ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಹಾಡೊಂದು ದೇಶಾದ್ಯಂತ ಸುದ್ದಿ ಮಾಡಿತಷ್ಟೇ. ಅದರ ಪ್ರಸ್ತಾಪ ಲೋಕಸಭೆಯಲ್ಲೂ ಆಯಿತು. ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರು ಈ ವಿಷಯವನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಗಮನಕ್ಕೆ ತರುವುದಾಗಿ ಪ್ರಕಟಿಸಿದರು.
ಅದರಂತೆ ಆದೇಶ ನೀಡಿದರು ಕೂಡ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವ ಮತ್ತು ಕಿರುತೆರೆಗಳಲ್ಲಿ ಪ್ರಸಾರವಾಗುವ ಚಿತ್ರಗಳಿಗೆ ಮಾತ್ರ ಈ ಪ್ರಮಾಣಪತ್ರ ಲಾಗುವಾಗುತ್ತವೆಯೇ ಹೊರತು ಇತರ ಸಾಮಾಜಿಕ ತಾಣಗಳಿಗೆ ಅಲ್ಲ. ಹಾಗಾಗಿಯೇ ಅಲ್ಲಿ ಎಲ್ಲ ರೀತಿಯ ಹಿಂಸಾ ವಿಜೃಂಭಕ, ಲೈಂಗಿಕ ಪ್ರಚೋದಕ ದೃಶ್ಯಾವಳಿಗಳ ಸರಣಿಗಳು ಲಭ್ಯ. ಅವುಗಳನ್ನು ನಿಯಂತ್ರಿಸುವ ನಿಯಮಗಳ ಪ್ರಸ್ತಾಪ, ಜಿಜ್ಞಾಸೆ ನಡೆದಿದೆ.
ಹಿಂದೆ ಇದ್ದ ಸೆನ್ಸಾರ್ ಪದಕ್ಕೆ ಈಗ ಕತ್ತರಿ ಬಿದ್ದಿದೆ. ಈಗ ಏನಿದ್ದರೂ ಪ್ರಮಾಣಪತ್ರ ನೀಡುವ ಕೆಲಸ ಮಾತ್ರ ಪ್ರಮಾಣೀಕರಣ ಮಂಡಳಿಯದು. ಹಾಗಂತ ಏನು ಬೇಕಾದರೂ ತೋರಿಸುವಂತಿಲ್ಲ. ಅದರ ನಿಯಮಾನುಸಾರ, ಸಲಹಾ ಸಮಿತಿಯ ಸದಸ್ಯರ ಜೋತೆ ಚಿತ್ರವನ್ನು ವೀಕ್ಷಿಸಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸಾರ್ವತ್ರಿಕವಾಗಿ ಎಲ್ಲರೂ ಮುಕ್ತವಾಗಿ ನೋಡುವ ಚಿತ್ರಗಳಿಗೆ ‘ಯು’, ಹೆತ್ತವರ ಜೊತೆಯಾಗಿ ಮಾತ್ರ ನೋಡಬಹುದಾದ ಚಿತ್ರಗಳಾದರೆ ‘ಯು/ಎ’ , ವಯಸ್ಕರು ಮಾತ್ರ ನೋಡುವ ಚಿತ್ರಗಳಾದರೆ ‘ಎ’ (೧೮ ವರ್ಷಕ್ಕಿಂತ ಚಿಕ್ಕವರು ನೋಡಬಾರದ ಚಿತ್ರಗಳಿವು) ಮತ್ತು ವಿಶೇಷ ವೃತ್ತಿಪರ ಮಂದಿ ಮಾತ್ರ ನೋಡುವ ಚಿತ್ರಗಳಾದರೆ ‘ಎಸ್’ ಪ್ರಮಾಣಪತ್ರ ನೀಡಲಾಗುತ್ತದೆ. ‘ಯು.ಎ’ ಪ್ರಮಾಣಪತ್ರದಲ್ಲೂ ಈಗ ಮಕ್ಕಳ ವಯೋಮಾನಕ್ಕನುಗುಣವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ. ಪ್ರಮಾಣೀಕರಣ ಮಂಡಳಿ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿದೆ.
ತಮಿಳಿನ ‘ಜನನಾಯಗನ್’ ಚಿತ್ರದ ಪ್ರಮಾಣಪತ್ರದ ಕುರಿತ ಸುದ್ದಿಯಂತೂ ಜಗಜ್ಜಾಹೀರಾಗಿತ್ತು. ನಿರ್ಮಾಪಕರು ನ್ಯಾಯಾಲಯದ ಮೊರೆ ಹೋದದ್ದು, ನಂತರ ಅದನ್ನು ಹಿಂತೆಗೆದುಕೊಂಡು ಮತ್ತೆ ಪ್ರಮಾಣೀಕರಣ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಚಿತ್ರ ವೀಕ್ಷಿಸಿದ ಮಂಡಳಿ ಚುನಾವಣಾ ಆಯೋಗದ ಸಲಹೆ ಕೇಳಿತು ಎಂದು ಆದ ವರದಿ.. ಹೀಗೆ. ನಕಲಿ, ಅಸಲಿ ಸುದ್ದಿಗಳ ಈ ದಿನಗಳಲ್ಲಿ ಅಲ್ಲೆಷ್ಟು ಅಸಲಿ, ಎಷ್ಟು ನಕಲಿ ಎನ್ನುವುದು ಮುಂದೆ ತಿಳಿಯಬಹುದು. ಸಿನಿಮಾ ಮನರಂಜನೆಯನ್ನು ವಿಕಲಚೇತನರೂ ಪಡೆಯುವಂತಾಗಬೇಕು ಎನ್ನುವುದಕ್ಕೆ ಪೂರಕವಾಗಿ ಈಗ ಪ್ರಮಾಣಪತ್ರ ಪಡೆಯುವ ಪ್ರತಿ ಚಿತ್ರವೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಹಿಂದೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕೆಲವು ಚಿತ್ರಗಳನ್ನು ಈ ರೀತಿ ಪ್ರದರ್ಶಿಸಲಾಗುತ್ತಿತ್ತು. ದೃಷ್ಟಿಹೀನರು ಮತ್ತು ಕಿವುಡರು ಇತರ ಪ್ರೇಕ್ಷಕರ ಜೊತೆಯಲ್ಲಿ ಕುಳಿತು ಚಿತ್ರಗಳನ್ನು ನೋಡಿ ತಿಳಿಯಲು ಪ್ರತ್ಯೇಕ ರೀತಿಯಲ್ಲಿ ನಿರ್ಮಾಪಕರು ಅದನ್ನು ಸಿದ್ಧಪಡಿಸಬೇಕು.
ಸಾಮಾನ್ಯವಾಗಿ ಪ್ರಮಾಣಪತ್ರ ಪಡೆಯುವ ವೇಳೆ ಚಿತ್ರಗಳಿಗೆ ಇಂಗ್ಲಿಷ್ ಉಪಶೀರ್ಷಿಕೆಗಳನ್ನು ಸೇರಿಸಿ ಕೊಡುವುದು ವಾಡಿಕೆ. ಅದರ ಜೊತೆಯಲ್ಲಿ ಅಲ್ಲೇನು ನಡೆಯುತ್ತಿದೆ ಎನ್ನುವುದನ್ನು ಉಪಶೀರ್ಷಿಕೆಯ ಜೊತೆಜೊತೆಯಲ್ಲೇ ಮುದ್ರಿಸುತ್ತಾ ಹೋದರೆ, ಅದು ಕಿವಿ ಕೇಳದವರಿಗೆ ಚಿತ್ರದ ವಿವರ ತಿಳಿಯಲು ಅನುಕೂಲವಾಗುತ್ತದೆ. ಹಾಗೆಯೇ ಸಂಪೂರ್ಣ ಚಿತ್ರದ ದೃಶ್ಯಾವಳಿಗಳ ವಿವರಗಳನ್ನು ಆಡಿಯೋ ಮೂಲಕ ಸೇರಿಸಿದರೆ, ಅದು ಅಂಧರಿಗೆ ಚಿತ್ರವನ್ನು ಆಸ್ವಾದಿಸಲು ಅನುಕೂಲವಾಗುತ್ತದೆ. ಸಾಮಾನ್ಯ ಪ್ರೇಕ್ಷಕರ ಜೊತೆ ಅಂಧರು, ಕಿವುಡರು ಚಿತ್ರ ನೋಡಲು ಅನುಕೂಲವಾಗುವ ಹಾಗೆ ಪ್ರತ್ಯೇಕ ಆಪ್ ಅವರಿಗೆ ನೆರವಾಗಲು ಇರುತ್ತದೆ.
ಒಂದು ಭಾಷೆಯಲ್ಲಿ ಮಾತ್ರ ಚಿತ್ರ ತಯಾರಾಗುವುದಾದರೆ ಅದಕ್ಕೆ ಈ ವ್ಯವಸ್ಥೆ ಅಗತ್ಯ ಇರಲಿಲ್ಲ. ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ತಯಾರಾಗುವ ಚಿತ್ರಗಳಿಗೆ ಮಾತ್ರ ಈ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಮೊನ್ನೆ ಮಾರ್ಚ್ ೧೫ರ ನಂತರ ಪ್ರಮಾಣಪತ್ರ ಪಡೆಯುವ ಎಲ್ಲ ಚಿತ್ರಗಳೂ ಆಡಿಯೋ ವಿವರಣೆ (ಎಡಿ) ಮತ್ತು ಕ್ಲೋಸ್‌ಡ್ ಕ್ಯಾಪ್ಶನ್ (ಸಿಸಿ) ಜೊತೆ ಪ್ರಮಾಣಪತ್ರ ಪಡೆಯಬೇಕು.
ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಒಂಬತ್ತು ಪ್ರಾದೇಶಿಕ ಕಚೇರಿಗಳು ಬೆಂಗಳೂರು ಸೇರಿದಂತೆ ಇವೆ. ಕರ್ನಾಟಕದಲ್ಲಿ ತಯಾರಾದ ಚಿತ್ರಗಳು ಬೆಂಗಳೂರಿನಲ್ಲೇ ಪ್ರಮಾಣಪತ್ರ ಪಡೆಯಬೇಕು. ಪ್ರಾದೇಶಿಕ ಅಧಿಕಾರಿಗೆ ಸಲಹಾ ಸಮಿತಿಯ ಸದಸ್ಯರಿರುತ್ತಾರೆ. ಇಬ್ಬರು ಮಹಿಳೆಯರು, ಇಬ್ಬರು ಪುರುಷರು- ಹೀಗೆ ನಾಲ್ವರು ಸಲಹಾ ಸಮಿತಿಯ ಸದಸ್ಯರು ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದ ಚಿತ್ರವನ್ನು ಅಧಿಕಾರಿಯ ಜೊತೆ ವೀಕ್ಷಿಸುತ್ತಾರೆ. ಚರ್ಚಿಸಿ ಅದಕ್ಕೆ ಯಾವ ಪ್ರಮಾಣಪತ್ರ ನೀಡಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ಚಿತ್ರಿಕೆಗಳನ್ನು ಕತ್ತರಿಸಬೇಕಾದರೆ, ಬದಲಾಯಿಸಲು, ಅಲ್ಲಿ ಸಲಹೆ ನೀಡಲಾಗುತ್ತದೆ. ನಿರ್ಮಾಪಕ/ ನಿರ್ದೇಶಕರು ಮಂಡಳಿಯ ನಿರ್ಧಾರವನ್ನು ಒಪ್ಪಿದರೆ ಸರಿ, ಪ್ರಮಾಣಪತ್ರ ಪಡೆಯಬಹುದು. ಇಲ್ಲವಾದರೆ ರಿವೈಸಿಂಗ್‌ಗೆ ಅರ್ಜಿ ಹಾಕಬಹುದು.
ಹ್ಞಾಂ, ಹಿಂದಿನ ದಿನಗಳಲ್ಲಿ ಸೆನ್ಸಾರ್ ಆಗುವ ಮೊದಲು ಚಿತ್ರದ ಬಿಡುಗಡೆಯ ದಿನವನ್ನು ಪ್ರಕಟಿಸುವಂತಿರಲಿಲ್ಲ. ಆದರೆ ಈಗ ಹಾಗೇನೂ ಇದ್ದಂತಿಲ್ಲ. ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿ, ಅರ್ಜಿ ಸಲ್ಲಿಸಬಹುದು. ದುಪ್ಪಟ್ಟು ಶುಲ್ಕ ಸಲ್ಲಿಸಿ ತತ್ಕಾಲ್ ವ್ಯವಸ್ಥೆಯ ಮೂಲಕ ಕೂಡಲೇ ಪ್ರಮಾಣಪತ್ರ ಪಡೆಯಬಹುದು.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಜಾಲತಾಣ ಪ್ರವೇಶಿಸಿದರೆ, ಅಲ್ಲಿ ಪ್ರಮಾಣಪತ್ರ, ಮಂಡಳಿಯ ಕುರಿತ ಸಾಕಷ್ಟು ವಿವರಗಳನ್ನು ನೋಡಬಹುದು. ಅಷ್ಟೇ ಅಲ್ಲ, ನಿಯಮಾವಳಿಗಳನ್ನು ಉಲ್ಲಂಘಿ ಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪೇಕ್ಷಕರನ್ನು ಕೋರಿದ ಪ್ರಕಟಣೆಯನ್ನು ಅಲ್ಲಿ ನೋಡಬಹುದು. ಅದು ಶಿಕ್ಷಾರ್ಹ
ಅಪರಾಧಗಳ ಕುರಿತಂತೆ ಇರುವಂತಹದು. ಅವು ಹೀಗಿವೆ:
* ದಯವಿಟ್ಟು ಸಿನಿಮಾಗಳ ಪ್ರಚಾರ ಭಿತ್ತಿಪತ್ರಗಳು ಮತ್ತು ಜಾಹೀರಾತುಗಳಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ನೀಡಲಾದ ಪ್ರಮಾಣಪತ್ರದ ಪ್ರಕಾರ ಅದರಲ್ಲಿ ಸೂಚಿತವಾಗಿದೆಯೇ ಎಂದು ಗಮನಿಸಿ.
* ದಯವಿಟ್ಟು ಇಆಊಇ ಚಿತ್ರದಲ್ಲಿ ಕತ್ತರಿಸಿರುವ ಭಾಗಗಳು, ಆದೇಶಿಸಿದ ಬದಲಾವಣೆಗಳ ಪಟ್ಟಿ (ಕಟ್ ಲಿಸ್ಟ್) ಯನ್ನು ಚಿತ್ರಮಂದಿರದ ಪ್ರಮುಖ ಸ್ಥಳದಲ್ಲಿ ಕಾಣುವಂತೆ ಪ್ರದರ್ಶಿಸಿದ್ದಾರೆಯೇ ಎಂದು ಪರಿಶೀಲಿಸಿ.
* ಚಿತ್ರದ ಆರಂಭದಲ್ಲಿ CBFC ನೀಡಿದ ಪ್ರಮಾಣಪತ್ರವನ್ನು ಸೇರಿಸಿದ್ದಾರೆಯೇ ಎಂದು ದಯವಿಟ್ಟು ಪರಿಶೀಲಿಸಿ
* ದಯವಿಟ್ಟು ೧೮ ವರ್ಷದ ಕೆಳಗಿನ ಮಕ್ಕಳು ‘ಅ’ ಪ್ರಮಾಣಪತ್ರ ಪಡೆದ ಚಿತ್ರವನ್ನು ನೋಡಲು ಚಿತ್ರಮಂದಿರದೊಳಗೆ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆಯೇ ಎಂದು ಗಮನಿಸಿ.
* ಚಿತ್ರಮಂದಿರದಲ್ಲಿ ಪ್ರದರ್ಶಿಸಲಾದ ಕಟ್ ಲಿಸ್ಟ್ ಪ್ರಕಾರ CBFC ಮೂಲಕ ತೆಗೆಯಲ್ಪಟ್ಟ ಯಾವುದೇ ದೃಶ್ಯಗಳು ಅಥವಾ ಸಂಭಾಷಣೆಗಳನ್ನು ಚಿತ್ರದಲ್ಲಿ ತೋರಿಸುತ್ತಿದ್ದಾರೆಯೇ ಎಂಬುದನ್ನು ದಯವಿಟ್ಟು ಗಮನಿಸಿ.
* ನಿಮ್ಮ ಅಭಿಪ್ರಾಯದಲ್ಲಿ ಅಶ್ಲೀಲ ಅಥವಾ ವಲ್ಗರ್ ಅಥವಾ ಭೀಕರ ಹಿಂಸೆಗಳಿಂದ ತುಂಬಿರುವ ಯಾವುದೇ ದೃಶ್ಯವನ್ನು ಸಿನಿಮಾ ಒಳಗೊಂಡಿದೆಯೇ ಎಂದು ದಯವಿಟ್ಟು ಚೆಕ್ ಮಾಡಿ. ಇಂತಹ ದೃಶ್ಯಗಳನ್ನು ಇಆಊಇ ಅನುಮತಿಸದಿದ್ದರೂ, ಸಿನಿಮಾ ಪ್ರಮಾಣೀಕರಣ ನಂತರ ಅದಕ್ಕೆ ಸೇರಿಸಲಾಗಿರುವ ಸಾಧ್ಯತೆ ಇದೆ.
ಮೇಲಿನಂತೆ ಯಾವುದೇ ವಿಧದ ಉಲ್ಲಂಘನೆಗಳು ನಿಮಗೆ ಕಂಡು ಬಂದರೆ, ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ವರದಿ ಮಾಡಲು ಇಚ್ಛಿಸದಿದ್ದರೆ, ಇಆಊಇ ಅಥವಾ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬಹುದು ಅಥವಾ ಯಾವುದೇ ಸಾಮಾಜಿಕ ಸಂಸ್ಥೆ ಅಥವಾ ಮಾಧ್ಯಮದ ಮೂಲಕ ಯಾವುದೇ ಅಧಿಕಾರಿಗಳಿಗೆ ವಿಷಯವನ್ನು ತೆಗೆದುಕೊಂಡು ಹೋಗಬಹುದು, ಮೇಲಿನವು ಶಿಕ್ಷಾರ್ಹ ಅಪರಾಧಗಳು. ಇದಕ್ಕೆ ಗರಿಷ್ಟ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ, ಒಂದು ಲಕ್ಷ ರೂ. ವರೆಗೆ ದಂಡ ಇದೆ ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿರಲಾರದು. ಭಾರತದ ವಿವಿಧ ಭಾಷಾ ಚಿತ್ರಗಳಲ್ಲಿ ಭೂಗತ ಜಗತ್ತನ್ನು ತೆರೆಯ ಮೇಲೆ ಮೆರೆಸಲು ಆರಂಭವಾದ ನಂತರ ಹಿಂಸಾ ವಿಜೃಂಭಣೆಯದೇ ಕಾರುಬಾರು. ಚಲನಚಿತ್ರದಲ್ಲಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವಂತಹ ಮತೀಯ ಗಲಭೆಗಳಿಗೆ ಪ್ರಚೋದನೆ ನೀಡುವಂತಹ ಕಥೆ, ದೃಶ್ಯ ಅಥವಾ ಸಂಭಾಷಣೆಗಳಿರಬಾರದು, ಚಲನಚಿತ್ರವು ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರ, ಲೈಂಗಿಕತೆ, ಕೀಳುಮಟ್ಟದ ಕಾಮಪ್ರಚೋದನೆಯಂತಹ ಕಥೆ, ಕ್ರೌರ್ಯ ದೃಶ್ಯಗಳನ್ನು ಅನವಶ್ಯಕವಾಗಿ ಒಳಗೊಂಡಿರಬಾರದು, ಕೀಳು ಅಭಿರುಚಿಯ ದ್ವಂದ್ವಾರ್ಥ ಸಂಭಾಷಣೆಗಳು ಇರಬಾರದು. ಅನವಶ್ಯಕ ಹೊಡೆದಾಟ, ಕ್ರೌರ್ಯ, ಹಿಂಸೆ, ಅಶ್ಲೀಲನೃತ್ಯ ಮುಂತಾದವುಗಳನ್ನು ವಿಜೃಂಭಿಸುವ ದೃಶ್ಯಗಳು ಇರಬಾರದು ಎಂದು ನಿಯಮ ಹೇಳಿದರೂ ಇತ್ತೀಚೆಗೆ ಅವುಗಳ ಸಂಖ್ಯೆಯೇ ಹೆಚ್ಚು. ‘ವಯಸ್ಕರಿಗೆ ಮಾತ್ರ’ ಎಂದು ‘ಎ’ ಪ್ರಮಾಣ ಪತ್ರ ಪಡೆದ ಚಿತ್ರಗಳ ಪ್ರದರ್ಶನಕ್ಕೆ ೧೮ ವರ್ಷ ಪೂರ್ತಿಯಾಗದವರಿಗೆ ಪ್ರವೇಶ ನೀಡಿದರೆ, ಪೊಲೀಸರು ಅಂತಹ ಚಿತ್ರವನ್ನು ಮುಟ್ಟುಗೋಲು ಹಾಕುವ ಅಧಿಕಾರ ಹೊಂದಿರುತ್ತಾರೆ. ಸ್ಥಳೀಯ ಜಿಲ್ಲಾಧಿಕಾರಿಗಳು ಚಿತ್ರಮಂದಿರದ ಲೈಸನ್ಸ್ ರದ್ದು ಮಾಡಬಹುದು. ಇಂತಹ ಪ್ರಸಂಗ ಎಲ್ಲಾದರೂ ವರದಿ ಆದದ್ದು ಇದೆಯೇ?
ದಿನಪತ್ರಿಕೆಗಳಲ್ಲಿ ಇಂದು ಬಿಡುಗಡೆ ಎಂದು ಪ್ರಕಟವಾಗುವ ಚಿತ್ರಗಳ ಜಾಹೀರಾತುಗಳಲ್ಲಿ ಅವುಗಳು ಪಡೆದ ಪ್ರಮಾಣಪತ್ರವನ್ನು ಎಷ್ಟು ಹೇಳುತ್ತವೆ? ಇಂತಹ ಮಾಹಿತಿಗಳು ಬಹಳಷ್ಟು ಮಂದಿ ನಿರ್ಮಾಪಕ/ನಿರ್ದೇಶಕರಿಗೇ ಇದ್ದಂತಿಲ್ಲ. ಅವರಿಗೆ ಅದನ್ನು ತಿಳಿಯ ಹೇಳುವ ಕೆಲಸ ಆಗಬೇಕು.
” ಭಾರತದ ವಿವಿಧ ಭಾಷಾ ಚಿತ್ರಗಳಲ್ಲಿ ಭೂಗತ ಜಗತ್ತನ್ನು ತೆರೆಯ ಮೇಲೆ ಮೆರೆಸಲು ಆರಂಭವಾದ ನಂತರ ಹಿಂಸಾ ವಿಜೃಂಭಣೆಯದೇ ಕಾರುಬಾರು.”




