ನಾಗಮಂಗಲ: ತಾಲ್ಲೂಕಿನ ವಿವಿಧೆಡೆ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಬಿಂಡಿಗನವಿಲೆ ಹೋಬಳಿ ಅಣೇಚನ್ನಾಪುರ ಕೆರೆ ಕೋಡಿ ಬಿದ್ದು ನೀರು ರಸ್ತೆಯ ಮೇಲೆ ಹರಿದ ಪರಿಣಾಮ ರಸ್ತೆ ದಾಟುವಾಗ ಬೈಕ್ ಸವಾರ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಅಣೇಚನ್ನಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ತಾಲ್ಲೂಕಿನ ಕಂಬದಹಳ್ಳಿ ಗ್ರಾಮದ ರಾಮಚಂದ್ರೇಗೌಡ(೬೮) ಎಂಬ ವ್ಯಕ್ತಿಯೇ ಮೃತನಾಗಿದ್ದು, ಕಂಬದಹಳ್ಳಿಯಿಂದ ಬೆಳ್ಳೂರು ಕಡೆಗೆ ರಸ್ತೆ ದಾಟುವಾಗ ಈ ಅವಘಡ ಸಂಭವಿಸಿದೆ. ರಾತ್ರಿಯಿಡೀ ಬಿದ್ದ ಮಳೆಯಿಂದ ಅಣ್ಣೇಚನ್ನಾಪುರದ ಕೆರೆ ತುಂಬಿ ಕೋಡಿ ಹೊಡೆದಿದ್ದು, ರಸ್ತೆಯಲ್ಲಿ ನೀರು ಸಾಗಿದೆ. ನೀರಿನ ರಭಸ ಅರಿಯದ ರಾಮಚಂದ್ರೇಗೌಡ ತಮ್ಮ ಬೈಕ್‌ನೊಂದಿಗೆ ನೀರು ದಾಟಲು ಹೋಗಿದ್ದಾರೆ. ಈ ವೇಳೆ ಬೈಕ್ ಏಂಜಿನಿಗೆ ನೀರು ತಂಬಿದ ಕಾರಣ ಬೈಕ್ ನಿಂತಿದೆ. ಈ ವೇಳೆ ನೀರಿನ ರಭಸಕ್ಕೆ ರಾಮಚಂದ್ರೇಗೌಡ ಕೊಚ್ಚಿ ಹೋಗಿದ್ದಾನೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಂತರ ಬಿಂಡಿಗನವಿಲೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಕ್ಕಾಗಿ ಕಾರ್ಯಾಚರಣೆ ನಡೆಸಿದರು. ನಂತರ ಸಂಜೆ ವೇಳೆಗೆ ರಾಮಚಂದ್ರೇಗೌಡರ ಮೃತ ದೇಹ ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪತ್ತೆ ಮಾಡಿ ನೀರಿನಿಂದ ಹೊರ ತೆಗೆದು ಶವವನ್ನು ತಾಲ್ಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ಮಾಡಿ ಶವವನ್ನು ವಾರಸುದಾರರಿಗೆ ನೀಡಲಾಯಿತು.
ಮೃತ ರಾಮಚಂದ್ರೇಗೌಡರಿಗೆ ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಇದ್ದಾರೆ. ಅಣೇಚನ್ನಾಪುರ ಕೆರೆ ಕೋಡಿ ಬಿದ್ದಾಗ ಇಂತಹ ಅವಘಡಗಳು ನಡೆಯುತ್ತಿದ್ದು, ರಸ್ತೆಗೆ ಅಡ್ಡಲಾಗಿ ಮೇಲು ಸೇತುವೆ ನಿರ್ಮಾಣ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಗಳ ಕೋಡಿ: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಮಾಚನಾಯಕನಹಳ್ಳಿ, ಅಣೇಚನ್ನಾಪುರ, ಬಿಂಡಿಗನವಿಲೆ, ದಾಸರಹಳ್ಳಿ ಹಾಗೂ ಸಾತೇನಹಳ್ಳಿ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಕಳೆದ ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬುತ್ತಿದ್ದು, ಕೆಲ ಕೆರೆಗಳು ಕೋಡಿ ಹೊಡೆದಿವೆ.