ಬೆಂಗಳೂರು : ಈಗ ಯೂಟ್ಯೂಬರ್ ಗಳ ಕಾಲ. ಇದಕ್ಕೆ ಭಾಷೆ, ಜನಾಂಗ, ದೇಶ, ಗಡಿ ಇತ್ಯಾದಿಗಳ ಹಂಗಿಲ್ಲ. ಕರ್ನಾಟಕದಲ್ಲೂ ಹಲವಾರು ಯೂಟ್ಯೂಬರ್ ಗಳು ಅತ್ಯಂತ ಜನಪ್ರಿಯರಾಗಿದ್ದಾರೆ. ಈ ಪೈಕಿ ದೇಶವಿದೇಶಗಳಿಗೆ ಪ್ರಯಾಣಿಸಿ ತಮ್ಮದೇ ಶೈಲಿಯಲ್ಲಿ ಅಲ್ಲಿನ ಪರಿಸರ, ಸಂಸ್ಕೃತಿ, ಆಹಾರ-ಆಚಾರ-ವಿಚಾರಗಳು, ಸಂಚಾರಿ ವ್ಯವಸ್ಥೆ ಇತ್ಯಾದಿಗಳ ಕುರಿತು ಮಾಹಿತಿ ಹಂಚಿಕೊಳ್ಳುವ ಡಾ. ಬ್ರೊ ಎಂದೇ ಜನಪ್ರಿಯರಾಗಿರುವ ಗಗನ್ ಶ್ರೀನಿವಾಸ್ ಕೂಡಾ ಒಬ್ಬರು. ಗಗನ್ ಶ್ರೀನಿವಾಸ್ ಇತ್ತೀಚೆಗೆ ಚೀನಾ ಕುರಿತು ಹಂಚಿಕೊಂಡಿದ್ದ ವಿಡಿಯೊ ಭಾರಿ ವೈರಲ್ ಆಗಿದೆ. ಆದರೆ ಅದರಿಂದಾಗಿ ಈಗ ಬಲಪಂಥೀಯರಿಂದ ಅವರಿಗೆ ದೇಶದ್ರೋಹಿಯ ಪಟ್ಟ ಸಿಕ್ಕಿದೆ.
ಅತ್ಯಂತ ಹಿಂದುಳಿದ ದೇಶಗಳಿಂದ ಹಿಡಿದು ರಷ್ಯಾದಂಥ ಮುಂದುವರಿದ ದೇಶದವರೆಗೂ ಸುತ್ತಾಡಿ, ಆ ದೇಶಗಳ ಕುರಿತು ಮಾಹಿತಿ ಹಂಚಿಕೊಳ್ಳುವ ಮೂಲಕ ಅತ್ಯಂತ ಜನಪ್ರಿಯ ಯೂಟ್ಯೂಬರ್ ಆಗಿ ಪ್ರವರ್ಧಮಾನಕ್ಕೆ ಬಂದಿರುವ ಗಗನ್ ಶ್ರೀನಿವಾಸ್, ಅದೇ ಬಗೆಯಲ್ಲಿ ಚೀನಾದಲ್ಲಿನ ಅಭಿವೃದ್ಧಿಗಳ ಕುರಿತೂ ವಿಶ್ಲೇಷಿಸಿದ್ದರು. ಮಾತಾಡುವಾಗ ” ಜಾತಿ, ಜಾತಿ ಎಂದು ಕಚ್ಚಾಡುವ ಭಾರತೀಯ ರಾಜಕಾರಣಿಗಳಿಗೆ ಹೋಲಿಸಿದರೆ, ಚೀನಾ ರಾಜಕಾರಣಿಗಳಿಗೆ ಅವರ ದೇಶದ ಪ್ರಗತಿಯೇ ಆದ್ಯತೆ” ಎಂದೂ ಹೇಳಿದ್ದರು. ಇಷ್ಟು ಮಾತ್ರವಲ್ಲದೆ, ಚೀನಾದಂತೆ ಭಾರತವೂ ಪ್ರಗತಿ ಸಾಧಿಸಬೇಕಾದರೆ, ಇನ್ನೂ ಕನಿಷ್ಠ 70 ವರ್ಷವಾದರೂ ಬೇಕಾಗುತ್ತದೆ ಎಂಬ ಕಹಿ ಸತ್ಯವನ್ನೂ ಹೇಳಿದ್ದರು.
ಹಾಗೆಯೇ, ಚೀನಾ ಮಕ್ಕಳು ಎಳವೆಯಲ್ಲೇ ಕೌಶಲವನ್ನು ರೂಢಿಸಿಕೊಳ್ಳುತ್ತಿರುವ ಕುರಿತು ಅಪಾರ ಮೆಚ್ಚುಗೆ ಸೂಚಿಸಿರುವ ಗಗನ್ ಶ‍್ರೀನಿವಾಸ್, ಭಾರತದಲ್ಲಿನ ಮಕ್ಕಳಿಗೆ ಇಂಥ ಅವಕಾಶವೇ ದೊರೆಯುತ್ತಿಲ್ಲ ಎಂದೂ ಬೇಸರ ವ್ಯಕ್ತಪಡಿಸಿದ್ದರು.
ಆದರೆ, ಬಲಪಂಥೀಯರಿಗೆ ಚೀನಾದ ಕುರಿತು ಗಗನ್ ಶ್ರೀನಿವಾಸ್ ವ್ಯಕ್ತಪಡಿಸಿರುವ ಮೆಚ್ಚುಗೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಮೇಲೆ ಮುಗಿಬಿದ್ದಿರುವ ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು, ಚೀನಾ ನೆಲದಲ್ಲಿ ನಿಂತು ಭಾರತವನ್ನು ಹೀಯಾಳಿಸಿದ ಗಗನ್ ಶ್ರೀನಿವಾಸ್ ದೇಶ ದ್ರೋಹಿ ಎಂದುನಿರಂತರ ದಾಳಿ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ತನ್ನನ್ನು ಮೆಚ್ಚಿಕೊಂಡಿದ್ದ ಜನರೇ ಹೀಗೇ ತನ್ನ ಮೇಲೆ ದಾಳಿ ನಡೆಸುತ್ತಿರುವುದನ್ನು ಕಂಡು ಗಗನ್ ಶ್ರೀನಿವಾಸ್ ಕಕ್ಕಾಬಿಕ್ಕಿಯಾಗಿದ್ದಾರೆ.
ಆದರೆ, ಗಗನ್ ಶ್ರೀನಿವಾಸ್ ಅವರ ವಿಡಿಯೊವನ್ನು ಸಮಚಿತ್ತದಿಂದ ವೀಕ್ಷಿಸಿರುವ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಬೆಂಬಲಕ್ಕೆ ನಿಂತಿದ್ದು, ಗಗನ್ ಶ್ರೀನಿವಾಸ್ ಹೇಳಿರುವ ಕಹಿ ಸತ್ಯವನ್ನು ಅರಗಿಸಿಕೊಳ್ಳಿ ಎಂದು ಅವರ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಕೆಲವು ಸಾಮಾಜಿಕ ಬಳಕೆದಾರರು, “ಡಾ. ಬ್ರೊ ಹೇಳಿದ್ದನ್ನು ಅರ್ಥ ಮಾಡಿಕೊಳ್ರಯ್ಯ” ಎಂದು ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಚುಚ್ಚಿದ್ದಾರೆ.
ಗಗನ್ ಶ್ರೀನಿವಾಸ್ ಅದೇನು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಈ ಪರಿ ಅವರ ಮೇಲೆ ಮುಗಿಬೀಳಲಾಗುತ್ತಿದೆ ಎಂದು ಹಲವಾರು ಆತಂಕ ವ್ಯಕ್ತಪಡಿಸಿದ್ದಾರೆ. ಜನರು ಸರಳ ಸತ್ಯವನ್ನೂ ಅರಗಿಸಿಕೊಳ್ಳಲಾಗದ ಸ್ಥಿತಿಯನ್ನು ತಲುಪಿರುವುದರ ಕುರಿತು ಹಲವರು ಇದು ದೇಶದಲ್ಲಿ ಸಹಿಷ್ಣುತೆಯ ಕುಸಿತದ ಸಂಕೇತ ಎಂದೂ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಡಾ. ಬ್ರೊ ಎಂದೇ ಖ್ಯಾತರಾಗಿರುವ ಗಗನ್ ಶ್ರೀನಿವಾಸ್ ತಾವು ಬಿಚ್ಚಿಟ್ಟ ವಾಸ್ತವ ಸತ್ಯದಿಂದಾಗಿ ವಿವಾದದ ಕೇಂದ್ರ ಬಿಂದುವಾಗಿ ಬದಲಾಗಿದ್ದಾರೆ. ಆ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ರಾಜಕೀಯ ಗ್ರಹಿಕೆ, ಪೂರ್ವಗ್ರಹಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.