Mysore
21
overcast clouds
Light
Dark

ಆಂದೋಲನ ಓದುಗರ ಪತ್ರ : 30 ಶುಕ್ರವಾರ 2022

ತುರ್ತಾಗಿ ಮಾಡುವ ಅಗತ್ಯವಿತ್ತೇ?

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಸಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮಂಗಳವಾರದವರೆಗೆ ದಾಳಿ ಮತ್ತು ಬಂಧನಗಳು ನಡೆದಿವೆ. ಬುಧವಾರ ಮುಂಜಾನೆಯೇ ಪಿಎಫ್‌ಐ ನಿಷೇಧಿಸಿದ ಆಜ್ಞೆ ಹೊರಬಿದ್ದಿದೆ. ಕೇಂದ್ರ ಸರ್ಕಾರ ಇಷ್ಟೊಂದು ತರಾತುರಿಯಲ್ಲಿ ನಿಷೇಧ ಮಾಡುವ ಅಗತ್ಯವಿತ್ತೇ? ಬಂಧಿತರನ್ನು ವಿಚಾರಣೆಗೆ ಒಳಪಡಿಸಿ, ಬಂಧಿತರಿಂದ ಪಡೆದ ಸಾಕ್ಷ್ಯಗಳ ಸತ್ಯಶೋಧನೆ ಮಾಡಿ ನಂತರ ನಿಷೇಧ ಮಾಡಬಹುದಿತ್ತು. ಶಾಂತಿ ಕದಡುವ ಯಾವುದೇ ಸಂಘಟನೆಗಳನ್ನು ನಿಷೇಧ ಮಾಡುವುದಕ್ಕೆ ಯಾರದೂ ತಕರಾರು ಇರುವುದಿಲ್ಲ. ಆದರೆ, ತರಾತುರಿಯಲ್ಲಿ ನಿಷೇಧ ಮಾಡುವುದರ ಬದಲು ತನಿಖೆ ಪೂರ್ಣಗೊಳಿಸಿ ಮಾಹಿತಿಯನ್ನು ಸಾರ್ವಜನಿಕರ ಮುಂದಿಟ್ಟು ನಿಷೇಧ ಮಾಡಿದರೆ ಸರ್ಕಾರದ ಬಗ್ಗೆ ಯಾವ ಅನುಮಾನವೂ ಬಾರದು. ಸರ್ಕಾರ ತಾನು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಾಬೀತು ಮಾಡಲು ಇಂತಹ ಸಂದರ್ಭಗಳು ಒದಗಿಬರುತ್ತವೆ. ಅದನ್ನು ಸರ್ಕಾರ ಬಳಸಿಕೊಳ್ಳಬೇಕು.
-ನಂದಕುಮಾರ್, ಸರಸ್ವತಿಪುರಂ, ಮೈಸೂರು.


ಸಾರ್ವಜನಿಕ ರುದ್ರಭೂಮಿ ಯೋಜನೆ ಕಾರ್ಯರೂಪಕ್ಕೆ ಬರಲಿ
 ರಾಜ್ಯದ ಪ್ರತಿಯೊಂದು ಗ್ರಾಮ/ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಎಲ್ಲಾ ಜಾತಿ, ಧರ್ಮದ ಬಾಂಧವರಿಗಾಗಿ ಮನುಷ್ಯ ಜಾತಿ ತಾನೊಂದೆ ವಲಂ ಎಂಬಂತೆ ಸಾರ್ವಜನಿಕ ರುದ್ರಭೂಮಿ ಹೆಸರಿನಲ್ಲಿ ಸ್ಮಶಾನ ನಿರ್ಮಾಣ ಮಾಡಲು ಸರ್ಕಾರ ಶೀಘ್ರ ಮುಂದಾಗಲಿ. ಹಳ್ಳಿಗಳಲ್ಲಿ ವಿಪರೀತವಾಗಿ ಜಾತಿ ಬೇಧ ಭಾವವಿದೆ. ದಲಿತರ ಸ್ಮಶಾನವಿದ್ದರೇ ಅದರ ಹಾಸು ಪಾಸು ಇನ್ನಿತರರ ಸವರ್ಣೀಯರ ಜಮೀನಿನಲ್ಲಿ ಹಾದು ಹೋಗಬಾರದು ಎನ್ನುವ ದಬ್ಬಾಳಿಕೆಯ ಕಟ್ಟಪ್ಪಣೆ. ಮಳೆ ಬಂದರೆ ಮೂಲ ಸೌಕರ್ಯ ವ್ಯವಸ್ಥೆ ಇಲ್ಲದೆ ಇನ್ನಷ್ಟೂ ಫಜೀತಿ.   ಈ  ಸಂಬಂಧ ಹೈಕೋರ್ಟ್
೨೦೧೯ರಲ್ಲೇ ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ಪಾಲಿಸದೆ ಹೈಕೋರ್ಟ್‌ನ ತರಾಟೆಗೆ ಒಳಗಾಗಿತ್ತು. ಸದ್ಯ, ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಸರಿ ಸುಮಾರು ಒಂದು ಸಾವಿರ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲ ಎಂಬುದು ವರದಿಯಾಗಿದ್ದು, ಜಿಲ್ಲಾಧಿಕಾರಿಗಳಿಗೆ ಜಮೀನು ಖರೀದಿಗೆ ಪ್ರಸ್ತಾವನೆ ಸಲ್ಲಿಸಲು ಕಂದಾಯ ಇಲಾಖೆ ಆದೇಶ ನೀಡಿರುತ್ತದೆ ಆದರೆ, ಅದರ ಕಾರ್ಯ ಪ್ರಗತಿ ಏನು? ಉತ್ತರವಿಲ್ಲದ ಪ್ರಶ್ನೆ. ಸದ್ಯ, ೧೨ ದಿನಗಳ ಕಾಲ ವಿಧಾನಸಭಾ ಕಲಾಪ ನಡೆದರೂ
ಚಿಂತಕರ ಚಾವಡಿಯಲ್ಲಿ ಈ ವಿಷಯವನ್ನು ಯಾವೊಬ್ಬ ಜನ ಪ್ರತಿನಿಧಿಯು ಪ್ರಸ್ತಾಪ ಮಾಡದೆ ಇದ್ದದ್ದು ನಮ್ಮಿಂದ ಆಯ್ಕೆ ಆಗಿರುವವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.  ಮೂಲಭೂತ ಅಗತ್ಯವಾಗಿರುವ  ಸಾರ್ವಜನಿಕ ರುದ್ರಭೂಮಿ ಯೋಜನೆಯನ್ನು ತಡ ಮಾಡದೇ ಸರ್ಕಾರ ಕಾರ್ಯರೂಪಕ್ಕೆ ತರಬೇಕಿದೆ.
-ಅನಿಲ್ ಕುಮಾರ್, ನಂಜನಗೂಡು..

ಪಿಎಫ್‌ಐ ನಿಷೇಧ ಸ್ವಾಗತಾರ್ಹ
 ದೇಶದಾದ್ಯಂತ ಪಿಎಫ್‌ಐ ಸಂಘಟನೆಯನ್ನು ನಿಷೇಧ  ಮಾಡಿ ಕೇಂದ್ರ ಸರ್ಕಾರ ಆಜ್ಞೆ ಹೊರಡಿಸಿದೆ. ಇದು ಅತ್ಯಂತ ಅವಶ್ಯಕವಾದ ವಿಚಾರವಾಗಿದೆ. ಇದೇ ವಿಚಾರವಾಗಿ ಅದರ ಕಚೇರಿಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ.
ಈ ಸಂಘಟನೆಯ ನಿಷೇಧ ಅತ್ಯಂತ ಜರೂರಾಗಿತ್ತು. ವಿದ್ಯಾರ್ಥಿಗಳಲ್ಲಿ ಒಡಕು ಉಂಟು ಮಾಡುವ, ನಮ್ಮ ಮಗ್ಗಲು ಮುಳ್ಳಾದ ಪಾಕಿಸ್ತಾನಕ್ಕೆ ಎಲ್ಲ ಬೆಂಬಲಗಳನ್ನು
ಕೊಡುವ ಈ ವಿದ್ಯಾರ್ಥಿ ಸಂಘಟನೆಗಳು ಜನತೆಯಲ್ಲಿ ಉಂಟುಮಾಡುತ್ತಿರುವ ಭಯದ ವಾತಾವರಣ ಮತ್ತು ಪರಿಣಾಮಗಳನ್ನು ಊಹಿಸಲು ಅಸಾಧ್ಯ. ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದ್ದು ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಸ್ವಾಗತಾರ್ಹ ವಿಚಾರವಾಗಿದೆ. ಇಂತಹ ದಿಟ್ಟ ನಿರ್ಧಾರ ಕೈಗೊಂಡ   ಸರ್ಕಾರದ ಕ್ರಮವನ್ನು ಸ್ವಾಗತಿಸೋಣ.
-ಬೇಲೂರು ದ.ಶಂ. ಪ್ರಕಾಶ್, ಮೈಸೂರು.


Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ