Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಧಾರವಾಡ ನುಡಿ ಸೊಗಡಲ್ಲಿ ಮೂಡಿಬಂದ ‘ದೇಸಗತಿ

ಕನ್ನಡ ಭಾಷಾ ಸಮುದ್ರದ ಒಡಲಿಗೆ ನದಿಗಳಂತೆ ಹರಿದು ಸೇರುತ್ತವೆ ಉಪಭಾಷೆಗಳು. ಬಹುಶಃ ಅದೇ ಅವುಗಳ ಸಾರ್ಥಕತೆ. ಹಲವು ಉಪಭಾಷೆಗಳಿಗೆ ಪ್ರತ್ಯೇಕ ಲಿಪಿ ಇಲ್ಲದ ಕಾರಣ, ಆ ಉಪಭಾಷೆಗಳ ಜನರ ಭಾವನೆಗಳ ಅಭಿವ್ಯಕ್ತಿಗೆ ಕನ್ನಡ ಅಕ್ಷರಗಳೇ ನೆಲೆಯಾಗಿವೆ. ಆದರೆ ಕೆಲ ಜಿಲ್ಲೆಗಳಲ್ಲಿ ಕನ್ನಡ ಭಾಷೆಗೂ ಆಡುನುಡಿಗೂ ಸ್ವಲ್ಪ ಮಾತ್ರವೇ ವ್ಯತ್ಯಾಸ ಇರುತ್ತದೆ. ಇದೇ ರೀತಿ ಧಾರವಾಡ ಕನ್ನಡ ಕೂಡ. ರಾಘವೇಂದ್ರ ಪಾಟೀಲ ಅವರು ಬರೆದಿರುವ ಕಥಾಗುಚ್ಛಗಳ ‘ದೇಸಗತಿ’ ಕೃತಿಯಲ್ಲಿ ಧಾರಾಳವಾಗಿ ಧಾರವಾಡ ಕನ್ನಡ ಭಾಷೆ ಮೈವೆತ್ತಿದೆ. ಆ ಕೃತಿಯ ದೇಸಗತಿ ಕಥೆಯ ಭಾಗವೊಂದನ್ನು ಇಲ್ಲಿ ಪ್ರಕಟಿಸಲಾಗಿದೆ.

ಕಲ್ಪನಾಥ ದೇಸಾಯರಿಗೆ ಅಳುವಿನ ದನಿ ಕಿವಿಯೊಳಗೆ ಗುಂಯ್‌ ಗುಟ್ಟಿದಂಗೆ ಅನಸಲಿಕತ್ತಿತು. ಬೆಳಗ್ಗೆ ಮುಂಜಾನೆಯ ಹೊತ್ತು. ಕನಸಿನ್ಯಾಗೋ ವಾಸ್ತವದೊಳಗೋ ಅಂತ ಅವರಿಗೆ ಒಮ್ಮಿಗೆಲೆ ಮೊದಲ ಆತು. ಎಚ್ಚರಾಗಿ ಕಿವಿಗೊಟ್ಟು ಕೇಳಿದರು… ಹೌದು… ಅಮೃತಂದ ದನೀ… ಅಮೃತದೇಸಾಯಿ… ಅಂದರ ಒಂದು ವರ್ಷದ ಕೂಸು. ಕಲನಾಥ ದೇಸಾಯರ ಮರಿಮಗ… ಅಂದರ ಮಮ್ಮಗನಾದ ಮಾಣಿಕ
ದೇಸಾಯಿಯ ಮಗ… ಮಂಜು ಮಂಜು… ಗುಬ್ಬಿಗೋಳ ಚಿಂವ್ ಚಿಂಗ್ ಅಂತನ್ನುವ ದನಿ ಕೇಳಿಸಿಧಂಗನಿಸಿತು. ಆದರ ಪೂರ್ವದ ಕಡೇದ ಖಡಕ್ಕಾಗಿಂದ ಬಿಸಲು ಇನ್ನೂ ಖೋಲಿ ಒಳಗ ಬಿದ್ದಿದ್ದಿಲ್ಲ… ದೇಸಾಯರಿಗೆ ಆರು ಹೊಡದಿರಬೇಕು ಅಂತನಿಸಿತು… ಈ ಮಾಣಿಕ ಮತ್ತ ಅವನ ಹಂತಿ ಎದ್ದಾರೋ ಇಲ್ಲೋ… ಎದ್ದಿರಲಿಕ್ಕಿಲ್ಲ… ಹೂಂ ಏನ ಹೆಂಗಸೋ ಏನೋ! ಎಳೀ ಕಂದ ಅಳತಿದ್ದರೂ ಗಡದ್ದ ನಿದ್ದಿ ಮಾಡೂ ಹಂತಾ ಹೆಂಗಸು ಅದೆಂತಾದ್ದಿರಬೇಕು!.. ಈ ಹೇಡಿ ಸೂಳೀಮಗ್ಗ ಕೈಯಾರ ಖಡ್ಡಿ ಕೊಟ್ಟು ಹೇಳಿದೆ… ಬ್ಯಾಡೋ ಈ ಕೆಂಪ ಮೋತೆವರ ಸಹವಾಸಾ… ನಮ್ಮ ರಕ್ತ ದೇಸಗತೀದೂ… ಬ್ರಾಹ್ಮಣ ಇಲ್ಲಾ ಕ್ಷತ್ರಿಯರ ಹೆಣ್ಣು ಆಗು… ಹೋಗಲಿ ಅವನ್ನ ಆಗದಿದ್ದರೆ ಬಿಡವಲ್ಯಾಕ ಕನಿಷ್ಠ ಈ ದೇಶದ ಹೆಣ್ಣ ನೋಡೂ… ಅಂತ ಹೇಳಿದರ ಎಲ್ಲಿ ಕೇಳಿದಾ? ಈಗ ಇಕಿ ಸೆರಗ ಹಿಡಕೊಂಡು ಇಕಿ ಹೇಳಿದಂಗೆ ಕೇಳಿಕೋತ ಬಿದ್ದಾನ… ಹುಂ… ಮಹಾ ಬ್ಯಾಡಾಗಿತ್ತಂತ ಇಕಿಗೆ… ತಾವಿಬ್ಬರೂ ಅಮೇರಿಕಾಕ್ಕ ಹೋಗತಾರಂತ… ಮಗನ್ನ ಇಲ್ಲೇ ಯಾವದರೇ ಛಲೋ ಹಾಸ್ಟೆಲ್ಲಿಗೆ ಸೇರಿಸಿ ಹೋಗತೀವಂತಾರ… ಇಷ್ಟ ಸಣ್ಣ ಕಂದನ್ನ ತಾಯಿಂದ ಅಗಲಿಸಿ ಸಾಕುವ ಹಾಸ್ಟೆಲ್ಲಗೋಳು ಅದ್ಯಾವ ಇದ್ದಿದ್ದಾವು?… ಹೂಂ… ಹೊಸಾ ಪೀಳಿಗೀ ಜೋಡೀ ಇಂಥಾ ಹೊಸಾ ಹಾಸ್ಟೆಲ್ಲಗೋಳೂ ಬಂದಿದ್ದಾವು….ಇದ ಸಾಲದೂ ಅನ್ನುವ ಹಂಗ ಮೊನ್ನೆ ಬಂದು, ಧರಮನಟ್ಟಿಯ ಗುಡ್ಡಾ ಮಾರತನು ಅಂತ ಹೇಳಿದಾ. ಆವತ್ತಿಂದ ಕಲ್ಪನಾಥ ದೇಸಾಯರು ಮನಸಿನೊಳಗ ಅನ್ನ ಕುದ್ದಂಗ ಕುದೀಲಿಕಾರ… ‘ಅದೇನು ಬರೇ ಕಲ್ಲುಗುಡ್ಡಾ… ಧರಮನಟ್ಟಿಯ ಮಂದಿ ಗುಡ್ಡದ ವಾರೀನೆಲ್ಲಾ ಸಾಗ ಮಾಡಿಕೊಂಡ ಬಿಟ್ಟಾರ. ನಾವು ಬಿಡಂದರೂ ಅವರನೇನ ಬಿಡಸಾಕ ಆಗೂದುಲ್ಲಾ…

ಈಗ ಈ ಗುಡ್ಡಕ್ಕೆ ಏನ ಗಿರಾಕಿ ಬಂದದಲಾ… ಆಂವ ಕಲ್ಲದ್ವಾರೀ ಕಂಟ್ರಾಕ್ಟರ್… ಕಾಯ್ದೆ, ಕಾನೂನು ಕೋರ್ಟು ಕಚೇರಿದೆಲ್ಲಾ ತಾನ ನೋಡಿಕೋತನ ಅಂತ ಹೇಳ್ಯಾನ, ರಾಜಕೀಯದಾಗ ಅವನ ಪೈಕಿ ಮಂದಿ ಅದ. ಮಡ್ಡಿ ಸಾಗಮಾಡಿದ ಮಂದಿನ್ನ ಅಲ್ಲಿಂದ ಜಾಗಾ ಹೆಂಗ ಖಾಲೀ ಮಾಡಸೂದು ತನಗೆ ಗೊತ್ತ ಅದ ಅಂತ ಹೇಳ್ಯಾನ… ನಾವು ಬರೇ ಬರದಕೊಟ್ಟ ಬಿಡೂದು…’ ಅಂತ ಮಾಣಿಕ ದೇಸಾಯಿ ಅಜ್ಜನ ಮುಂದ ಗುಂಡಾಡಿಸಿದ್ದ. ಮಾಣಿಕನ ಮಾತು ಕೇಳಿದಾಗ ದೇಸಾಯರ ಅಂತಃಕರಣಕ್ಕೆ ಕಿಚ್ಚಿ ಹತ್ತಿದಂಗಾತು… ಕಲ್ಲ ಗುಡ್ಡ ಅಂತ ಕಲ್ಲ ಗುಡ್ಡ… ಮಗನ ಈಗ ಉಳದದ್ದಂದರ ಇದ ಒಂದ. ಅಕಸ್ಮಾತ್ ನೀ ಊರಿಗೆ ಹೋದೆಂದರ ನೀನ ಹೇಳಿಕೋಬೇಕು… ನಾ ದೇಸಾಯಿ… ನಾ ಮಾಣಿಕ ದೇಸಾಯಿ ಅಂತ… ನಿನ್ನ ಚಹರೇ ಹೆಂಗ ಉಳದೀತೋ ಅವರ ಮನಸಿನ್ಯಾಗ…? ಆದರ ಆ ಗುಡ್ಡಾ!.. ಅದ ದೇಸಾಯರ ಗುಡ್ಡಲೇ. ಅದಕ ದೇಸಾಯರ ಗುಡ್ಡಾ ದೇಸಾಯರ ಗುಡ್ಡಾ ಅಂತಾರಪಾ… ಸೂರ್ಯಾ ಚಂದ್ರಾಮ ಇರೂತನಕಾ ನಮ್ಮ ಅಜ್ಜನ ಅಜ್ಜ ಕಟ್ಟಿದ ಧರಮನಟ್ಟಿಯ ದೇಸಗತಿ ಇರತೈತೋ ಬಾಳಾ – ಅದರ ಜೋಡೀ… ಹಂತಾ ಗುಡ್ಡಾ… ಅದೇನ ಕಲ್ಲುಗುಡ್ಡಾ… ಮಾರತನೂ ಅಂತೀಯಲ್ಲೋ…? ನಿನ್ನ ರಕ್ತಾನ ಬದಲ ಮಾಡಿ ಇದ್ದಳೇನೋ ಅಕೀ…?’ ಅಂತ ದೇಸಾಯರು ರಂದೀ ಮಾಡಲಿಕ್ಕೆ ಸುರು ಮಾಡಿದಾಗ ಮಾಣಿಕ ವಟ… ವಟ ಅಂತ ಅನಕೋತ ಅಜ್ಜನ ಖೋಲೀ ಬಿಟ್ಟು ಎದ್ದು ಹೋಗಿದ್ದ.

ಕಲ್ಪನಾಥರು ಇದನ್ನ ಮನಸಿಗೆ ಹಚಿಗೊಂಡಾರ. ಇತ್ತ ಮಾಣಿಕನೂ ಕನಸ ತಗದ ಬಿಟ್ಟಾನ. ಇವರ ಮಾತ ಕೇಳಿಕೋತ ಹೋದರ ಕೊನೀಗಾದುಲ್ಲ… ಲಗೂನ ಅಮೇರಿಕಾಕ್ಕೆ ಹೊಂಟುಬಿಡಬೇಕು ಅಂತ ಅಂವ ವೀಸಾಕ್ತ ಅಡ್ಡಾಡಲಿಕ್ಕೆ ಸುರು ಮಾಡಿದ… ದೇಸಾಯರು ಹಗಲೆಲ್ಲಾ… ‘ಇದೇನ ಕಾಲಾ ತಂದಿಟ್ಟೇಪಾ ವಿಠಲಾ…’ ಅಂತ ತಮ್ಮ ಮನಿದೇವರಾದ ಪಂಢರಪುರದ ವಿಠಲನ್ನ ನೆನೆಯುವರು. ಎಷ್ಟೆಂದರೂ ಹಿರಿಹೊಳಿ ದಾಟಿಸಿ- ದೇಸಗತಿ ಕಟ್ಟಲಿಕ್ಕೆ ಪ್ರೇರಣಾ ಕೊಟ್ಟವನ ಅವನು. ತಾನು ಕಟ್ಟಿಸಿದ ದೇಸಗತೀ ಉಳಸೂದೂ ಬಿಡೂದು ಅಂವಗ ಸೇರಿದ್ದು… ಅಂತ ದೇಸಾಯರು ವಿಠೋಬಾನ ಮ್ಯಾಲ ಎಲ್ಲಾ ಭಾರಾಹಾಕಿ ತಮ್ಮ ನಿತ್ಯದ ಕೆಲಸಕ್ಕೆ ಹೋದರು.

ಪದಗಳು:
ಅನಿಸಲಿಕತ್ತಿತು- ಅನಿಸಲು ಆರಂಭವಾಗಿತ್ತು
ಕನಸಿನ್ಯಾಗೋ- ಕನಸಿನಲ್ಲೋ
ಒಮ್ಮಿಗೆಲೆ- ಒಮ್ಮೆಲೇ
ಗೊದಲ -ಗೊಂದಲ
ಹೇಂತಿ- ಹೆಂಡತಿ
ಗಡದ್ದ- ಭರ್ಜರಿ
ಹಾಸ್ಟೆಲ್ಲಗೋಳು- ಹಾಸ್ಟೆಲ್‌ಗಳು
ಮಾರತನು- ಮಾರುತ್ತೀನಿ
ರಂದೀ- ರಂಪ
ಕೊನೀಗಾದುಲ್ಲ-ಕೊನೆಗಾಣುವುದಿಲ್ಲ
ಕುದರಿಮ್ಯಾಲ-ಕುದುರೆಯ ಮೇಲೆ
ಸರ್ಯಾಗ- ಸರಿಯಾಗಿ
ಪೇಶವೇಗೋಳಕದಿಂದ-ಪೇಳ್ವೆಗಳ ಕಡೆಯಿಂದ

Tags: