Mysore
26
few clouds

Social Media

ಶನಿವಾರ, 15 ಮಾರ್ಚ್ 2025
Light
Dark

ಹೊಸ 7 ವಿವಿಗಳನ್ನು ಮುಚ್ಚುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ 7 ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ನಾವು ಎಲ್ಲಿಯೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕ ಡಾ.ಸಿ.ಎನ್‌ ಅಶ್ವಥ್‌ನಾರಾಯಣ ಹೊಸ ವಿವಿಗಳನ್ನು ಮುಚ್ಚಲು ಸರ್ಕಾರ ಮುಂದಾಗಿರುವ ಕುರಿತು ನಿಲುವಳಿ ಸೂಚನೆ ಮಂಡಿಸಲು ಮುಂದಾದರು.

ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ಹೊಸ ವಿವಿಗಳನ್ನು ಮುಚ್ಚುವಂತಹ ಯಾವುದೇ ತೀರ್ಮಾನವನ್ನು ಸರ್ಕಾರ ಮಾಡಿಲ್ಲ. ಯಾವುದೇ ಆತಂಕ ಬೇಡ ಎಂದರು.

ಈ ಹಿಂದೆ ಹೊಸ ವಿವಿಗಳನ್ನು ಮುಚ್ಚಬೇಕೋ ಅಥವಾ ಬೇಡವೋ ಎಂಬುದರ ಕುರಿತು ಉಪಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿದೆ. ವರದಿ ಸಲ್ಲಿಕೆ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಆದ್ದರಿಂದ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವುದು ಸರಿಯಲ್ಲ ಎಂದರು.

ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಆರ್‌.ಅಶೋಕ್‌, ಈ ವಿಚಾರವಾಗಿ ನಿಮ್ಮ ಸರ್ಕಾರದಲ್ಲೆ ದ್ವಂದ್ವ ನಿಲುವು ಇದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಮುಚ್ಚುತ್ತೇವೆ ಅಂತಾರೆ. ಸಿಎಂ ಇಲ್ಲ ಎನ್ನುತ್ತಾರೆ. ಬಾಗಿಲು ಮುಚ್ಚುತ್ತೇವೆ, ಬೀಗ ಹಾಕುವುದಿಲ್ಲ ಎಂಬಂತಿದೆ ನಿಮ್ಮ ಹೇಳಿಕೆ ಎಂದು ಕಿಚಾಯಿಸಿದರು.

ಅಶೋಕ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಸ್ತಾಪಿಸುವ ವಿಷಯ ಸಾರ್ವಜನಿಕ ಮಹತ್ವವನ್ನು ಹೊಂದಿರಬೇಕು. ಸಂಪುಟ ಉಪಸಮಿತಿಯ ವರದಿ ಇನ್ನು ಬಂದಿಲ್ಲ. ಈಗ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ವಾದಿಸಿದರು.

ಅಂತಿಮವಾಗಿ ಸ್ಪೀಕರ್‌ ಖಾದರ್‌ ಅವರು, ನಿಯಮ 69ರ ಅಡಿಯಲ್ಲಿ ಈ ಕುರಿತು ಮುಂದೆ ಅಲ್ಪ ಕಾಲಾವಧಿಯ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.

Tags: