Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಮಡಿಕೇರಿ ಬೋಧಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ

ಪುನೀತ್ ಮಡಿಕೇರಿ

ಚಿಕಿತ್ಸೆಗಾಗಿ ಪರಿತಪಿಸುತ್ತಿರುವ ರೋಗಿಗಳು

ಹೊರ ಜಿಲ್ಲೆಗಳ ಆಸ್ಪತ್ರೆ ಆಶ್ರಯಿಸಬೇಕಾದ ಸ್ಥಿತಿ!

ಮಡಿಕೇರಿ:ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮೆಡಿಕಲ್ ಕಾಲೇಜು) ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾಸ್ಪತ್ರೆಯನ್ನೇ ಬೋಧಕ ಆಸ್ಪತ್ರೆಯನ್ನಾಗಿ ರೂಪಿಸಲಾಗಿದೆ. ಆದರೆ, ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ.

ಕೊಡಗು ಮಾತ್ರವಲ್ಲದೆ ಪಕ್ಕದ ಜಿಲ್ಲೆಗಳಿಂದಲೂ ದಿನಂಪ್ರತಿ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಆದರೆ ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರೇ ಇಲ್ಲ ಎನ್ನುವಂತಾಗಿದೆ. ಅದರಲ್ಲೂ ಪ್ರಮುಖವಾಗಿ ಮೂತ್ರಪಿಂಡ ತಜ್ಞರು ಇಲ್ಲಿ ಇಲ್ಲದಿರುವುದರಿಂದ ರೋಗಿಗಳು ಪರಿತಪಿಸುವಂತಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ಆಧುನಿಕ ವೈದ್ಯಕೀಯ ಉಪಕರಣಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಇತ್ತೀಚೆಗೆ ಎಂಆರ್‌ಐ ಸ್ಕ್ಯಾನಿಂಗ್ ಘಟಕ ಅಳವಡಿಸಿದ ನಂತರವಂತೂ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ವಿಭಾಗದಲ್ಲಿ ಸಿಗುತ್ತಿರುವ ಸೇವೆ ಬಗ್ಗೆ ಉತ್ತಮ ಅಭಿಪ್ರಾಯ ಇದೆ.

ಹಾಗಾಗಿಯೇ ಕೊಡಗು ಮಾತ್ರವಲ್ಲದೆ ಪಕ್ಕದ ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದಲೂ ಇಲ್ಲಿಗೆ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ರೋಗಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದರೂ ಇಲ್ಲಿ ಮೊದಲಿನಿಂದಲೂ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ.

ಪ್ರಮುಖವಾಗಿ ಮಡಿಕೇರಿಯಲ್ಲಿ ರೋಗಿಗಳಿಗೆ ಮೂತ್ರ ಪಿಂಡ ತಜ್ಞ ವೈದ್ಯರ ಸೇವೆ ಸಿಗುತ್ತಿಲ್ಲ. ರೋಗ ಪತ್ತೆ ಹಚ್ಚಲು,ರೋಗ ವಿಧಾನ ತಿಳಿದುಕೊಳ್ಳಲು ಹಾಗೂ ಚಿಕಿತ್ಸೆಗಾಗಿ ಹೊರಜಿಲ್ಲೆಗಳ ತಜ್ಞರನ್ನೇ ಆಶ್ರಯಿಸಬೇಕಿದೆ. ಇದರಿಂದಾಗಿ ಸಮಯ ಮತ್ತು ಹಣ ಎರಡೂ ವ್ಯರ್ಥ ಆಗುತ್ತಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಡಿಕೇರಿ ಬೋಧಕ ಆಸ್ಪತ್ರೆಯಲ್ಲಾದರೂ ಒಬ್ಬರು ಮೂತ್ರಪಿಂಡ ತಜ್ಞ ವೈದ್ಯರು ರೋಗಿಗಳಿಗೆ ಲಭಿಸುವಂತಾದರೆ ಕೊಡಗಿನ ಬಹಳಷ್ಟು ರೋಗಿಗಳಿಗೆ ಪ್ರಯೋಜನ ಆಗಲಿದೆ.

ಸದ್ಯಕ್ಕೆ ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಟಿಲಿಮೆಡಿಸಿನ್ ಮೂಲಕ ತಜ್ಞ ವೈದ್ಯರ ಸಲಹೆಗಳನ್ನು ರೋಗಿಗಳಿಗೆ ಒದಗಿಸಲಾಗುತ್ತಿದೆ. ಆದರೂ, ಮುಂಚಿತವಾಗಿ ರೋಗ ಪತ್ತೆ ಹಚ್ಚಬೇಕಾದರೆ ಜಿಲ್ಲೆಗೆ ಒಬ್ಬರು ಮೂತ್ರಪಿಂಡ ತಜ್ಞ ವೈದ್ಯರ ಅವಶ್ಯಕತೆ ಇದೆ. ಬಹಳಷ್ಟು ಜನರ ಕಾಯಿಲೆ ಪತ್ತೆ ಮಾಡುವಲ್ಲಿ ವಿಳಂಬ ಆಗುತ್ತಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಸ್ಥಳೀಯವಾಗಿಯೇ ತಜ್ಞ ವೈದ್ಯರಿದ್ದರೆ ಕಾಯಿಲೆ ಪತ್ತೆ, ತಪಾ ಸಣೆ, ಚಿಕಿತ್ಸೆ ಸುಲಭವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಕೊಡಗಿನಲ್ಲಿ ಈಗ ೧೯೯ ರೋಗಿಗಳು ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಇವರ ಪೈಕಿ ೧೩೮ ಪುರುಷರು, ೬೧ ಮಹಿಳೆಯರು ಇದ್ದಾರೆ. ಇವರಲ್ಲಿ ಪಕ್ಕದ ಜಿಲ್ಲೆಯವರೂ ಸೇರಿದ್ದಾರೆ. ಇನ್ನೂ ಮೂವರು ರೋಗಿಗಳು ಡಯಾ ಲಿಸಿಸ್‌ಗಾಗಿ ಕಾಯುವವರ ಪಟ್ಟಿಯಲ್ಲಿದ್ದಾರೆ. ಸದ್ಯ ಇವರು ಖಾಸಗಿ ಆಸ್ಪತ್ರೆ ಅಥವಾ ಹೊರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಡಯಾ ಲಿಸಿಸ್ ಸೇವೆ ಪಡೆಯುತ್ತಿದ್ದಾರೆ. ಕೊಡಗಿನಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆ, ಸೋಮವಾರಪೇಟೆ, ವಿರಾಜಪೇಟೆಯ ತಾಲ್ಲೂಕು ಆಸ್ಪತ್ರೆ ಹಾಗೂ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೇವೆ ಸಿಗುತ್ತಿದೆ. ಎಲ್ಲಾ ಸೇರಿ ಒಟ್ಟು ೨೯ ಡಯಾಲಿಸಿಸ್ ಯಂತ್ರಗಳಿವೆ. ದಿನಕ್ಕೆ ೩ ಪಾಳಿಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರವಾಗಿ ಕೊಡಗಿಗೆ ಮೂತ್ರಪಿಂಡ ತಜ್ಞ ವೈದ್ಯರ ಸೇವೆಸಿಗುವಂತಾಗಲಿ ಎನ್ನುವುದು ಸಾರ್ವಜನಿಕರ ನಿರೀಕ್ಷೆ.

” ಜಿಲ್ಲೆಯಲ್ಲಿ ೧೯೯ ಮಂದಿಗೆ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯಕ್ಕೆ ಟೆಲಿಮೆಡಿಸಿನ್ ಮೂಲಕ ಡಯಾಲಿಸಿಸ್ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ. ಮೂತ್ರಪಿಂಡ ತಜ್ಞ ವೈದ್ಯರ ನೇಮಕಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ.”

ಡಾ.ಎ.ಜೆ.ಲೋಕೇಶ್, ಡೀನ್ ಮತ್ತು ನಿರ್ದೇಶಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

Tags:
error: Content is protected !!