Mysore
15
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಚುನಾವಣೆ ಗೆಲ್ಲುವುದು ದೊಡ್ಡ ಸವಾಲು: ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಪ್ರಧಾನಿ ಅಭ್ಯರ್ಥಿಯಾದರೆ ಒಳ್ಳೆಯದು. ಆದರೆ, ಮೊದಲು ಪ್ರಾಯೋಗಿಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬಹುಮತ ಗಳಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಿಯಾಂಕ್ ಖರ್ಗೆ, ಪ್ರತಿಪಕ್ಷಗಳ ಮುಂದಿರುವ ಅತಿ ದೊಡ್ಡ ಸವಾಲು ಇದು ಎಂದಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಖರ್ಗೆ ಅವರು ಇಂಡಿಯಾದ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಹೇಳಿದ್ದರು. ಅವರು ದೇಶದ “ಮೊದಲ ದಲಿತ ಪ್ರಧಾನಿ” ಆಗಬಹುದು ಎಂದಿದ್ದರು. ಆದರೆ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ವಿರೋಧ ಪಕ್ಷಗಳ ಸಭೆಯ ನಂತರ ಎಂಡಿಎಂಕೆ ನಾಯಕ ವೈಕೊ ಸೇರಿದಂತೆ ಹಲವು ನಾಯಕರು ಇದನ್ನು ಖಚಿತಪಡಿಸಿದರು. ಆದರೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದ ಖರ್ಗೆ, ಮೊದಲು ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯ. ಮೈತ್ರಿ ಬಲವನ್ನು ಹೆಚ್ಚಿಸುವುದು ಮುಖ್ಯ, ಉಳಿದೆಲ್ಲವನ್ನೂ ನಂತರ ನಿರ್ಧರಿಸಬಹುದು ಎಂದು ನಾಯಕರಿಗೆ ಹೇಳಿದ್ದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡಿಗನೊಬ್ಬ ಪ್ರಧಾನಿಯಾದರೆ ಬೇಡ ಎನ್ನುತ್ತೀರಾ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. “ಅವರು (ಮಲ್ಲಿಕಾರ್ಜುನ ಖರ್ಗೆ) ಪ್ರಧಾನಿ ಅಭ್ಯರ್ಥಿ ಆದರೆ ಒಳ್ಳೆಯದು, ಆದರೆ ನಾವು ಮೊದಲು ನಮ್ಮ ಮುಂದಿರುವ ಪ್ರಾಯೋಗಿಕ ಸವಾಲುಗಳನ್ನು ಎದುರಿಸಬೇಕು, ನಾವು ಕೇವಲ ಹಗಲುಗನಸು ಕಾಣಬಾರದು ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!