ಬೆಂಗಳೂರು: ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ 45 ವರ್ಷದ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ, ಈ ದುಃಖದ ಸಂದರ್ಭದಲ್ಲಿ ಸರ್ಕಾರ ಅವರ ಕುಟುಂಬದ ಜೊತೆ ನಿಲ್ಲುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ಮಹಿಳೆಯನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ಈ ನೋವು ತಾಳಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಸರ್ವ ಪ್ರಯತ್ನ ಮಾಡುತ್ತಿದ್ದು, ಸರ್ಕಾರ ಸಂವೇದನಾತ್ಮಕವಾಗಿದೆ. ಜನರು ಮಳೆಗಾಲ ಆರಂಭವಾಗುವವರೆಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಎಪಿಸಿಸಿಎಫ್ ದರ್ಜೆಯ ಅಧಿಕಾರಿ ನೇತೃತ್ವದ ತಂಡವನ್ನು ಹಾಸನ ಜಿಲ್ಲೆಗೆ ಕಳುಹಿಸಿ, ಅಧ್ಯಯನ ಮಾಡಿ ಮಾನವ-ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕಲು ಸೂಚಿಸುವುದಾಗಿ ಅವರು ಹೇಳಿದ್ದಾರೆ.
ಇತ್ತೀಚೆಗೆ ಬೇಲೂರು ತಾಲೂಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಯುವಕನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ತರುವಾಯ, ಬೇಲೂರು ಪಟ್ಟಣದಲ್ಲಿ ಸಭೆ ನಡೆಸಿ, ಜನರ ಅಹವಾಲು ಆಲಿಸಿದ್ದೇನೆ. ಜನರು ಶಾಂತಿಯಿಂದ ವರ್ತಿಸಿಬೇಕು ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರ-ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಲು ಭದ್ರಾ ಅಭಯಾರಣ್ಯದಲ್ಲಿ ಆನೆ ಧಾಮ ನಿರ್ಮಿಸುವ ಘೋಷಣೆಯನ್ನು ಬಜೆಟ್ ನಲ್ಲಿಯೇ ಮಾಡಲಾಗಿದೆ. ಆದಷ್ಟು ಶೀಘ್ರ ಆನೆ ಧಾಮ ನಿರ್ಮಿಸಿ ಮಾನವ-ಆನೆ ಸಂಘರ್ಷ ನಿಯಂತ್ರಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.