ಹಾವೇರಿ: ಬಿಜೆಪಿಯ ಮಾಜಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಅವರನ್ನು ಬಿಜೆಪಿ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಅನೇಕ ಪ್ರಯತ್ನ ಮಾಡಿದ್ದೊ. ಆದರೆ, ಇದೀಗ ಅವರು ನಮ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿರುವುದು ಅತಿ ದೊಡ್ಡ ದುರಂತ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಯಾರೂ ಅಭ್ಯರ್ಥಿ ಇರಲಿಲ್ಲ. ಆ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಸುಲಭವಾಗಿ ಗೆಲ್ಲಬಹುದು. ಈಗಲೂ ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಭಾವ ಇದೆ ಎಂದರು.
ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೂರು ಪಕ್ಷಗಳು ಸ್ಪರ್ಧಿಸಿದ್ದಾಗ ಕುಮಾರಸ್ವಾಮಿ ಅವರು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಈ ಉಪ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.