ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಹಾವು ಮುಂಗೂಸಿಯಂತಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.
ನವದೆಹಲಿ ಪ್ರವಾಸದಲ್ಲಿರುವ ವಿಜಯೇಂದ್ರ ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಕಚೇರಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಸಂಸದರಾದ ಪಿ.ಸಿ.ಮೋಹನ್, ಗದ್ದಿಗೌಡರ್, ಮಾಜಿ ಸಂಸದ ಬಿ.ವಿ.ನಾಯಕ್ ಸೇರಿದಂತೆ ಅನೇಕರು ಭೇಟಿಯಾಗಿದ್ದರು.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಯತ್ನಾಳ್ ಮತ್ತು ಬಿ.ವೈ.ವಿಜಯೇಂದ್ರ ಮುಖಾಮುಖಿಯಾಗಿರುವುದು ಇದೇ ಮೊದಲು.
ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಡುವಿರೋಧಿಯಾಗಿರುವ ಯತ್ನಾಳ್ ವಿಜಯೇಂದ್ರ ಆಯ್ಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಯತ್ನಾಳ್ ಅವರನ್ನು ವಿಜಯೇಂದ್ರ ಭೇಟಿ ಮಾಡಲು ಯತ್ನಿಸಿದಾಗ ನನ್ನ ಮನೆಗೆ ಅವರು ಬರುವ ಅಗತ್ಯವಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು.
ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇಬ್ಬರ ನಡುವೆ ಸಂಧಾನ ನಡೆಸಿದ್ದು, ಮೊದಲ ಬಾರಿಗೆ ಮುಖಾಮುಖಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯತ್ನಾಳ್ ಜೊತೆಗೆ ವಿಜಯೇಂದ್ರ ಅಧ್ಯಕ್ಷರಾದ ನಂತರ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕೂಡ ಸಭೆಯಲ್ಲಿ ಇದ್ದದು ವಿಶೇಷ.