚನೆಯ ಮುಂಚೂಣಿಯಲ್ಲಿದ್ದ ಶ್ರೀಮಂತ ಉದ್ಯಮಿಗಳ ಕುಟುಂಬಗಳೇ ಅಧಿಕಾರದ ಚುಕ್ಕಾಣಿ ಹಿಡಿದು ಸ್ವಹಿತಾಸಕ್ತಿ ಸಾಧಿಸುತ್ತಾ ಬಂದಿವೆ. ಇವರ ಜೊತೆ ಸೇನಾಧಿಕಾರಿಗಳೂ ಸೇರಿಕೊಂಡರು. ಸ್ವಹಿತಾಸಕ್ತಿ ಅನೇಕ ಬಾರಿ ಎರಡೂ ಶಕ್ತಿ ಕೇಂದ್ರಗಳ ನಡುವೆ ಒಡಕು ಮೂಡಲೂ ಕಾರಣವಾದದ್ದಿದೆ. ಈ ಹೋರಾಟದಲ್ಲಿ ಸೇನಾಧಿಕಾರಿಗಳು ಮೇಲುಗೈ ಸಾಧಿಸಿದ್ದಾರೆ. ಹೀಗಾಗಿ ರಾಜಕೀಯ ನಾಯಕರು ಸೇನಾಧಿಕಾರಿಗಳ ಕೈಗೊಂಬೆಗಳಾಗಿದ್ದಾರೆ. ರಾಜಕಾರಣಿಗಳಂತೆ ಸೇನಾಧಿಕಾರಿಗಳೂ ದೇಶದಲ್ಲಿ ಉದ್ಯಮಗಳ ಒಡೆಯರಾಗಿದ್ದಾರೆ, ವಿದೇಶಗಳಲ್ಲಿ ಅಪಾರ ಹಣ ತೊಡಗಿಸಿದ್ದಾರೆ. ಐಶಾರಾಮಿ ಮನೆಗಳ ಒಡೆಯರಾಗಿದ್ದು ಸಾಕಷ್ಟು ಶ್ರೀಮಂತರಾಗಿದ್ದಾರೆ. ಹೀಗಾಗಿಯೇ ಪಾಕಿಸ್ತಾನದಲ್ಲಿ ಅಸ್ಥಿರತೆ ನೆಲೆಸಿರುವುದಕ್ಕೆ ಮುಖ್ಯ ಕಾರಣ ಈ ಎರಡು ಗುಂಪುಗಳ ನಡುವಣ ಅಽಕಾರಕ್ಕಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟ. ಈ ಎರಡೂ ಗುಂಪುಗಳಿಗೆ ಉಗ್ರರಾಷ್ಟ್ರೀಯವಾದವೇ ಬಂಡವಾಳ. ಅದರಲ್ಲಿಯೂ ಕಾಶ್ಮೀರ ವಿಚಾರದಲ್ಲಿ ಸದಾ ಜನರಲ್ಲಿ ಭಾವೋದ್ರೇಕವನ್ನು ಉಂಟುಮಾಡಿ ಅದರ ರಾಜಕೀಯ ಲಾಭ ಗಳಿಸಲಾಗುತ್ತಿದೆ. ಇದಕ್ಕಾಗಿ ಪಾಕಿಸ್ತಾನದ ರಾಜಕಾರಣಿಗಳು ಮತ್ತು ಮಿಲಿಟರಿ ಅಧಿಕಾರಿಗಳು ಬಳಸುತ್ತಾ ಬಂದ ಅಸ್ತ್ರ ಭಯೋತ್ಪಾದನೆ. ಕಾಶ್ಮೀರ ದಲ್ಲಿ ಭಯೋತ್ಪಾದನೆ ಕೃತ್ಯ ನಡೆಸುವುದನ್ನು ಒಂದು ಕೈಗಾರಿಕೆಯಂತೆಯೇ ಅಭಿವೃದ್ಧಿ ಮಾಡಲಾಗಿದೆ. ಉಗ್ರವಾದಿಗಳಿಗೆ ತರಬೇತಿ, ಅಗತ್ಯ ಯುದ್ಧಾಸ್ತ್ರಗಳ ಸರಬರಾಜು, ಭಯೋತ್ಪಾದನೆಗೆ ಬೆಂಬಲದ ಜಾಲ ನಿರ್ಮಾಣ ಹೀಗೆ ಹಲವು ರೀತಿಯಲ್ಲಿ ಈ ಕೈಗಾರಿಕೆ ಬೆಳೆದಿದೆ. ಈ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮಾರ್ಗದರ್ಶನದಲ್ಲಿ ಭಯೋತ್ಪಾದನೆ ಕೈಗಾರಿಕೆ ನಡೆಯುತ್ತಾ ಬಂದಿದೆ.

ಪಾಕಿಸ್ತಾನ ಬಡ ದೇಶ. ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗಿಲ್ಲ. ದೇಶದ ಬಹುಪಾಲು ಹಣ ಭಯೋತ್ಪಾದನೆ ಕೈಗಾರಿಕೆಗೆ ಬಳಕೆಯಾದರೆ ಅಭಿವೃದ್ಧಿಗೆ ಇನ್ನೆಲ್ಲಿ ಹಣ. ಅರಬ್ ದೇಶಗಳಿಂದ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ತಂದ ಸಾಲದ ಹಣವೂ ಭಯೋತ್ಪಾದನೆ ಕೈಗಾರಿಕೆಗೆ ಬಳಕೆಯಾಗುತ್ತಿದೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಿಲುವು ಗೊತ್ತಿರು ವುದೇ ಆಗಿದೆ. ಆದರೆ ಕಾಶ್ಮೀರದಲ್ಲಿನ ಜನರ ನಿಲುವಿಗೂ ಪಾಕಿಸ್ತಾನದ ನಿಲುವಿಗೂ ಹೊಂದಾಣಿಕೆ ಇಲ್ಲ. ಕಾಶ್ಮೀರದ ಜನರು ಸ್ವತಂತ್ರ್ಯ ದೇಶವಾಗುವುದನ್ನು ಬಯಸಿ ಆಜಾದ್ ಕಾಶ್ಮೀರ್ ಚಳವಳಿಯನ್ನು ನಡೆಸುತ್ತಾ ಬಂದಿದ್ದಾರೆ. ಆದರೆ ಪಾಕಿಸ್ತಾನದ ನಾಯಕರು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಎಂದು ಬಯಸುತ್ತಾರೆ. ತಮ್ಮ ಗುರಿ ಸಾಧಿಸಲು ಪಾಕಿಸ್ತಾನದ ನಾಯಕರು ಆಜಾದ್ ಕಾಶ್ಮೀರ ನಾಯಕರಿಗೆ ಬೆಂಬಲ ಕೊಡುತ್ತ ಬಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ನಮ್ಮದು ಎಂದು ಭಾರತ ಘೋಷಣೆ ಮಾಡಿಯಾಗಿದೆ. ಚುನಾವಣೆಗಳೂ ನಡೆದಿವೆ. ಜನರು ಪ್ರತಿನಿಧಿಗಳನ್ನು ಆಯ್ಕೆಮಾಡಿದ್ದಾರೆ. ಆದರೆ ಇದನ್ನು ಪಾಕಿಸ್ತಾನ ಒಪ್ಪಿಲ್ಲ. ಭಯೋತ್ಪಾದನೆಯ ಮೂಲಕ ಕಾಶ್ಮೀರವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಪಾಕಿಸ್ತಾನ ನಡೆಸುತ್ತಾ ಬಂದಿದೆ. ಹೀಗಾಗಿ ಸಂಘರ್ಷ ನಡೆಯುತ್ತಿದೆ. ಯುದ್ಧಗಳು ನಡೆದಿವೆ. ಎಲ್ಲ ಮೂರೂ ಯುದ್ಧ ಗಳಲ್ಲಿ ಪಾಕಿಸ್ತಾನ ಸೋತಿದೆ. ಆದರೂ ಪಾಕಿಸ್ತಾನ ತನ್ನ ನಿಲುವನ್ನು ಬದಲಿಸಿ ಕೊಂಡಿಲ್ಲ. ಏಕೆಂದರೆ ಅದು ರಾಜಕೀಯ ಅಽಕಾರ ತಂದುಕೊಡುವ ಅಸ್ತ್ರ.

ಶೀತಲ ಸಮರದ ಕಾಲದಲ್ಲಿ ಹಿಂದಿನ ಸೋವಿಯತ್ ಒಕ್ಕೂಟ ಆಫ್‌ಗಾನಿಸ್ತಾನವನ್ನು ವಶಮಾಡಿಕೊಂಡಿತು. ಇದನ್ನು ಅಮೆರಿಕ ವಿರೋಧಿಸಿತು. ಸೋವಿಯತ್ ಅತಿಕ್ರಮಣದ ವಿರುದ್ಧ ಹೋರಾಡಲು ಅಮೆರಿಕ ಇಸ್ಲಾಂ ಧರ್ಮ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು (ಮುಜಾಹಿದ್ದೀನ್) ಬಳಸಿಕೊಂಡಿತು. ಅವರಿಗೆ ಯುದ್ಧಾಸ್ತ್ರಗಳನ್ನು ಅಮೆರಿಕ ಪೂರೈಸಿತು. ಈ ಸಂದರ್ಭದಲ್ಲಿ ಅಮೆರಿಕ ಪಾಕಿಸ್ತಾನವನ್ನೂ ಬಳಸಿಕೊಂಡಿತು. ಹಣದ ಹೊಳೆಯನ್ನೇ ಹರಿಸಲಾಯಿತು. ಪಾಕಿಸ್ತಾನ ಈ ಹಣ ಮತ್ತು ಯುದ್ಧಾಸ್ತ್ರಗಳ ಕೆಲಭಾಗವನ್ನು ಕಾಶ್ಮೀರ ಹೋರಾಟಗಾರರಿಗೆ ಬಳಸಿಕೊಂಡು ಭಯೋತ್ಪಾದನೆ ನಡೆಸಲಾಯಿತು. ಈ ಬೆಳವಣಿಗೆಯನ್ನು ಭಾರತ ಅಮೆರಿಕದ ಗಮನಕ್ಕೆ ತಂದರೂ ಅದು ತಲೆಕೆಡಿಸಿಕೊಳ್ಳಲಿಲ್ಲ. ಭಾರತ ಮೊದಲಿನಿಂದಲೂ ಸೋವಿಯತ್ ರಷ್ಯಾ ಬೆಂಬಲಿಗೆ ದೇಶವಾದ್ದರಿಂದ ಅಮೆರಿಕ ಕಾಶ್ಮೀರ ಭಯೋತ್ಪಾದನೆಗೆ ತನ್ನ ಹಣ, ಶಸ್ತ್ರಾಸ್ತ್ರ ಬಳಕೆಯಾಗುತ್ತಿರುವುದನ್ನು ತಡೆಯಲಿಲ್ಲ. ಆಫ್ಘಾನಿಸ್ತಾನವನ್ನು ಸೋವಿಯತ್ ತೆರವು ಮಾಡಿದ ನಂತರ ಭಿನ್ನಾಭಿಪ್ರಾಯಗಳಿಂದಾಗಿ ಮುಜಾಹಿದ್ದೀನ್‌ಗಳು ಅಧಿಕಾರಕ್ಕೆ ಬರಲಾಗಲಿಲ್ಲ. ಆಗ ಇಸ್ಲಾಮಿಕ್ ಧಾರ್ಮಿಕ ವಿದ್ಯಾರ್ಥಿ ಯುವಕರಿಗೆ (ತಾಲಿಬಾನ್) ಕುಮ್ಮಕ್ಕು ನೀಡಿ ಅಧಿಕಾರಕ್ಕೆ ಬರುವಂತೆ ಮಾಡಿದ್ದೇ ಅಮೆರಿಕ. ತಾಲಿಬಾನ್‌ಗಳು ಅಽಕಾರಕ್ಕೆ ಬರುವಲ್ಲಿ ಪಾಕಿಸ್ತಾನವೂ ಕಾರಣವಾಗಿತ್ತು. ಅಧಿಕಾರಕ್ಕೆ ಬಂದ ತಾಲಿಬಾನ್‌ಗಳು ಷರಿಯತ್ ಮಾದರಿ ಆಡಳಿತ ಜಾರಿಗೆ ತಂದರು. ಅಮೆರಿಕದ ಬಯಕೆಗೆ ವಿರುದ್ಧವಾಗಿ ತಾಲಿಬಾನಿಗಳು ಆಡಳಿತ ನಡೆಸಲಾರಂಭಿಸಿದರು. ಹೀಗಾಗಿ ಅಮೆರಿಕ ತಾಲಿಬಾನ್ ವಿರುದ್ಧವೇ ಹೋರಾಟ ಸಂಘಟಿಸ ಬೇಕಾಯಿತು. ಆಗಲೂ ಅಮೆರಿಕ ಪಾಕಿಸ್ತಾನದ ಉಗ್ರರ ನೆರವು ಪಡೆಯಿತು. ಅಲ್ ಖೈದಾ, ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮದ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಬಲಗೊಂಡವು. ಈ ಸಂದರ್ಭದಲ್ಲಿಯೇ ಅಮೆರಿಕದ ವಿಶ್ವವಾಣಿಜ್ಯ ಕಚೇರಿ ಮೇಲೆ ಅಲ್‌ಖೈದಾ ಇಸ್ಲಾಮಿಕ್ ಭಯೋತ್ಪಾದಕರು ವೈಮಾನಿಕ ದಾಳಿ (೯/೧೧) ನಡೆಸಿದರು. ಆ ನಂತರ ಅಮೆರಿಕ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಇಳಿಯಿತು. ೯/೧೧ ದಾಳಿಯ ಮುಖ್ಯ ರುವಾರಿ ಒಸಾಮಾ ಬಿನ್ ಲಾಡೆನ್ ಅಡಗಿಕೊಂಡಿದ್ದುದು ಪಾಕಿಸ್ತಾನದಲ್ಲಿ. ಯಾವ ದೇಶಕ್ಕೆ ಹತ್ತಾರು ವರ್ಷಗಳ ಕಾಲ ಬೆಂಬಲ ಕೊಡುತ್ತಾ ಬಂತೋ ಅದೇ ದೇಶ ಪಾಕಿಸ್ತಾನ ೯/೧೧ ರುವಾರಿಗೆ ಆಶ್ರಯ ನೀಡಿತ್ತು. ಲಾಡೆನ್‌ನನ್ನು ವಿಶೇಷ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಮೆರಿಕ ಹತ್ಯೆ ಮಾಡಿತು. ಈ ಘಟನೆಯ ನಂತರ ಅಮೆರಿಕ ತನ್ನ ನಿಲುವು ಬದಲಿಸಿಕೊಳ್ಳಬಹುದೆಂದು ತಿಳಿಯಲಾಗಿತ್ತು. ಆದರೆ ಅಮೆರಿಕದ ಆಡಳಿತಗಾರರು ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ನಿಲ್ಲಿಸಲಿಲ್ಲ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಽಕಾರಕ್ಕೆ ಬಂದ ನಂತರವಷ್ಟೇ ನೆರವು ಕಡಿತಗೊಳಿಸಲಾಗಿದೆ. ಈ ಮಧ್ಯೆ ಪಾಕಿಸ್ತಾನ ಮತ್ತು ಚೀನಾ ಹತ್ತಿರವಾದವು. ಅಪಾರ ಪ್ರಮಾಣದಲ್ಲಿ ಪಾಕಿಸ್ತಾನದಲ್ಲಿ ಚೀನಾ ಹಣ ತೊಡಗಿಸಿದೆ. ಭಾರತವನ್ನು ಹಿಮ್ಮೆಟ್ಟಿಸಲು ಚೀನಾ ಈ ದಾರಿ ಹಿಡಿದಿದೆ. ಯಾವಾಗ ಚೀನಾ, ಪಾಕಿಸ್ತಾನದ ಕಡೆಗೆ ಹೊರಳಿತೋ ಅಮೆರಿಕದ ಆಡಳಿಗಾರರು ಈಗ ಭಾರತದ ಜೊತೆ ಮೈತ್ರಿ ಬೆಳೆಸುತ್ತಿದ್ದಾರೆ. ಈಗ ಆರಂಭವಾಗಿರುವ ಭಾರತ-ಪಾಕ್ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ನಿಲುವು ಬದಲಾಗಲು ಕಾರಣ ಇದೇ ಆಗಿದೆ. ಹಿಂದೆ ಪಾಕ್ ನಾಯಕರು ಅಮೆರಿಕದ ಕೈಗೊಂಬೆಯಾಗಿದ್ದರು. ಈಗ ಚೀನಾದ ಕೈಗೊಂಬೆ ಯಾಗಿ ದ್ದಾರೆ. ಆದರೆ ಪ್ರಸ್ತುತ ಘರ್ಷಣೆಯ ಸಂದರ್ಭದಲ್ಲಿ ಚೀನಾ ವಹಿಸಬಹುದಾದ ಪಾತ್ರ ಮಾತ್ರ ಇನ್ನೂ ಗೊತ್ತಾಗಿಲ್ಲ. ಎಲ್ಲಿಯವರೆಗೆ ಪಾಕಿಸ್ತಾನ ಬೇರೆ ದೇಶದ ದಾಳವಾಗಿರುತ್ತದೋ ಅಲ್ಲಿಯವರೆಗೆ ಅದು ಉದ್ಧಾರವಾಗಲು ಸಾಧ್ಯವಿಲ್ಲ. ಈಗ ಆರಂಭವಾಗಿರುವ ಯುದ್ಧ ಪಾಕಿಸ್ತಾನವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ನೂಕಬಹುದು. ಸಾಮಾನ್ಯ ಜನರು ಈಗಾಗಲೇ ಶಹಬಾಜ್ ಷರೀಫ್ ಸರ್ಕಾರದ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಜನರಿಗೆ ಆಯ್ಕೆಯೇ ಇಲ್ಲದಂತಾಗಿದೆ.

ಈ ಯುದ್ಧದ ರಾಜಕೀಯ ಲಾಭ ಪಡೆಯಲು ಆಡಳಿತದಲ್ಲಿರುವವರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಯುದ್ಧದಲ್ಲಿ ಸೋತರೂ ರಾಜಕೀಯ ನಷ್ಟ ಆಗದಿರುವಂತೆ ಪ್ರಯತ್ನಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಪ್ರಮಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಅಷ್ಟು ವಿಮಾನಗಳನ್ನು ಉರುಳಿಸಿದೊ, ಇಷ್ಟು ಬಾಂಬ್‌ಗಳನ್ನು ಹಾಕಿದೊ ಎಂದು ಸುಳ್ಳು ಪ್ರಚಾರ ನಡೆದಿದೆ. ಹಲವಾರು ವರ್ಷಗಳ ಹಿಂದಿನ ಫೋಟೊ ಮತ್ತು ಮೂವಿಗಳ ಚಿತ್ರಣಗಳನ್ನು ಈ ಉದ್ದೇಶಕ್ಕೆ ಬಳಸಿಕೊಂಡು ಜನರಲ್ಲಿ ರಾಷ್ಟ್ರೀಯ ಭಾವನೆಯನ್ನು ಉದ್ದೀಪನೆಗೊಳಿಸಲಾಗುತ್ತಿದೆ. ಪ್ರತಿ ದಿನ ಪರಿಸ್ಥಿತಿ ಬದಲಾಗುತ್ತಿರುವುದರಿಂದ ಮುಂದೇನು, ಕಾದುನೋಡಬೇಕು.

Tags:
error: Content is protected !!